ಬೆಂಗಳೂರಿನ ನಾಗವಾರದಲ್ಲಿ ಆರ್‌ಎಸ್ಸೆಸ್ ಸಮರಸತಾ ಸಂಗಮ
ಬೆಂಗಳೂರು : ಜನವರಿ 25 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ನಾಗವಾರದ ಮಾನ್ಯತಾ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಶಿಬಿರ ನಡೆಯಲಿದೆ.
ರಾಜ್ಯದ 15 ಜಿಲ್ಲೆಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಳ್ಳುವ ನಿರೀಕ್ಷೆಯಿರುವ ಆರ್‌ಎಸ್ಸೆಸ್ ಶಿಬಿರದಲ್ಲಿ ಸಂಘದ ಸರಸಂಘ ಚಾಲಕ ಸುದರ್ಶನ್ ಹಾಗೂ ಇತರ ರಾಷ್ಟ್ರೀಯ ನಾಯಕರಾದ ಮೋಹನ್ ಜೀ ಭಾಗವತ್ ಮತ್ತು ಹೊ.ವೆ.ಶೇಷಾದ್ರಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡುವರು ಎಂದು ಸಂಘದ ಸಹಪ್ರಾಂತ ಪ್ರಚಾರಕ್ ದಿನೇಶ್ ಕಾಮತ್ ತಿಳಿಸಿದ್ದಾರೆ.
1982 ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂಥ ಶಿಬಿರ ನಡೆದಿತ್ತು. 20 ವರ್ಷಗಳ ನಂತರ ಬೆಂಗಳೂರಿನಲ್ಲಿ ಮತ್ತೆ ಶಿಬಿರ ನಡೆಯುತ್ತಿದೆ. ಶಿಬಿರಾರ್ಥಿಗಳ ವಸತಿಗಾಗಿ ಸುಮಾರು 270 ಎಕರೆ ಪ್ರದೇಶದಲ್ಲಿ 17 ತಾತ್ಕಾಲಿಕ ನಗರಗಳನ್ನು ರೂಪಿಸಲಾಗುವುದು. ಸ್ವಯಂ ಸೇವಕರಿಗೆ 1 ಕೋಟಿ ಲೀಟರ್‌ಗೂ ಹೆಚ್ಚು ನೀರು ಬೇಕಾಗಿದ್ದು, 5 ತಾತ್ಕಾಲಿಕ ಕೆರೆಗಳನ್ನು ನಿರ್ಮಿಸಲಾಗುವುದು. ಪಾಲಿಥಿನ್ ಹೊದಿಕೆಗಳಲ್ಲಿ ನೀರು ಸಂಗ್ರಹಿಸಲಾಗುವುದು.
ಶಿಬಿರದ ಅಂಗವಾಗಿ ಭಾರತ ಕುರಿತ ಚಿತ್ರಗಳ ಪ್ರದರ್ಶನ ನಡೆಯುವುದು. ಶಿಬಿರ ನಡೆಸಲು ಧನ ಹಾಗೂ ವಸ್ತು ಸಂಪನ್ಮೂಲಗಳ ಕ್ರೋಢೀಕರಣ ನಡೆಯುತ್ತಿದೆ ಎಂದು ದಿನೇಶ್ ಕಾಮತ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications