ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮಾರತ್ತು ಈ ಹೊತ್ತು

By Staff
|
Google Oneindia Kannada News

ಬಾನೆತ್ತರದ ಇಮಾರತ್ತುಗಳ ಮೇಲೆ ಉಗ್ರರ ಕಣ್ಣು ನೆಟ್ಟಿರುವ ಈ ಸಮಯದಲ್ಲಿ ಭದ್ರತೆಯ ಚಿಂತನ ಮಂಥನ ಚಿರಂತರ. ಏನನ್ನು ಎಷ್ಟು ಮಾತಾಡಿದರೂ ಸಾಲದು. ಧುತ್ತೆಂದು ಮತ್ತೊಂದು ಪ್ರಶ್ನೆ ಇದಿರಾಗುತ್ತದೆ. ಜಗತ್ತಿನ ಹಿರಿಯಣ್ಣ ಎಂಬ ವಿಖ್ಯಾತಿ, ಕುಖ್ಯಾತಿ ಎರಡಕ್ಕೂ ಪಾತ್ರವಾಗಿರುವ ಬಲಾಢ್ಯ ಅಮೆರಿಕಾದ ಜಂಘಾಬಲವನ್ನೇ ಉಡುಗಿಸಿದ್ದು ಸೆಪ್ಟೆಂಬರ್‌ 11ರ ದಾಳಿ. ಭದ್ರತೆಯ ಭವ್ಯ ಸದನ ಪೆಂಟಗನ್‌ ಬುಡಕ್ಕೇ ಕೊಡಲಿಯಿಟ್ಟರು ಉಗ್ರರು. ವಿಶ್ವ ವ್ಯಾಪಾರ ಕೇಂದ್ರಕ್ಕೆ ವಿಮಾನ ಗುದ್ದಿದ ಪರಿ, ದಿನಗಟ್ಟಲೆ ಅಲ್ಲಿ ಹೊಗೆಯಾಡುವಷ್ಟು ತೀವ್ರವಾಗಿತ್ತು. ಲೆಕ್ಕವಿಲ್ಲದಷ್ಟು ಮಂದಿ ಸಾವನ್ನಪ್ಪಿದರು. ಪರಿಣಾಮ ಯುದ್ಧ. ಈಗಲೂ ನಡೆಯುತ್ತಲೇ ಇದೆ.

ನಿಮಗೆ ಗೊತ್ತೋ, ಇಲ್ಲವೋ; ಬಾನೆತ್ತರದ ಕಟ್ಟಡಗಳ ಅಂತರರಾಷ್ಟ್ರೀಯ ಒಕ್ಕೂಟ (International Federation for Highrise Structures IFHS) ಎಂಬುದೊಂದಿದೆ. ಇದು ಲಾಭ ಮಾಡದ ಸಂಸ್ಥೆ. ಜೊತೆಗೆ ಸರ್ಕಾರೇತರವೂ ಹೌದು. ಅಮೆರಿಕೆಯ ಸೆಂಟರ್‌ ಫಾರ್‌ ಹ್ಯೂಮನ್‌ ಸೆಟ್‌ಲ್‌ಮೆಂಟ್ಸ್‌ (ಹೆಬಿಟೇಟ್‌) ನಿಂದ ಪ್ರಮಾಣೀಕೃತವಾದ ಒಕ್ಕೂಟವಿದು. ಒಕ್ಕೂಟ ಈವರೆಗೆ ಬೆಂಗಳೂರು (ಭಾರತ), ಸಿಂಗಪೂರು, ಲಂಡನ್ನು (ಇಂಗ್ಲೆಂಡ್‌) ಮತ್ತು ಮದ್ರಿದ್‌ (ಸ್ಪೇನ್‌) ಗಳಲ್ಲಿ ನಾಲ್ಕು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸಿದೆ. ಎಲ್ಲಕ್ಕಿಂತ ಹೆಮ್ಮೆಯ ವಿಷಯವೆಂದರೆ ಈ ಒಕ್ಕೂಟದ ಅಧ್ಯಕ್ಷ ಬೆಂಗಳೂರಿನ ಬಿಎಂಎಸ್‌ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ.ಡಾ.ಎಚ್‌.ಆರ್‌.ವಿಶ್ವನಾಥ್‌.

ನವದೆಹಲಿಯ ಟಿವಿ ಟವರ್‌, ಬೆಂಗಳೂರಿನ ಕಾವೇರಿ ಭವನ, ಮೈಸೂರಿನ ಥೀಮ್‌ ಪಾರ್ಕ್‌ ಮೊದಲಾದ ಕಟ್ಟಡಗಳ ವಿನ್ಯಾಸಕಾರರಾದ ವಿಶ್ವನಾಥ್‌ ಮೇಷ್ಟ್ರು ಅಂತರರಾಷ್ಟ್ರೀಯ ಸಮ್ಮೇಳನಗಳ ಸಂಘಟಕರಾಗಿಯೂ ಅನುಭವ ಗಳಿಸಿದ್ದಾರೆ. ಅವರು ನಮ್ಮ ವೆಬ್‌ಸೈಟಿನ ಅಭಿಮಾನಿ ಎಂಬುದು ಇನ್ನೊಂದು ಹೆಮ್ಮೆಯ ವಿಷಯ.

ವಿಶ್ವನಾಥ್‌ ಮೇಷ್ಟ್ರು ತಮ್ಮ ಒಕ್ಕೂಟದ ಮುಂದಿನ ಕಾರ್ಯಕ್ರಮಗಳನ್ನು ಇ- ಮೇಲ್‌ ಮೂಲಕ ಪ್ರಕಟಿಸಲು ಬಯಸಿದ್ದಾರೆ. ಅವರ ಪ್ರಕಟಣೆಯ ಸಾರ ಹೀಗಿದೆ....

ಇತ್ತೀಚೆಗೆ ಉಗ್ರರು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆಸಿದ ಭಯಾನಕ ದಾಳಿ ಮತ್ತು ಮಾಸ್ಕೋದ ಟಿ.ವಿ.ಟವರ್‌ನಲ್ಲಿ ಸಂಭವಿಸಿದ ಬೆಂಕಿ ಅಪಘಾತದ ಹಿನ್ನೆಲೆಯಲ್ಲಿ ಐಎಫ್‌ಎಚ್‌ಎಸ್‌, ವರ್ಷಕ್ಕೊಂದರಂತೆ ನಾಲ್ಕು ಸಮ್ಮೇಳನಗಳನ್ನು ಆಯೋಜಿಸಿದೆ. 2002ರಲ್ಲಿ ಮೊದಲ ಸಮ್ಮೇಳನ ಮಲೇಷಿಯಾದ ಕೌಲಾಲಂಪುರದಲ್ಲಿ ನಡೆಯಲಿದೆ (ಜಗತ್ತಿನ ಅತಿ ಎತ್ತರದ ಅವಳಿ ಕಟ್ಟಡಗಳು ಇರುವುದು ಇಲ್ಲೇ). ಎರಡನೇ ಸಮ್ಮೇಳನವನ್ನು 2003ನೇ ಇಸವಿಯಲ್ಲಿ ಯುನೈಟೆಡ್‌ ಅರೇಬಿಕ್‌ ಎಮಿರೇಟ್ಸ್‌ನ ದುಬೈನಲ್ಲಿ ಆಯೋಜಿಸಲಾಗಿದೆ (ವಿಶ್ವದ ಅತಿ ಎತ್ತರದ ಹೊಟೇಲ್‌ ಇರುವುದು ಇದೇ ನಗರಿಯಲ್ಲಿ). ವಿಶ್ವದ ಅತಿ ಎತ್ತರದ ಟಿವಿ ಟವರನ್ನು ಉಳ್ಳ ಕೆನಡಾದ ಟೊರಾಂಟೋದಲ್ಲಿ ಮೂರನೆಯ ಸಮ್ಮೇಳನ 2004ರಲ್ಲಿ ನಡೆಯಲಿದೆ. ನಾಲ್ಕನೆಯ ಸಮ್ಮೇಳನ ನಡೆಯಲಿರುವುದು ನ್ಯೂಯಾರ್ಕ್‌ನಲ್ಲಿ (2005ರಲ್ಲಿ).

ಸೆಪ್ಟೆಂಬರ್‌ 11, 2001ರಂದು ಅಮೆರಿಕೆ ಮೇಲೆ ನಡೆದಿರುವ ದಾಳಿ ಅತಿ ಎತ್ತರದ ಇಮಾರತ್ತುಗಳ ಬಗೆಗಿನ ಒಲವನ್ನು ಕುಂದಿಸಿರುವುದಂತೂ ನಿಜ. ಆದರೂ ಇವು ವೈಭವದ ಪ್ರತೀಕ. ನ್ಯೂಯಾರ್ಕಿನ ಸೊಬಗು ಬೆಡಗಿಗೆ ಹಿಡಿದ ಕನ್ನಡಿ. ಎತ್ತರದ ಕಟ್ಟಡಗಳ ಬಗ್ಗೆ ಭಯ ಹೋಗಲಾಡಿಸಿ, ಅವುಗಳ ಹಿರಿಮೆಯನ್ನು ಹೆಚ್ಚಿಸಲು ಏನು ಮಾಡಬೇಕೆಂಬುದೇ ಈ ಸಮ್ಮೇಳನಗಳ ಸಾರ ಹಾಗೂ ಉದ್ದೇಶ; ಅದರಲ್ಲೂ ವಿಶೇಷವಾಗಿ ಅಮೆರಿಕೆಯ ಜನರಲ್ಲಿ.

ಹೆಚ್ಚಿನ ವಿಷಯಗಳಿಗೆ ಸಂಪರ್ಕಿಸಿ : President of IFHS by Fax 91806600440/ 91806603857 or by EMail: [email protected]

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X