ಉಡುಪಿ: ಕನಕ ಮಂಟಪದಲ್ಲಿ ಇಣುಕಿದ ಧರ್ಮ ಮತ್ತು ಯುದ್ಧ
ಧಾರ್ಮಿಕ ಸಂಕುಚಿತ ಮನೋಭಾವವನ್ನು ಬಿತ್ತುವ ಮೂಲಕ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಸ್ವಾರ್ಥಿಗಳನ್ನು ಜನತೆ ವಿರೋಧಿಸಬೇಕೆಂದು ರಾಜ್ಯಪಾಲೆ ವಿ.ಎಸ್.ರಮಾದೇವಿ ಕರೆ ನೀಡಿದ್ದಾರೆ.
55 ಲಕ್ಷ ರುಪಾಯಿ ವೆಚ್ಚದಲ್ಲಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ನಿರ್ಮಿಸಿರುವ ಕನಕ ಮಂಟಪವನ್ನು ಗುರುವಾರ ಉದ್ಘಾಟಿಸಿ ರಮಾದೇವಿ ಮಾತನಾಡುತ್ತಿದ್ದರು. ಮುನಿ ಮತ್ತು ಋಷಿಗಳನ್ನು ಹೊಂದಿದ ಸನಾತನ ಧರ್ಮ ನಮ್ಮದು ಎಂದು ಅವರು ಹೇಳಿದರು.
ಪ್ರೀತಿ ಹಾಗೂ ಸೌಹಾರ್ದತೆಯೇ ಧರ್ಮದ ಜೀವಾಳ
ಅಧ್ಯಾತ್ಮವನ್ನು ಜಾತ್ಯತೀತತೆ ವಿರೋಧಿಸುವುದಿಲ್ಲ . ಬದಲಾಗಿ ಧರ್ಮಗಳ ನಡುವೆ ಸೌಹಾರ್ದತೆ ಸಾಧಿಸುತ್ತದೆ. ಅಲ್ಲದೆ ಧರ್ಮ ಸಂಪ್ರದಾಯಗಳ ಬಗ್ಗೆ ಜಾತ್ಯತೀತತೆ ಹೇಳುವುದಿಲ್ಲ . ಬದಲಾಗಿ- ಪ್ರೇಮ, ಇತರರನ್ನು ಗೌರವಿಸುವ ನಡವಳಿಕೆ ಹಾಗೂ ಸೌಹಾರ್ದತೆಯನ್ನು ಬೋಧಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯ ಪಟ್ಟರು.
ಒಂದು ವರ್ಷದ ಅವಧಿಯಲ್ಲಿ ಕನಕ ಮಂಟಪವನ್ನು ನಿರ್ಮಿಸಿದ ಪೇಜಾವರ ಮಠವನ್ನು ಶ್ಲಾಘಿಸಿದ ರಾಜ್ಯಪಾಲರು- ಶ್ರೀಕೃಷ್ಣನ ಪರಮ ಭಕ್ತನಾಗಿದ್ದ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ್ದ ಕನಕದಾಸರ ಸುಂದರವಾದ ಮಂಟಪವನ್ನು ನಿರ್ಮಿಸುವ ಮೂಲಕ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಂಸಾರ್ಹ ಕೆಲಸ ಮಾಡಿದ್ದಾರೆ. ಸ್ವಾಮೀಜಿ ಅವರು ಈ ಪ್ರದೇಶದ ಹೆಮ್ಮೆ ಎಂದು ರಮಾದೇವಿ ಬಣ್ಣಿಸಿದರು.
ಕನಕದಾಸರು ಪ್ರೀತಿ, ಸೌಹಾರ್ದತೆಗಳ ಪ್ರತೀಕವಾಗಿದ್ದರು. ಸರ್ವ ಮಾನವ ಸಮತಾ ಭಾವವನ್ನು ಬೋಧಿಸಿದ ಕನಕದಾಸರ ತತ್ವಗಳು ಪ್ರಸ್ತುತ ಹಾಗೂ ಭವಿಷ್ಯದಲ್ಲೂ ಪ್ರಸ್ತುತವಾಗಿವೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
ಕನಕ ಜಯಂತಿಯಾಳಗೆ ನುಸುಳಿದ ಯುದ್ಧ!
ರಾಷ್ಟ್ರೀಯ ಕನಕ ಜಯಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್ ಯುದ್ಧಕ್ಕೆ ಕಾಲ್ಕೆರೆಯುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತದ ಸೇನೆ ಸನ್ನದ್ಧವಾಗಿದೆ ಎಂದರು.
ಕಾಶ್ಮೀರದಲ್ಲಿನ ಭಯೋತ್ಪಾದಕತೆ ವಿರುದ್ಧ ಭಾರತ ನಡೆಸುವ ಹೋರಾಟಕ್ಕೆ ಚೀನಾ ಹಾಗೂ ಗಲ್ಫ್ ರಾಷ್ಟ್ರಗಳು ಸೇರಿದಂತೆ ಎಲ್ಲ ಪ್ರಮುಖ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ರಾಜತಾಂತ್ರಿಕ ಸಮರದಲ್ಲಿ ಪಾಕಿಸ್ತಾನ ಏಕಾಂಗಿಯಾಗಿದ್ದು , ಡಿಸೆಂಬರ್ 13 ರಂದು ಸಂಸತ್ ಭವನದ ಮೇಲೆ ನಡೆದ ಉಗ್ರರ ದಾಳಿಯ ನಂತರ ಭಯೋತ್ಪಾದಕತೆಯ ವಿರುದ್ಧದ ಭಾರತದ ಹೋರಾಟ ಇನ್ನಷ್ಟು ಕಠಿಣವಾಗಿದೆ ಎಂದು ಅನಂತಕುಮಾರ್ ಹೇಳಿದರು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications