ಕರ್ನಾಟಕದಲ್ಲಿರುವುದು ಕೃಷ್ಣ ಸರ್ಕಾರವೋ, ಪಿ.ಸಿ. ಸರ್ಕಾರವೋ?
ಬೆಂಗಳೂರು : ಕರ್ನಾಟಕದಲ್ಲಿರುವುದು ಎಸ್.ಎಂ. ಕೃಷ್ಣ ನೇತೃತ್ವದ ಸರಕಾರವೋ ಅಥವಾ ಪಿ.ಸಿ. ಸರ್ಕಾರವೋ? ಇದು 100 ಪರ್‌ಸೆಂಟ್ ಪಿ.ಸಿ. ಸರಕಾರ. ಮಂಗಳವಾರ ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರೆದುರು ಇದು ಸಾಬೀತಾಗಿ ಹೋಯಿತು.
ಖ್ಯಾತ ಜಾದೂಗಾರ ಪಿ.ಸಿ. ಸರಕಾರ್ ಯಾವಾಗ ಮುಖ್ಯಮಂತ್ರಿ ಆದರು ಅಂತಿರಾ? ಅದು ಹಾಗಲ್ಲ. ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಎಲ್ಲ ಇಲಾಖೆಗಳಲ್ಲೂ ಕಂಪ್ಯೂಟರ್ ಅರ್ಥಾತ್ ಪಿ.ಸಿ.ಗಳನ್ನು ಅಳವಡಿಸುವ ಮೂಲಕ ರಾಜ್ಯವನ್ನು ಪಿ.ಸಿ. ಸರಕಾರ ಮಾಡಿದ್ದಾರೆ.
ಅಂದಹಾಗೆ ರಸಋಷಿ ಯಾರು ಹೇಳಿ? ನೀವು ಕುವೆಂಪು ಎನ್ನುವುದಾದರೆ ಅದು ತಪ್ಪು. ಹಣ್ಣಿನಿಂದ ರಸ ತಯಾರಿಸಿ ನೀಡುವ ತಜ್ಞನೇ ರಸಋಷಿ. ರಸ ಎಂದರೆ ಹಣ್ಣಿನ ಸಾರ, ಋಷಿ ಎಂದರೆ ತಜ್ಞ. ಅಂದಮೇಲೆ ರಸಋಷಿಗಳು ಜ್ಯೂಸ್ ಅಂಗಡಿ ಮಾಲಿಕರು ತಾನೆ.
ಡಾಟ್‌ಕಾಮು ಭಾರತಕ್ಕೆ ಹೊಸದೇನಲ್ಲ. ಹಿಂದೆ ಬಹು ಹಿಂದೆಯೇ ಇದನ್ನು ವಾತ್ಸ್ಯಾಯನರು ಡಾಟ್ ಕಾಮ್‌ಗೆ ಸೂತ್ರ ಬರೆದಿದ್ದರು. ಅದೇ ಇಂದು ಕಾಮಸೂತ್ರಎಂದು ಪ್ರಖ್ಯಾತವಾಗಿದೆ ಅಷ್ಟೇ. ಗಣನಾಯಕನಾದ ಗಣಪತಿಯ ವಾಹನ ಇಲಿ. ಈ ಇಲಿಯಿಲ್ಲದೆ ಕೆಲಸವನ್ನೇ ನಿರ್ವಹಿಸದ ಗಣಕಯಂತ್ರ ಅರ್ಥಾತ್ ಕಂಪ್ಯೂಟರ್ ಗಣಪ ಸೃಷ್ಟಿ ಅಲ್ಲವೇನು?
ದಂಪತಿ ಎಂದರೆ ಗಂಡ- ಹೆಂಡತಿ. ಪತಿ ಎಂದರೆ ಗಂಡ ಹಾಗಾದರೆ ದಂಪತಿಯಲ್ಲಿ ದಂ ಎಂದರೇನು? ದಂ ಎಂದರೆ ಹೆಂಡತಿ. ಅಂದರೆ ಹೆಂಡತಿ ಇಲ್ಲದವನನ್ನು ದಂ ಇಲ್ಲದವ ಎನ್ನಲು ಅಡ್ಡಿ ಏನು?
ಯುದ್ಧ ಮಾಡಲ್ಲ ಎಂದು ಶಸ್ತ್ರಾಸ್ತ್ರ ಕೆಳಗಿಟ್ಟ ಅರ್ಜುನ ಮತ್ತೆ ಬಿಲ್ಲು ಬಾಣ ಹಿಡಿದು ಯುದ್ಧ ಮಾಡಿದ್ದು ಏಕೆ ಗೊತ್ತೆ. ಒಂದು ಬಾರಿ ಶಸ್ತ್ರ ಕೆಳಗಿಟ್ಟ ತಪ್ಪಿಗೆ ಅರ್ಜುನ ಶ್ರೀಕೃಷ್ಣ ಹೇಳಿದ 700 ಗೀತೆಗಳನ್ನು ಕೇಳಬೇಕಾಗಿ ಬಂತು. ತಾನು ಇನ್ನೂ ಒಪ್ಪದಿದ್ದರೆ ಮತ್ತೆ ಕೃಷ್ಣನಿಂದ ಇನ್ನೂ 700 ಶ್ಲೋಕ ಕೇಳಬೇಕಲ್ಲ ಎಂದು ಹೆದರಿ ಅರ್ಜುನ ಯುದ್ಧಕ್ಕೆ ಒಪ್ಪಿಕೊಂಡ.
ಇಂತಹ ಹತ್ತು ಹಲವಾರು ಹಾಸ್ಯ ಪ್ರಸಂಗಗಳು ಗೊರುರು ರಾಮಸ್ವಾಮಿ ಅಯ್ಯಂಗಾರ್ ಸ್ಮರಣಾರ್ಥ ಮಂಗಳವಾರ ನಡೆದ ಹಾಸ್ಯೋತ್ಸವ 2ಕೆ1 ಕಾರ್ಯಕ್ರಮದಲ್ಲಿ ಮೊಳಗಿದವು. ಸಹಸ್ರಾರು ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು, ನಗೆಗಡಲಲ್ಲಿ ತೇಲಿದರು. ಹಾಸ್ಯದ ಹೊಳೆಯಲ್ಲಿ ಮಿಂದರು.
ಕಾರ್ಯಕ್ರಮ ಉದ್ಘಾಟಿಸಿದ ಜವಾಹರಲಾಲ್ ತಾರಾಲಯದ ನಿರ್ದೇಶಕ ವಿಶ್ವೇಶ್ವರ ಅವರು ಪಿಸಿ ಸರ್ಕಾರ, ಕಾಮಸೂತ್ರದ ಪರಿಕಲ್ಪನೆಗಳ ಜೊತೆಗೆ ಲ್ಯಾಪ್ ಟಾಪ್‌ಗೆ ಲಪ್‌ಟುಪಿ ಎಂಬ ಹೊಸ ನಾಮಕರಣವನ್ನೂ ಮಾಡಿದರೆ, ನಿವೃತ್ತ ಪೊಲೀಸ್ ಅಧಿಕಾರಿ ಪಿ.ಎಸ್. ರಾಮಾನುಜಂ ಪೊಲೀಸ್ ಜೋಕ್‌ಗಳನ್ನು ಹೇಳಿ ರಂಜಿಸಿದರು.
ಸತ್ತೋಲೆ: ಪೊಲೀಸ್ ಇಲಾಖೆಯ ಕನ್ನಡ ಪತ್ರಗಳಲ್ಲಿನ ಹಾಸ್ಯ ಸನ್ನಿವೇಶಗಳನ್ನು ನೆನಪಿನ ಬುತ್ತಿಯಿಂದ ಬಿಚ್ಚಿಟ್ಟ ರಾಮಾನುಜಂ ಹೇಳಿದ ಒಂದು ಜೋಕು. ಒಮ್ಮೆ ಅವರಿಗೆ ಇಲಾಖೆ ಮುಖ್ಯಸ್ಥರಿಂದ ಪತ್ರವೊಂದು ಬಂತಂತೆ. ಅದರಲ್ಲಿ ಹೀಗೆ ಬರೆದಿತ್ತು. ಈ ಪತ್ರದೊಂದಿಗೆ 4 ಬೆಕ್ಕುಗಳನ್ನು ಕಳುಹಿಸಲಾಗಿದೆ ಪರಿಶೀಲಿಸಿ. ಅವರು, ಪತ್ರ ಹೊತ್ತುತಂದ ಲಕೋಟೆಯನ್ನು ಹತ್ತಾರು ಬಾರಿ ಕೊಡವಿದರೂ ಬೆಕ್ಕಗಳು ಉದುರಲಿಲ್ಲ. ಕೊನೆಗೆ ಲಕೋಟೆ ಹರಿದು ನೋಡಿದರೂ ಬೆಕ್ಕುಗಳೇ ಕಾಣಲಿಲ್ಲ. ಆದರೆ, ಪತ್ರದೊಂದಿಗೆ ಇದ್ದದ್ದು ಏನು ಗೊತ್ತೆ... 4 ಬ್ಯಾಂಕ್ ಚೆಕ್ಕುಗಳು.
ರಾಜ್ಯ ಸರಕಾರ ಕನ್ನಡವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಬಗ್ಗೆ 160 ಬಾರಿ ಸುತ್ತೋಲೆ ಹೊರಡಿಸಿದೆ. ಆದರೂ ಅದರಿಂದ ಏನೂ ಪ್ರಯೋಜನ ಆಗಿಲ್ಲ. ಹೀಗಾಗಿ ಇದು ಸುತ್ತೋಲೆ ಆಗುವ ಬದಲು ಸತ್ತ ಓಲೆ ಅರ್ಥಾತ್ ಸತ್ತೋಲೆ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ತಮ್ಮ ಎಂದಿನ ವರಸೆಯಲ್ಲಿ ಮಾತಿಗಾರಂಭಿಸಿದ ಅ.ರಾ. ಮಿತ್ರ ಮುಂದಿನ ಪೀಳಿಗೆಗೆ ನಾವು ಬೆಣ್ಣೆ ಎಂದರೆ ಏನು ಎಂದು ಹೇಳುವ ಕಾಲವೂ ಬರುತ್ತೆ. ಆಗ ನಾವು ನೋಡು ಮಗು ಬೆಣ್ಣೆ ಅಂದರೆ ಅದು ಬೆಳ್ಳಗಿರತ್ತೆ ಸುಣ್ಣದ ಹಾಗೆ, ಮೆತ್ತಗಿರತ್ತೆ ಸಗಣಿಯ ಹಾಗೆ.... ಎಂಬಿತ್ಯಾದಿ ಉಪಮೆಗಳಿಂದ ನಗಿಸುತ್ತಾ, ಗೊರೂರರ ಹಾಸ್ಯ ಪ್ರಜ್ಞೆಯನ್ನು ವಿವರಿಸಿದರು.
ಉಳಿದಂತೆ ಗೊರೂರರ ಬಿಸಿಲ್ಗುದುರೆಯೇ ಮೊದಲಾದ ಕಿರುನಾಟಕಗಳ ಪ್ರದರ್ಶನವೂ ನಡೆಯಿತು. ಹಾಸ್ಯಬ್ರಹ್ಮ ಹಾಗೂ ಕೊರವಂಜಿ ಅಪರಂಜಿ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿತ್ತು. ಕಲಾಕ್ಷೇತ್ರ ಕಿಕ್ಕಿರಿದು ತುಂಬಿದ್ದ ಕಾರಣ ಒಳಹೋಗಲಾಗದ ಮಂದಿ ಹೊರಗೆ ಪೆಂಡಾಲ್‌ನಲ್ಲಿ ಹಾಕಿದ್ದ ಕ್ಲೋಸ್ ಸರ್ಕೀಟ್ ಟಿ.ವಿಗಳ ಮೊರೆಹೊಕ್ಕರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications