ತಿರುಪತಿ ತಿಮ್ಮಪ್ಪನ ಲಡ್ಡಿಗೆ ಮಂಗಳೂರು ನಂದಿನಿ ಕೇಂದ್ರದ ತುಪ್ಪ
ಮಂಗಳೂರು : ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕಾಗಿ ನಗರದ ನಂದಿನಿ ಹಾಲು ಉತ್ಪಾದನಾ ಕೇಂದ್ರದಿಂದ ನಂದಿನಿ ತುಪ್ಪವನ್ನು ಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಇದುವರೆಗೆ ಕರಾವಳಿಯ ಆರಾಧ್ಯ ದೇವರಾದ ಧರ್ಮಸ್ಥಳ ಮಂಜುನಾಥ, ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯ ಮತ್ತಿತರ ಪ್ರಸಿದ್ಧ ಯಾತ್ರಾಸ್ಥಳಗಳಿಗೆ ತುಪ್ಪ ಸರಬರಾಜು ಮಾಡುತ್ತಿದ್ದ ಹಾಲು ಉತ್ಪಾದನಾ ಕೇಂದ್ರ ಇದೀಗ ತಿರುಪತಿಗೆ ತುಪ್ಪ ಪೂರೈಸಲಿದೆ.
ಡಿಸೆಂಬರ್ 29 ರ ಶನಿವಾರ ಬೆಳಗ್ಗೆ ಹಾಲು ಒಕ್ಕೂಟದ ನಂದಿನಿ ತುಪ್ಪ ಹೊತ್ತ ಲಾರಿ ನಗರದಿಂದ ತಿರುಪತಿಗೆ ಪ್ರಯಾಣ ಆರಂಭಿಸಿತು. ದಕ್ಷಿಣ ಕನ್ನಡದ ಹಾಲು ಒಕ್ಕೂಟದ ಅಧ್ಯಕ್ಷ ಕೆ. ದಿವಾಕರ್ ತುಪ್ಪ ಹೊತ್ತೊಯ್ಯುತ್ತಿರುವ ಪ್ರಥಮ ಲಾರಿಗೆ ಹಸಿರು ನಿಶಾನೆ ತೋರಿಸಿದರು.
ಇತರ ಹಾಲು ಉತ್ಪನ್ನಗಳ ಕೇಂದ್ರಕ್ಕಿಂತ ಕಿಲೋ ಒಂದಕ್ಕೆ 2 ರೂಪಾಯಿ ಹೆಚ್ಚು ಬೆಲೆ ತೆತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ತುಪ್ಪವನ್ನು ಖರೀದಿಸಲು ತಿರುಪತಿ ದೇವಳದ ಆಡಳಿತ ಮಂಡಳಿ ನಿರ್ಧರಿಸಿರುವುದು ಒಕ್ಕೂಟದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ದಿವಾಕರ್ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು. ಕಳೆದ ವರ್ಷವಷ್ಟೇ ದಕ್ಷಿಣ ಕನ್ನಡ ಹಾಲು ಒಕ್ಕೂಟ ಗುಣಮಟ್ಟಕ್ಕಾಗಿ ಐಎಸ್‌ಓ ಪ್ರಮಾಣ ಪತ್ರ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications