ಕೋಮುಶಕ್ತಿಗಳಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ- ಕೃಷ್ಣ
ಬೆಂಗಳೂರು : ಕೆಲವು ರಾಜಕೀಯ ಪಕ್ಷಗಳು ಹಾಗೂ ಮೂಲಭೂತವಾದಿ ಸಂಸ್ಥೆಗಳಿಂದ ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕಲಕುವ ಮೂಲಕ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನಾ ದಿನದ ಆಚರಣೆಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದ ಕೃಷ್ಣ ಅವರು, ರಾಜ್ಯದಲ್ಲಿನ ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರವನ್ನು ಬಲಿಪಶು ಮಾಡುವ ಪ್ರಯತ್ನಗಳು ನಡೆದಿವೆ ಎಂದು ಯಾವ ಪಕ್ಷ ಅಥವಾ ಸಂಘಟನೆಯ ಹೆಸರನ್ನು ಉಲ್ಲೇಖಿಸದೆ ಹೇಳಿದರು.
ಕೋಮು ಸಾಮರಸ್ಯವನ್ನು ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಹಾಗೂ ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನಗಳನ್ನು ನಡೆಸುತ್ತದೆ. ಶಾಂತಿ, ಸೌಹಾರ್ದತೆ ಕಾಪಾಡಲು ಜನತೆ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಕೋಮು ಸೌಹಾರ್ದತೆ, ಶಾಂತಿಗೆ ಕರ್ನಾಟಕ ಹೆಸರು ಪಡೆದಿದ್ದು , ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿವೆ. ಕೊಡಗು ಹಾಗೂ ಹುಬ್ಬಳ್ಳಿಯಲ್ಲಿನ ಘಟನೆಗಳ ಹಿಂದೆ ಇಂಥ ಶಕ್ತಿಗಳ ಪ್ರಯತ್ನವಿದೆ. ಇಂಥ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದು ಎಂದು ಕೃಷ್ಣ ಎಚ್ಚರಿಸಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications