ನೀರಿನ ದರ ಏರಿಕೆಗೆ ಮುಖ್ಯಮಂತ್ರಿ ಕೃಷ್ಣರಿಂದ ತಾತ್ಕಾಲಿಕ ತಡೆ
ಬೆಂಗಳೂರು : ಬೆಂಗಳೂರು ಜಲಮಂಡಳಿ ಡಿಸೆಂಬರ್ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಏರಿಸಿದ್ದ ನೀರಿನ ದರವನ್ನು ಜಾರಿಮಾಡದಂತೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಾತ್ಕಾಲಿಕವಾಗಿ ತಡೆ ನೀಡಿದ್ದಾರೆ. ಡಿ.22ರಂದು ಬೆಂಗಳೂರು ಜಲ ಮಂಡಳಿ ಶೇ.71ರಷ್ಟು ನೀರಿನ ದರ ಏರಿಸಿತ್ತು.
ಜಲಮಂಡಳಿಯ ಈ ಕ್ರಮದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ನಗರದ ಶಾಸಕರು, ಮೇಯರ್ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಗುರುವಾರ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು, ಬೆಲೆ ಏರಿಕೆ ಜಾರಿಗೆ ತಾತ್ಕಾಲಿಕ ತಡೆ ನೀಡಿ, ವೈಜ್ಞಾನಿಕವಾಗಿ ನೀರಿನ ದರ ಏರಿಸುವಂತೆ ಸೂಚಿಸಿದರು.
ಜನ ಸಾಮಾನ್ಯರು ಹಾಗೂ ಜಲಮಂಡಳಿಗೆ ಅನುಕೂಲವಾಗುವಂತೆ ನೀರು ದರ ಪರಿಷ್ಕರಿಸುವ ಹೊಣೆಗಾರಿಕೆಯನ್ನು ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಅವರ ಹೆಗಲಿಗೆ ಹೊರಿಸಿದರು. ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್, ನಫೀಸಾ ಫಜಲ್, ಸಂಸತ್ ಸದಸ್ಯ ಜಾಫರ್ ಷರೀಫ್, ಶಾಸಕರಾದ ರಾಮಲಿಂಗಾರೆಡ್ಡಿ, ಸೋಮಣ್ಣ, ದಿನೇಶ್ ಗುಂಡೂರಾವ್, ಮೇಯರ್ ಚಂದ್ರಶೇಖರ್ ಮೊದಲಾದವರು ಪಾಲ್ಗೊಂಡಿದ್ದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications