2004 ರೊಳಗೆ ಎಲ್ಲರಿಗೂ ಕುಡಿಯುವ ನೀರು- ವೆಂಕಯ್ಯನಾಯ್ಡು
ಬೆಂಗಳೂರು : ಕರ್ನಾಟಕದ ಗ್ರಾಮೀಣ ನೀರು ಸರಬರಾಜು ಹಾಗೂ ಒಳ ಚರಂಡಿ ಯೋಜನೆಗಳಿಗೆ 151.6 ಮಿಲಿಯನ್ ಡಾಲರ್‌ಗಳ ನೆರವು ಒದಗಿಸಲು ವಿಶ್ವಬ್ಯಾಂಕ್ ಒಪ್ಪಿಕೊಂಡಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಡಿಸೆಂಬರ್ 18 ರಂದು ಕರ್ನಾಟಕದ ಯೋಜನೆಗಳನ್ನು ಅಂಗೀಕರಿಸಿರುವ ವಿಶ್ವ ಬ್ಯಾಂಕ್ ಆರ್ಥಿಕ ಸಹಾಯ ನೀಡಲು ಒಪ್ಪಿಕೊಂಡಿದೆ. 193.44 ಮಿಲಿಯನ್ ಡಾಲರ್‌ಗಳ ಈ ಯೋಜನೆಯಲ್ಲಿ ವಿಶ್ವಬ್ಯಾಂಕ್ 151.6 ಮಿ. ಡಾಲರ್‌ಗಳನ್ನು ಪೂರೈಸುವುದು ಎಂದು ವೆಂಕಯ್ಯನಾಯ್ಡು ಪ್ರಕಟಿಸಿದರು. ಶನಿವಾರ ನಗರದಲ್ಲಿ ನಡಿದೆ ಅಂತರ್ಜಲ ಪುನರ್ ಭರ್ತಿ ಹಾಗೂ ಮಳೆ ನೀರಿನ ಬಳಕೆ ಕುರಿತ ರಾಷ್ಟ್ರೀಯ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆಯಡಿ 10 ಸಾವಿರ ಕೋಟಿ ರುಪಾಯಿಗಳನ್ನು ಪ್ರಸಕ್ತ ಸಾಲಿನಲ್ಲಿ ಖರ್ಚು ಮಾಡಲು ಸರ್ಕಾರ ನಿಶ್ಚಯಿಸಿದೆ. ನೀರು ಸಂಗ್ರಹ ಹಾಗೂ ಅಂತರ್ಜಲ ವೃದ್ಧಿಯ ಬಗೆಗೆ ಈ ಯೋಜನೆ ಒತ್ತು ನೀಡಲಿದೆ. 2004 ರೊಳಗೆ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರನ್ನು ಪೂರೈಸುವ ಗುರಿಯನ್ನು ಯೋಜನೆ ಹೊಂದಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.
ಕೆರೆಗಳ ಹೂಳು : ಮೂರು ವರ್ಷಗಳ ಅವಧಿಯಲ್ಲಿ 3 ಸಾವಿರ ಕೆರೆಗಳ ಹೂಳೆತ್ತುವ ರಾಜ್ಯ ಸರ್ಕಾರದ ಯೋಜನೆಗೆ ವಿಶ್ವಬ್ಯಾಂಕ್ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದರು. ಕೆರೆಗಳ ಹೂಳೆತ್ತುವ ಯೋಜನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಕೃಷ್ಣ ಆಶ್ಚರ್ಯ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications