ಗಣಪತಿ ಸಚ್ಚಿದಾನಂದ ಸ್ವಾಮೀಜಿಯಿಂದ ನಮಾಜು, ಇಫ್ತಾರ್ ಕೂಟ
ಮೈಸೂರು : ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕವಿನುಡಿಗೆ ಈ ಕಾರ್ಯಕ್ರಮವೊಂದು ಉದಾಹರಣೆ! ಹಿಂದೂ ಧಾರ್ಮಿಕ ಮುಖಂಡರೊಬ್ಬರು ನಮಾಜು ಮಾಡಿ, ಮುಸಲ್ಮಾನರಿಗೆ ಇಫ್ತಾರ್ ಕೂಟ ಏರ್ಪಡಿಸುವುದೆಂದರೆ ತಮಾಷೆಯ ಮಾತಾ? ಈ ಹೆಗ್ಗಳಿಕೆ ್ಫಗಣಪತಿ ಸಚ್ಚಿದಾನಂದ ಸ್ವಾಮಿ ಅವರದು.
ನಗರದಲ್ಲಿ ಶುಕ್ರವಾರ ನಡೆದ ಇಫ್ತಾರ್ ಕೂಟದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಮಾಜು ಮಾಡಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು. ಸ್ವಾಮೀಜಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ 500ಕ್ಕೂ ಹೆಚ್ಚು ಮಂದಿ ಮುಸ್ಲಿಂ ಹಾಗೂ ಹಿಂದೂಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ತಲೆಗೆ ಕೈ ಚೌಕ ಸುತ್ತಿ, ಮೊಣಕಾಲೂರಿ ಸ್ವಾಮೀಜಿಗಳು ಕೈಜೋಡಿಸಿ ನಮಾಜು ನಡೆಸಿದ್ದು ವಿಶೇಷವಾಗಿತ್ತು. ನಮಾಜಿನ ನಂತರ ಮಾತನಾಡಿದ ಸ್ವಾಮೀಜಿ, ಭಾರತ ಯಾವತ್ತೂ ಸಹಿಷ್ಣುತೆಯನ್ನು ಕಾಪಾಡಿಕೊಂಡು ಬಂದಿದೆ. ಇಲ್ಲಿರುವ ಸಂಕುಚಿತ ಮನೋಭಾವವನ್ನು ತೊಡೆದು ಹಾಕಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಗೋವಾ ಮತ್ತು ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಬಿ. ಶೇಕ್ ಅಲಿ, ಆಶ್ರಮದಲ್ಲಿನ ಧಾರ್ಮಿಕ ವಾತಾವರಣವನ್ನು ಶ್ಲಾಘಿಸಿದರು. ಸಚ್ಚಿದಾನಂದ ಸ್ವಾಮೀಜಿ 58 ದೇಶಗಳನ್ನು ಸುತ್ತಿದ್ದಾರೆ. ಅವುಗಳಲ್ಲಿ ಸುಮಾರು 24 ಮುಸ್ಲಿಂ ರಾಷ್ಟ್ರಗಳು. ಶಾಂತಿ ಮತ್ತು ಸಹಿಷ್ಣುತೆಯ ಪ್ರಚಾರವೇ ಸ್ವಾಮೀಜಿಗಳ ವಿದೇಶ ಪ್ರವಾಸದ ಉದ್ದೇಶ ಎಂದು ಬಿಜೆಪಿ ಶಾಸಕ ಎ. ರಾಮದಾಸ್ ಹೇಳಿದರು.
ಹಿರಿಯ ಮುಸ್ಲಿಂ ಧಾರ್ಮಿಕ ನಾಯಕರು ಹಾಗೂ ಶಿಕ್ಷಣ ತಜ್ಞರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಫರೂಕಿಯ ಸಂಸ್ಥೆಯ ಕಾರ್ಯದರ್ಶಿ ತಾಜ್ ಮಹ್ಮದ್ ಸ್ವಾಮೀಜಿಗಳಿಗೆ ಶಾಲು ಹಾಗೂ ಕಿರೀಟ ನೀಡಿ ಸನ್ಮಾನಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications