ಮೇಘಾಲಯದಲ್ಲಿ ಜೈಲ್ ಬ್ರೇಕ್ : 32 ಸೆರೆಯಾಳುಗಳು ಎಸ್ಕೇಪ್
ಶಿಲ್ಲಾಂಗ್ : ಬೆಂಗಳೂರಲ್ಲಿ ಕಂಡಲ್ಲಿ ಕಳ್ಳಕಾಕರನ್ನು ಕೊಂದು ಹಾಕಿ ಎಂದು ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ನಾಗರಿಕರಿಗೆ ಅಪ್ಪಣೆ ಕೊಡಿಸಿರುವಂತೆ ಮೇಘಾಲಯದಲ್ಲಿ ಜೈಲಿನಿಂದ ತಪ್ಪಿಸಿಕೊಂಡವರನ್ನು ಹಿಡಿದು ಕೊಡಿ ಎಂದು ಆದೇಶ ಕೊಡಬಹುದೇನೋ? ಯಾಕೆಂದರೆ, ಇಲ್ಲಿ ಜೈಲಿನಿಂದ ಪೇರಿ ಕಿತ್ತವರ ಸಂಖ್ಯೆ ಏರುತ್ತಿದೆ.
ಕಳೆದ ಬುಧವಾರ 32 ಜೈಲುವಾಸಿಗಳು ಸೆರೆಮನೆ ದಿಡ್ಡಿ ಬಾಗಿಲಿನಿಂದಲೇ ತಪ್ಪಿಸಿಕೊಂಡಿದ್ದಾರೆ ! ಪ್ರಸಕ್ತ ವರ್ಷ ನಡೆದಿರುವ ಮೇಘಾಲಯದ ನಾಲ್ಕನೇ ಜೈಲ್ ಬ್ರೇಕ್ ಇದು. ವಿಲಿಯಂ ನಗರ ಜಿಲ್ಲೆಯ ಜೈಲಿನಲ್ಲಿ ವಿಚಾರಣೆಗಾಗಿ ಆಪಾದಿತರನ್ನು ಕರೆದೊಯ್ಯಲು ಬಾಗಿಲು ತೆರೆದಾಗ, ಗೃಹ ರಕ್ಷಣಾ ದಳವನ್ನು ಬೇಧಿಸಿ ಮೂವತ್ತೆರಡೂ ಮಂದಿ ತಪ್ಪಿಸಿಕೊಂಡಿದ್ದಾರೆ. ಸಾಲದ್ದಕ್ಕೆ ನಾಲ್ಕು 303 ಬಂದೂಕುಗಳನ್ನೂ ಹೊತ್ತೊಯ್ದಿದ್ದಾರೆ. ತಮಾಷೆ ಎನಿಸುವ ಸಂಗತಿಯೆಂದರೆ, ಯಾರಿಗೂ ಸಣ್ಣ ಗಾಯಗಳೂ ಆಗಿಲ್ಲ. ತಪ್ಪಿಸಿಕೊಂಡು ಹೋದವರನ್ನು ತಡೆಯುವ ಗೊಡವೆಗೇ ಪೊಲೀಸರು ಹೋಗಿಲ್ಲವೇನೋ ಎಂಬಂತೆ ಈ ಘಟನೆ ನಡೆದಿದೆ.
ಪೊಲೀಸ್ ಇಲಾಖೆ ಸುಮ್ಮನೇನೂ ಇಲ್ಲ. ಕಳ್ಳಕಾಕರು ಹೇಗೆ ತಪ್ಪಿಸಿಕೊಂಡರು ಎಂಬುದನ್ನು ತಿಳಿಯಲು ಯಥಾ ಪ್ರಕಾರ ತನಿಖೆಗೆ ಆದೇಶಿಸಿದೆ. ಭಾರತದ ಇತರ ರಾಜ್ಯಗಳಲ್ಲಿ ಏನಾಗುತ್ತಿದೆ ಎನ್ನುವುದು ನಿಮ್ಮ ಕಣ್ಣಿಗೆ ಬೀಳಲಿ ಎನ್ನುವುದಕ್ಕೆ ಈ ಸುದ್ದಿ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications