‘ಗುಡಿಯನೆಂದು ಕಟ್ಟದಿರಿ’
ಬೆಂಗಳೂರು : ಗುಡಿ ಗೋಪುರದ ವಿಪರ್ಯಾಸ, ರಾಜಕಾರಣದ ದುರಂತ, ಇನ್ನೂ ಪ್ರಸ್ತುತವಾಗಿರುವ ನೆಹರೂ ಅವರ ಕನಸುಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯದ ದಿನಗಳು... ಇನ್ಫೋಸಿಸ್ ಟೆಕ್ನಾಲಜೀಸ್ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಮಾತನಾಡುವ ಮೂಡಿನಲ್ಲಿದ್ದರು. ಅದು ರಾಜಕಾರಣಿಗಳ ಭಾಷಣವಲ್ಲ ; ಯಶಸ್ವಿ ಉದ್ಯಮಿಯಾಬ್ಬ ರಾಷ್ಟ್ರದ ಬಗೆಗೆ ನಡೆಸುವ ಹಿತ ಚಿಂತನೆ.
‘ವಿದ್ಯಾರ್ಥಿಗಳ ಹೊರತು ದೇಶಕ್ಕೆ ಬೇರೆ ಭರವಸೆಯೇ ಇಲ್ಲ ! ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯ್ಯಲ್ಲಿದೆ’ ಎಂದರು ಎನ್.ಆರ್. ನಾರಾಯಣಮೂರ್ತಿ.
ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಬಲಾಢ್ಯ ದೇಶವನ್ನು ಕಟ್ಟುತ್ತಾರೆನ್ನುವ ಭ್ರಮೆ ಬೇಡ. ದೇಶ ನಿರ್ಮಾಣ, ಬಲಿಷ್ಠ ಸಮಾಜದ ನಿರ್ಮಾಣ ರಾಜಕಾರಣಿಗಳಿಂದ ಸಾಧ್ಯವಿಲ್ಲ . ವಿದ್ಯಾರ್ಥಿಗಳು ದೇಶ ನಿರ್ಮಾಣದ ಬಗ್ಗೆ ಯೋಚಿಸಬೇಕು. ಬಲಿಷ್ಠ ಆರ್ಥಿಕತೆಯನ್ನು ರೂಪಿಸುವತ್ತ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ನಾರಾಯಣಮೂರ್ತಿ ಹೇಳಿದರು. ಬುಧವಾರ ನಗರದ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ‘ಆಧುನಿಕ ವಿನ್ಯಾಸ ಮತ್ತು ತಯಾರಿಕೆ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗುಡಿ ಕಟ್ಟುತ್ತೀರಾ.. ಸ್ವಲ್ಪ ತಾಳಿ..
ಗುಡಿ, ಚರ್ಚು, ಮಸೀದಿ. ಇವುಗಳ ಸಾಲಿಗೆ ನೀವು ಇನ್ನೊಂದನ್ನು ಸೇರಿಸುತ್ತೀರಾ! ಅದು ನಮ್ಮ ಅಗತ್ಯವಲ್ಲ . ದೇಶಕ್ಕಿಂದು ಬೇಕಾದುದು ದೇಗುಲವಲ್ಲ ; ಕೈಗಾರಿಕೆ. ಆ ಕಾರಣದಿಂದಲೇ ಹೊಸ ದೇಗುಲಗಳನ್ನು ಕಟ್ಟುವುದು ಬೇಡ. ಕಟ್ಟುವುದಾದರೆ ಜವಾಹರ್‌ಲಾಲ್ ನೆಹರೂ ಹೇಳಿದ ಆಧುನಿಕ ಭಾರತದ ದೇವಸ್ಥಾನಗಳನ್ನು ಕಟ್ಟಬೇಕು. ಇದಕ್ಕೆ ಕನಸು ಕಾಣುವ ಶಕ್ತಿ ಹಾಗೂ ಕನಸನ್ನು ನನಸಾಗಿಸುವ ಛಲ ಬೇಕು ಎಂದು ನಾರಾಯಣಮೂರ್ತಿ ಹೇಳಿದರು.
ಜಾಗತಿಕ ಗುಣಮಟ್ಟ ಎನ್ನುವ ಪದ ಹೀನಾರ್ಥ ಪಡೆದುಕೊಂಡಿದೆ. ನಾಲ್ಕನೇ ದರ್ಜೆಯ ಕಂಪನಿಗಳೆಲ್ಲ ತಮ್ಮನ್ನು ವಿಶ್ವದರ್ಜೆಯ ಕಂಪನಿಗಳು ಎಂದು ಬಣ್ಣಿಸಿಕೊಳ್ಳುತ್ತಿವೆ ಎಂದು ನಾರಾಯಣಮೂರ್ತಿ ವಿಷಾದಿಸಿದರು.
ಭಾರತ ಇನ್ನಷ್ಟು ಕೆಳಕ್ಕೆ, ಐಟಿ ಮುಂದಕ್ಕೆ
ತೃತೀಯ ಜಗತ್ತಿನ ರಾಷ್ಟ್ರಗಳ ಸಾಲಿನಲ್ಲಿರುವ ಭಾರತ ಇನ್ನೂ ಕೆಳಸ್ಥಿತಿ ಮುಟ್ಟುವ ಅಪಾಯ ಎದುರಿಸುತ್ತಿದೆ. ನಾಲ್ಕನೇ ಅಥವಾ ಐದನೇ ಹಂತಕ್ಕಿಳಿಯುವ ಆತಂಕ ಎದುರಿಸುತ್ತಿರುವ ಭಾರತ ತೃತೀಯ ಜಗತ್ತಿನ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಬೇಕಿದೆ. ಭಾರತೀಯರು ಇನ್ನಾದರೂ ಶ್ರಮ ಪಡಬೇಕು ಎಂದು ನಾರಾಯಣಮೂರ್ತಿ ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಎದುರಿಸುತ್ತಿರುವ ಹಿನ್ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶೀಘ್ರದಲ್ಲೇ ಈ ಹಿನ್ನಡೆ ಸರಿತೂಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯ ಉಜ್ವಲವಾಗಿದೆ. ಆದರೆ ಹಿನ್ನಡೆಯಿಂದ ಯಾವಾಗ ಹೊರಬರುತ್ತೇವೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಶತಮಾನದ ಅವಧಿಯಲ್ಲಿ ವ್ಯಾಪಾರ ವಹಿವಾಟು ಏಳೆಂಟು ಬಾರಿ ಹಿನ್ನಡೆ ಅನುಭವಿಸುವುದು ಸಹಜ. ಸುಗ್ಗಿ ಕಾಲದಲ್ಲಿ ಉದ್ಯಮಿಗಳು ಲಾಭ ಗಳಿಸುತ್ತಾರೆ. ಬರದ ಸಂದರ್ಭದಲ್ಲಿ ಹೊಸ ಪಾಠಗಳನ್ನು ಕಲಿಯುತ್ತಾರೆ. ದೀರ್ಘಕಾಲದ ಬಾಳಿಕೆಯಿಂದ ಹಿನ್ನಡೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಉದ್ಯಮಕ್ಕೆ ಲಭ್ಯವಾಗುತ್ತದೆ ಎಂದು ನಾರಾಯಣಮೂರ್ತಿ ಉದ್ಯಮದ ಹಿನ್ನಡೆಯನ್ನು ವಿಶ್ಲೇಷಿಸಿದರು.
ಪಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಂ.ಆರ್.ದೊರೆಸ್ವಾಮಿ, ಕ್ವೆಸ್ಟ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಜಿತ್ ಎ. ಪ್ರಭು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಹೂವ ತಂದವರು..
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications