ಜನವರಿ 28ರಿಂದ ಐಹೊಳೆ, ಬಾದಾಮಿಯಲ್ಲಿ ‘ಪಟ್ಟದಕಲ್ಲು ಉತ್ಸವ’
ಬಳ್ಳಾರಿ : ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು, ಬಾದಾಮಿ ಹಾಗೂ ಐಹೊಳೆಯಲ್ಲಿ ಜಗದ್ವಿಖ್ಯಾತ ಪಟ್ಟದಕಲ್ಲು ರಾಷ್ಟ್ರೀಯ ಉತ್ಸವ ನಡೆಸಲು ಜಿಲ್ಲಾಡಳಿತ ನಿರ್ಧರಿಸಲಾಗಿದೆ. ಈ ಉತ್ಸವವು 2002ರ ಜನವರಿ 28ರಿಂದ 31ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗಾರಾಮ ಬಡೇರಿಯಾ ತಿಳಿಸಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಇದು ಒಂದು ರಾಷ್ಟ್ರೀಯ ಉತ್ಸವವಾದ ಹಿನ್ನೆಲೆಯಲ್ಲಿ ದೇಶದ ನಾನಾ ಭಾಗಗಳಿಂದ ಹೆಸರಾಂತ ಕಲಾವಿದರನ್ನು ಆಹ್ವಾನಿಸಲಾಗುವುದು. ಜಿಲ್ಲೆಯ ಕಲಾವಿದರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ಈ ರಾಷ್ಟ್ರೀಯ ಉತ್ಸವದಲ್ಲಿ ಜಾನಪದ ನೃತ್ಯಗಳು, ಶಾಸ್ತ್ರೀಯ ನೃತ್ಯ ಹಾಗೂ ಗಾಯನ ಸೇರಿದಂತೆ ಕನ್ನಡ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಇಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನೂ ಸಾರಲಾಗುತ್ತದೆ ಎಂದು ವಿವರಿಸಿದರು.
ಈ ಉತ್ಸವದಲ್ಲಿ ಪಾಲ್ಗೊಳ್ಳ ಬಯಸುವ ವಿವಿಧ ಕಲಾ ವಿಭಾಗಗಳ ಪರಿಣತರು ಹಾಗೂ ತಜ್ಞರು ತಮ್ಮ ಸಂಪೂರ್ಣ ವಿವರಗಳನ್ನು ಜನವರಿ 5ನೇ ತಾರೀಖಿನ ಒಳಗೆ ಜಿಲ್ಲಾಧಿಕಾರಿಗಳು, ಬಾಗಲಕೋಟೆ, (ಪಟ್ಟದಕಲ್ಲು ಉತ್ಸವ ಸಮಿತಿ), ಬಾಗಲಕೋಟೆ - 587102 ವಿಳಾಸಕ್ಕೆ ಕಳುಹಿಸಬಹುದು ಎಂದು ಅವರು ಹೇಳಿದರು.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications