‘ಪಠ್ಯದಲ್ಲಿ ಜ್ಯೋತಿಷ್ಯ: ಶಿಕ್ಷಣ ಕ್ಷೇತ್ರವೇ ಬುಡಮೇಲಾದೀತು ಎಚ್ಚರ’
ಬೆಂಗಳೂರು : ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಜ್ಯೋತಿಷ್ಯಶಾಸ್ತ್ರವನ್ನು ಅಳವಡಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಶೇ.40ರಷ್ಟು ಅನಕ್ಷರಸ್ಥರಿರುವಾಗ ಅವರಿಗೆ ಅಕ್ಷರ ಕಲಿಸುವ ಬದಲು ಜೋತಿಷ್ಯ ಕಲಿಸ ಹೊರಟಿರುವುದು ವಿಪರ್ಯಾಸ ಎಂದು ಅವರು ಹೇಳಿದ್ದಾರೆ.
ಪದ್ಮನಾಭನಗರದ ಪವನಧಾಮದಲ್ಲಿ ಎ.ಎಸ್. ನಟರಾಜ್ ಬರೆದಿರುವ ‘ಹತ್ತು ಲಕ್ಷ ರುಪಾಯಿ ಜ್ಯೋತಿಷ್ಯಕ್ಕೆ ಸವಾಲುಗಳು’ ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರಕಾರದ ಈ ನಿರ್ಧಾರದಿಂದ ಶಿಕ್ಷಣ ಕ್ಷೇತ್ರ ಬುಡಮೇಲಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕೃತಿ ಮಾರುಕಟ್ಟೆಗೆ ಬಂದ ತರುವಾಯ ಕೆಲವು ರಾಜಕೀಯ ಪಕ್ಷಗಳಿಂದ ನಿಮಗೆ ಬೆದರಿಕೆ ಬರಬಹುದು, ಸ್ವಲ್ಪ ಹುಷಾರಾಗಿರಿ ಎಂದು ಲೇಖಕ ನಟರಾಜ್‌ರಿಗೆ ಚಂದ್ರಶೇಖರ್ ಎಚ್ಚರಿಕೆ ನೀಡಿದರು. (ಭಾರತೀಯ ಜನತಾ ಪಕ್ಷದ ಹೆಸರನ್ನು ಸಚಿವರು ಹೇಳಲಿಲ್ಲ)
ಅವೈಜ್ಞಾನಿಕ: ವಿಜ್ಞಾನ ಎಂಬುದು ವಿಶ್ವ ನಿಯಮ. ವಿಜ್ಞಾನ ಅಲ್ಲವಾದರೆ ಅದು ಕೇವಲ ನಂಬಿಕೆ. ವಿಜ್ಞಾನಿಗಳು ವಿಷಯವನ್ನು ಪರೀಕ್ಷೆ ಮಾಡಿ ನಿರ್ಧರಿಸುತ್ತಾರೆ. ಅವೈಜ್ಞಾನಿಕ ಯಾವುದೇ ನಿರ್ಧರಣೆ, ತಳಹದಿ ಇಲ್ಲದ ಒಂದು ನಂಬಿಕೆ. ಜ್ಯೋತಿಷ್ಯ ಅವೈಜ್ಞಾನಿಕ ಎಂದು ನಾನು ಮತ್ತೆ ಮತ್ತೆ ಸಾರುತ್ತೇನೆ ಎಂದು ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಹೇಳಿದರು.
ನಾಲ್ಕು ದಶಕಗಳಿಂದ ನಾನು ಪುಟ್ಟಪರ್ತಿಯ ಪವಾಡಪುರುಷರಿಗೆ ಶೂನ್ಯದಿಂದ ಒಂದು ಕುಂಬಳಕಾಯಿ ಸೃಷ್ಟಿಸಿಕೊಡಿ ಎಂದು ಕೇಳುತ್ತಿದ್ದೇನೆ, ಅವರಿಗೆ ಇನ್ನೂ ಬಿಡುವಾಗಿಲ್ಲ. ಹೋಗಲಿ ನಾನು -ನೀವು ವಿಸ್ತುತವಾಗಿ ಚರ್ಚಿಸೋಣ ಅವಕಾಶಕೊಡಿ ಎಂದು ಕೇಳಿದ್ದೇನೆ ಅದಕ್ಕೂ ಅವರು ಆಸ್ಪದ ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ರಾಜೀವಗಾಂಧೀ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಚಂದ್ರಶೇಖರ ಶೆಟ್ಟಿ, ಲೇಖಕ ನಟರಾಜ್ ಉಪಸ್ಥಿತರಿದ್ದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications