ಆನೆ ಬಂತು ಆನೆ, ದೊಡ್ಡದೊಡ್ಡ ಆನೆ ಬೆಂಗಳೂರಿಗ್ಯಾಕೆ ಬಂತು?
ಬೆಂಗಳೂರು : ಮೃಗಾಲಯದ ಬೀಡು ಮೈಸೂರಿಗೆ ಚಿರತೆ ಬಂದಿದ್ದು, ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಈಗ ಮರೆತ ಸುದ್ದಿ. ತಾಜಾ ಸುದ್ದಿ ಏನು ಗೊತ್ತೆ? ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆ ಹಳ್ಳಿಯಲ್ಲಿ ಹತ್ತಿಪ್ಪತ್ತು ಕಾಡಾನೆಗಳು ಹಿಂಡಿಂಡಾಗಿ ಪ್ರತ್ಯಕ್ಷವಾಗಿದ್ದು.
ಏನು ಬೆಂಗಳೂರಿನಲ್ಲಿ ಕಾಡೇ ಇಲ್ಲ. ಕಾಡಾನೆಗಳ ಹಿಂಡು ಹೇಗೆ ಬಂತು ಅಂತೀರಾ? ಈ ಆನೆಗಳು ಬೆಂಗಳೂರು ಬಳಿಯ ಆನೆಕಲ್, ಬನ್ನೇರುಘಟ್ಟ ಕಾಡಿನಿಂದ ಇಲ್ಲಿಗೆ ಬಂದಿದ್ದವು. ಈ ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಓಡಿಸಲು ಸುಮಾರು 4 ಗಂಟೆಗಳ ಕಾಲ ಶ್ರಮಪಟ್ಟ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ 4 ಗಂಟೆ ಸುಮಾರಿಗೆ ಆನೆಗಳನ್ನು ಬನ್ನೇರುಘಟ್ಟದತ್ತ ಪಾದಬೆಳೆಸುವಂತೆ ಮಾಡುವಲ್ಲಿ ಯಶಸ್ವಿಯಾದರು.
ಶುಕ್ರವಾರ ಬೆಳಗ್ಗೆ 11.30ರ ಸಮಯ ಬೆಂಗಳೂರಿನಲ್ಲಿ ಮೋಡ ಮುಸುಕಿತ್ತು. ಸಣ್ಣಗೆ ಮಳೆ ಜಿನುಗುತ್ತಿತ್ತು. ಕೆಲವರು ಬೆಚ್ಚಗೆ ಕಂಬಳಿಹೊದ್ದು, ಬಿಸಿ ಕಾಫಿ ಕುಡಿಯುತ್ತಾ ಮನೆಯಲ್ಲಿ ಮೂಲೆ ಸೇರಿದ್ದರು. ಆ ಹೊತ್ತಿನಲ್ಲಿ ಮೂರು ಪುಟ್ಟ ಮರಿಗಳ ಸಹಿತ ಪ್ರತ್ಯಕ್ಷವಾದ 17 ಆನೆಗಳ ಹಿಂಡುನ್ನು ನೋಡಿದ ಕೆಲವರು, ಕೊರೆಯುವ ಚಳಿಯಲ್ಲೂ ಬೆವರಿದರು. ಗಾಬರಿಗೊಂಡು - ದಿಕ್ಕೆಟ್ಟು ಓಡಿದರು.
ಹೊಸಕೆರೆ ಹಳ್ಳಿಯ ತೋಟದಲ್ಲಿ ಅಡ್ಡಾಡಿದ ಆನೆಗಳು ಕೊನೆಗೆ ಗುಡ್ಡದ ಬಳಿ ಹೋಗಿ ಬೀಡುಬಿಟ್ಟವು. ಈ ಕಾಡಾನೆಗಳ ಹಾವಳಿಯಿಂದ ಯಾವುದೇ ರೀತಿಯ ಹಾನಿ ಆದ ವರದಿಗಳು ಬಂದಿಲ್ಲ. ಆದರೆ, ಬೆಂಗಳೂರಿಗರಿಗೆ ಬಲು ಅಪರೂಪವಾಗಿ ದೊರಕಬಹುದಾದ ಈ ದೃಶ್ಯವನ್ನು ಕಾಣಲೆಂದು ತಂಡೊಪತಂಡವಾಗಿ ಜನರು ಬಂದಿದ್ದರಿಂದ, ಹೊಸಕೆರೆಹಳ್ಳಿಯಲ್ಲಿ ಜಾತ್ರೆಯ ಸಡಗರವಿತ್ತು.
ಜನರ ಕೇಕೆ ಕೂಗಿನಿಂದ ಗಲಿಬಿಲಿಗೊಂಡು ಆನೆಗಳು ಊರಿಗೆ ನುಗ್ಗಬಹುದೆಂಬ ಭೀತಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದರು. ಗುಡ್ಡದ ಬಳಿಗೆ ಸಾರ್ವಜನಿಕರು ಹೋಗದಂತೆ ತಡೆದರು. ಈ ಎಲ್ಲ ಆನೆಗಳು ಆಹಾರ ಹಾಗೂ ನೀರು ಹುಡುಕಿಕೊಂಡು ಆನೇಕಲ್ ಹಾಗೂ ಬನ್ನೇರುಘಟ್ಟ ಕಾಡಿನಿಂದ ಇಲ್ಲಿಗೆ ಗುರುವಾರ ರಾತ್ರಿ ಬಂದಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಆದರೂ, ಜನನಿಬಿಜವಾದ ಈ ಸ್ಥಳಕ್ಕೆ ಅದೂ ಇಷ್ಟು ದೂರ ಈ ಆನೆಗಳು ಹೇಗೆ ಬಂತು ಎಂಬುದು ಅವರಿಗೂ ಆಶ್ಚರ್ಯ ತಂದಿದೆ.
ಅಂದಹಾಗೆ 17 ಆನೆಗಳ ಹಿಂಡಿನಲ್ಲಿ 4 ದೊಡ್ಡ ದಂತದ ಗಂಡಾನೆಗಳು ಹಾಗೂ 3 ಮರಿಗಳಿದ್ದವು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications