ರಣಜಿ : ಗೋವಾ ವಿರುದ್ಧ ಕರ್ನಾಟಕಕ್ಕೆ ಅರ್ಹ ಜಯ
ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಪ್ರವಾಸಿ ಗೋವಾ ವಿರುದ್ಧ 9 ವಿಕೆಟ್‌ಗಳ ಅರ್ಹ ಜಯ ಸಂಪಾದಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಗೋವಾ ತಂಡವನ್ನು ಕೇವಲ 80 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕದ ವೇಗದ ಬೌಲರ್‌ಗಳು, ಎರಡನೇ ಇನ್ನಿಂಗ್ಸ್‌ನಲ್ಲಿ ಗೋವಾವನ್ನು 198ಕ್ಕೆ ನಿಯಂತ್ರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್ನುಗಳ ಮುನ್ನಡೆ ಪಡೆದಿದ್ದ ಕರ್ನಾಟಕ ತಂಡ ಗೆಲುವಿಗೆ ಅಗತ್ಯವಾಗಿದ್ದ 65 ರನ್ನುಗಳನ್ನು ಒಂದು ವಿಕೆಟ್ ಕಳೆದುಕೊಂಡು 11.2 ಓವರ್‌ಗಳಲ್ಲಿ ಗಳಿಸುವ ಮೂಲಕ ಅರ್ಹ ಜಯ ದಾಖಲಿಸಿತು.
ಬುಧವಾರದ ಆಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 159ರನ್ ಗಳಿಸಿದ್ದ ಗೋವಾ ತಂಡವನ್ನು ಇಂದು 198 ರನ್‌ಗಳಿಗೆ ಕರ್ನಾಟಕ ಆಲೌಟ್ ಮಾಡಿತು. ಕರ್ನಾಟಕ ಪರ ವೇಗದ ಬೌಲರ್‌ಗಳಾದ ವೆಂಕಟೇಶ ಪ್ರಸಾದ್, ದೊಡ್ಡ ಗಣೇಶ್ ಹಾಗೂ ಎನ್.ಸಿ. ಅಯ್ಯಪ್ಪ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೂವರೂ ತಲಾ 3 ವಿಕೆಟ್ ಪಡೆದಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸುನಿಲ್ ಜೋಷಿ ನಾಲ್ಕು ವಿಕೆಟ್ ಗಳಿಸಿದರು. ದೊಡ್ಡ ಗಣೇಶ್ ಹಾಗೂ ಅಯ್ಯಪ್ಪ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.
ಬ್ಯಾಟಿಂಗ್‌ನಲ್ಲಿ ಕರ್ನಾಟಕ ತಂಡದ ನಾಯಕ ಜೆ. ಅರುಣ್‌ಕುಮಾರ್ ಹಾಗೂ ಬ್ಯಾರಿಂಗ್ಟನ್ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ 77 ರನ್ ಗಳಿಸಿದ್ದ ನಾಯಕ ಅರುಣ್ ಕುಮಾರ್ ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಗಳಿಸಿದರೆ, ಬ್ಯಾರಿಂಗ್‌ಟನ್ ಮೊದಲ ಇನ್ನಿಂಗ್ಸ್‌ನಲ್ಲಿ 54 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾಗದೆ 13 ರನ್ ಮಾಡಿದರು. ಇತ್ತೀಚೆಗೆ ಬೆಂಗಳೂರಿನಲ್ಲೇ ನಡೆದ ಪಂದ್ಯದಲ್ಲಿ ಕರ್ನಾಟಕ ಇದೇ ಟೂರ್ನಿಯಲ್ಲಿ ಕೇರಳ ವಿರುದ್ಧವೂ ಜಯ ಸಾಧಿಸಿತ್ತು.
ಸಂಕ್ಷಿಪ್ತ ಸ್ಕೋರು : ಗೋವಾ ಮೊದಲ ಇನ್ನಿಂಗ್ಸ್ 80 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 198. ಕರ್ನಾಟಕ ಮೊದಲ ಇನ್ನಿಂಗ್ಸ್ 214 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 68.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications