‘ಇ- ಕಾಮರ್ಸ್ ಮೇಲಿನ ತೆರಿಗೆಯಿಂದ ಐಟಿ ಪ್ರಗತಿ ಕುಂಠಿತ’
ಬೆಂಗಳೂರು : ಅಂತರ್ಜಾಲದಲ್ಲಿ ಅರ್ಥಾತ್ ಇಂಟರ್‌ನೆಟ್ ಮೂಲಕ ನಡೆಯುವ ಇ-ವಾಣಿಜ್ಯ ವ್ಯವಹಾರಗಳ ಮೇಲೆ ತೆರಿಗೆ ವಿಧಿಸದಂತೆ ಎಂಫಾಫಿಸ್ ಬಿಎಫ್‌ಎಲ್ ಸಂಸ್ಥೆಯ ಅಧ್ಯಕ್ಷ ಜಯತೀರ್ಥರಾವ್ ಒತ್ತಾಯಿಸಿದ್ದಾರೆ. ಇ-ವಾಣಿಜ್ಯದ ಮೇಲೆ ತೆರಿಗೆ ಹೇರುವುದರಿಂದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾದ ಕಂಪನಿ ಕಾರ್ಯದರ್ಶಿಗಳ 29ನೇ ರಾಷ್ಟ್ರೀಯ ಸಮಾವೇಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಅಮೆರಿಕ ರಾಷ್ಟ್ರದಲ್ಲಿ ಇ- ವಾಣಿಜ್ಯದ ಮೇಲೆ ತೆರಿಗೆ ಹೇರಿಲ್ಲ. ಐ.ಟಿ. ಕ್ಷೇತ್ರದ ಉಳಿವಿಗೆ ಭಾರತದಲ್ಲೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.
ಹಾಲಿ ಜಾರಿಯಲ್ಲಿರುವ ಕಾಯಿದೆಗಳಲ್ಲಿ ಉದ್ಯಮ ಬೆಳವಣಿಗೆಗೆ ಹಲವಾರು ತೊಡಕುಗಳಿವೆ. ಮಿಗಿಲಾಗಿ ಇ-ವಾಣಿಜ್ಯ ಬೆಳವಣಿಗೆಗೆ ಇದು ಪೂರಕವಾಗಿಲ್ಲ ಎಂದರು. ಅವುಗಳನ್ನು ಸರಿಪಡಿಸಿ ಸಮಗ್ರ ಕಾಯಿದೆ ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಸೈಬರ್ ಕ್ರೆೃಮ್: ಕಂಪ್ಯೂಟರ್ ಕ್ರಾಂತಿಯ ತರುವಾಯ ರಾಷ್ಟ್ರದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ಕ್ರೆೃಂ ನಿಯಂತ್ರಣಕ್ಕೆ ಗಂಭೀರ ಚಿಂತನೆ ನಡೆಸಬೇಕು ಹಾಗೂ ವಾಣಿಜ್ಯೋದ್ಯಮ ಬೆಳವಣಿಗೆಗೆ ಸಹಕಾರಿಯಾಗುಂಥಹ ಕಾಯಿದೆ ರೂಪಿಸಬೇಕು ಎಂದು ವಿಜಯಾಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೈಖೇಲ್ ಬ್ಯಾರಿಸ್ಟನ್ ಹೇಳಿದರು.
ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಡಾ. ಪಿ.ವಿ.ಎಸ್. ಜಗನ್ ಮೋಹನ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರದ ವಿವಿಧ ಸಂಸ್ಥೆಗಳ ಕಾರ್ಪೊರೇಟ್ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. 3 ದಿನಗಳ ಕಾಲ ಈ ಸಮಾವೇಶ ಜರುಗಲಿದೆ.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications