ಕಾಗಿನೆಲೆ, ಪಾಜಕ ಅಭಿವೃದ್ಧಿಗೆ ಕೇಂದ್ರಸಚಿವರಿಂದ 4 ಭರವಸೆ
ಉಡುಪಿ : ಕನಕದಾಸರ ಕಾಗಿನೆಲೆ ಕ್ಷೇತ್ರ ಮತ್ತು ಮಧ್ವಾಚಾರ್ಯರ ಜನ್ಮ ಸ್ಥಳವಾದ ಪಾಜಕ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರಸರಕಾರವು ಒಟ್ಟು 1.05 ಕೋಟಿ ರೂಪಾಯಿ ನೆರವು ನೀಡುವುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಅನತ ಕುಮಾರ್ ಭರವಸೆ ನೀಡಿದ್ದಾರೆ.
ಅವರು ಗುರುವಾರ ಕನಕ ಮಂಟಪದ ಉದ್ಘಾಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸಂದರ್ಭೋಚಿತವಾಗಿ ಸಚಿವರು ನಾಲ್ಕು ಭರವಸೆಗಳನ್ನು ಘೋಷಿಸಿದರು.
- ಕಾಗಿನೆಲೆಯನ್ನು ಪ್ರವಾಸೀ ಕ್ಷೇತ್ರವನ್ನಾಗಿ ರೂಪಿಸಲು 70 ಲಕ್ಷ ರೂಪಾಯಿ ನೆರವು ನೀಡಲಾಗುವುದು. ಅಲ್ಲದೆ ಕಾಗಿನೆಲೆಯಲ್ಲಿ ವ್ಯವಸ್ಥಿತವಾದ ಯಾತ್ರೀ ನಿವಾಸವೊಂದನ್ನು ನಿರ್ಮಿಸಲಾಗುವುದು.
- ಪಾಜಕ ಕ್ಷೇತ್ರದಲ್ಲಿ ರಸ್ತೆ , ಕುಡಿಯುವ ನೀರು ಮತ್ತಿತರ ಮೂಲಭೂತ ಸೌಕರ್ಯಗಳಿಗಾಗಿ 35 ಲಕ್ಷ ರೂಪಾಯಿ ಗಳನ್ನು ಹುಡ್ಕೋ ವತಿಯಿಂದ ಮಂಜೂರು ಮಾಡಲಾಗುವುದು.
- ಉಡುಪಿಯನ್ನು ಆದರ್ಶ ಸಾಂಸ್ಕೃತಿಕ ನಗರವನ್ನಾಗಿ ಮಾಡುವ ಯೋಜನೆಯನ್ನೂ ಕೇಂದ್ರ ಕೈಗೆತ್ತಿಕೊಳ್ಳಲಿದೆ. ನಗರದಲ್ಲಿ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ 14 ಕೋಟಿ ರೂಪಾಯಿಗಳನ್ನು ಕೇಂದ್ರ ಮಂಜೂರು ಮಾಡಲಿದೆ.
- ಇದಲ್ಲದೆ, ರಾಜ್ಯದಲ್ಲಿ ನಿರ್ಮಾಣವಾಗಿರುವ ಏಳು ಹೊಸ ಜಿಲ್ಲಾ ಕೇಂದ್ರಗಳಿಗೆ 320 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದ್ದು ಈಗಾಗಲೇ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಗೆ 40 ಕೋಟಿ ರೂಪಾಯಿ ನೆರವು ನೀಡಲಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications