ಬೆಂಗಳೂರನ್ನು ಸಿಂಗಪೂರವನ್ನಾಗಿ ಮಾಡುವ ಹೊಣೆ ಯಾರದ್ದು?
ಬೆಂಗಳೂರು : ಯಾವಾಗ ಬೆಂಗಳೂರು ಸಿಂಗಪೂರವಾಗುತ್ತದೆ... ಅಂತ ಸಿನಿಕ ಮಂದಿ ನನ್ನನ್ನು ಕೇಳುತ್ತಾರೆ. ನಮ್ಮೂರು ಚೆಂದಾಗಬೇಕು ಎಂಬ ಆಸಕ್ತಿ ನಾಗರಿಕರಿಗೆ ಇಲ್ಲದೇ ಇದ್ದರೆ ನಗರ ಹೇಗೆ ಅಭಿವೃದ್ಧಿ ಹೊಂದುವುದು ಸಾಧ್ಯ...? ಎಂದು ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಪ್ರಶ್ನಿಸಿದ್ದಾರೆ.
ಅವರು ಶುಕ್ರವಾರ ನಗರದ 100 ವಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಲು ಸಂಯೋಜಿಸಿರುವ ಜನಾಗ್ರಹದ ಮೂರನೇ ಸಮುದಾಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬೇರೆಯವರ ಸಾಧನೆಗಳನ್ನು ಪ್ರಶ್ನಿಸುವ ಮುನ್ನ ತಮ್ಮನ್ನು ತಾವು ಅವಲೋಕಿಸಿಕೊಳ್ಳಬೇಕು. ಹಾಳು ಹರಟೆ ಮಾತಾಡುವುದು ಬಿಟ್ಟು ಉತ್ತಮ ಕೆಲಸಗಳತ್ತ ಗಮನ ಹರಿಸುವುದು ಒಳ್ಳೆಯದು ಎಂದು ಕೃಷ್ಣ ಸಿಂಗಪೂರ ಕನಸನ್ನು ಗೇಲಿ ಮಾಡುವವರಿಗೆ ಸಲಹೆ ಮಾಡಿದರು.
ನಗರ ಸುಂದರವಾಗಬೇಕಿದ್ದರೆ ನಮ್ಮ ನೆರೆ ಮನೆ ಚೆನ್ನಾಗಿರಬೇಕು ಎಂಬ ಪ್ರಜ್ಞೆ ನಾಗರಿಕರಲ್ಲಿರಬೇಕು. ಆಡಳಿತದ ವಿಕೇಂದ್ರೀಕರಣಕ್ಕೆ ಸರಕಾರ ಬದ್ಧವಾಗಿದೆ. ಬೆಂಗಳೂರು ಕಾರ್ಯನಿರತ ಪಡೆ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತವಾಗಿದೆ. ನಗರಾಭಿವೃದ್ಧಿಗಾಗಿ ಜನಾಗ್ರಹವೂ ಜನರ ಭಾಗವಹಿಸುವಿಕೆಯಾಂದಿಗೆ ಆರಂಭವಾಗಿದೆ. ನಾಗರಿಕರೇ ಬೆಂಗಳೂರನ್ನು ಸಿಂಗಪೂರ ಮಾಡಬೇಕು ಎಂದು ಕೃಷ್ಣ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಟಿ ಸಚಿವ ಬಿ.ಕೆ. ಚಂದ್ರಶೇಖರ್, ಸ್ಥಾಪಿತ ಹಿತಾಸಕ್ತಿಗಳಿಲ್ಲದ ಈ ಜನಾಗ್ರಹದಲ್ಲಿ ಸಾರ್ವಜನಿಕರೆಲ್ಲರೂ ಕೈಜೋಡಿಸಬೇಕು ಎಂದು ಕೇಳಿಕೊಂಡರು. ಜನಾಗ್ರಹ ಆಂದೋಳನದ ಸಂಯೋಜಕ ರಮೇಶ್ ರಾಮನಾಥನ್ ಆಂದೋಳನದಲ್ಲಿ ಭಾಗವಹಿಸಲು ಇಚ್ಛಿಸುವವರು ಸಂಪರ್ಕಿಸಬೇಕಾದ ಕಚೇರಿಗಳ ಬಗ್ಗೆ ಮಾಹಿತಿ ನೀಡಿದರು. ದೂರವಾಣಿ : 080-3330668/3542381
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications