ದ್ರಾವಿಡ್‌ಗೆ ಭುಜ ಬೇನೆ: ಇಂಗ್ಲೆಂಡ್ ವಿರುದ್ಧ ಒಂಡೇಗಳಲ್ಲಿ ಆಡಲ್ಲ
ಮುಂಬಯಿ : ತಮ್ಮ ಭುಜದ ನೋವನ್ನು ಪೂರ್ಣ ಪ್ರಮಾಣದಲ್ಲಿ ನೀಗಿಕೊಳ್ಳಲು ಚಿಕಿತ್ಸೆ ಸಲುವಾಗಿ ದಕ್ಷಿಣ ಆಫ್ರಿಕಕ್ಕೆ ಹೋಗಲು ಕನ್ನಡಿಗ ಹಾಗೂ ಬ್ಯಾಟಿಂಗ್ ಕಲೆಗಾರ ರಾಹುಲ್ ದ್ರಾವಿಡ್ ನಿರ್ಧರಿಸಿದ್ದು, ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಆಡುವುದಿಲ್ಲ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯಕಾರಿ ಕಾರ್ಯದರ್ಶಿ ಶರದ್ ದಿವಾಕರ್ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಕೆಲವು ದಿನಗಳಿಂದ ದ್ರಾವಿಡ್‌ಗೆ ಭುಜದ ನೋವು ಕಾಣಿಸಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧ ಮುಗಿದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅವರು ಆಡಲಿಲ್ಲ.
ಈ ತೊಂದರೆ ಉಲ್ಬಣಿಸದಂತೆ ಎಚ್ಚರಿಕೆ ವಹಿಸಿರುವ ದ್ರಾವಿಡ್, ಈಗಾಗಲೇ ಕನ್ನಡಿಗರಾದ ಶ್ರೀನಾಥ್ ಹಾಗೂ ಕುಂಬ್ಳೆಗೆ ಭುಜ ಶಸ್ತ್ರಚಿಕಿತ್ಸೆ ಮಾಡಿರುವ ಡಾ.ಫರ್ಗ್ಯೂಸನ್ ಬಳಿಗೆ ಚಿಕಿತ್ಸೆಗಾಗಿ ಹೋಗಲಿದ್ದಾರೆ. ಮಾರ್ಚ್ 2002ರಲ್ಲಿ ಜಿಂಬಾಬ್ವೆಗೆ ಪ್ರವಾಸ ಹೋಗಲಿರುವ ಭಾರತ ತಂಡದಲ್ಲಿ ಗುಣಮುಖರಾಗಿ ಕಾಣಿಸಿಕೊಳ್ಳುವ ಬಯಕೆ ದ್ರಾವಿಡ್ ಅವರದು.
ಜನವರಿ 10ರಿಂದ 13ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಚಾಲೆಂಜರ್ ಸರಣಿ ಕ್ರಿಕೆಟ್‌ನಲ್ಲೂ ದ್ರಾವಿಡ್ ಆಡುವುದಿಲ್ಲ. ಇಂಗ್ಲೆಂಡ್ ವಿರುದ್ಧದ ಒಂಡೇ ಪಂದ್ಯಗಳ ಸರಣಿ ಜನವರಿ 22ರಿಂದ ಫೆಬ್ರವರಿ 3ರವರೆಗೆ ನಡೆಯಲಿದ್ದು, ಜನವರಿ 13ರಂದು ಭಾರತ ತಂಡವನ್ನು ಪ್ರಕಟಿಸಲಾಗುವುದು ಎಂದು ದಿವಾಕರ್ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications