ಬಯೋಟೆಕ್ ಪಾರ್ಕ್ ಉಳಿಸಿಕೊಳ್ಳಲು ಸರಕಾರದ ಪ್ರಯತ್ನ
ಬೆಂಗಳೂರು : ಬಯೋಟೆಕ್ ಪಾರ್ಕ್ ಸ್ಥಾಪನೆ ಬಗ್ಗೆ ಸರಕಾರ ಮತ್ತೆ ಚುರುಕಾಗಿದೆ. ಬಿಟಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯ ಬಗ್ಗೆ 10 ದಿನಗಳ ಒಳಗಾಗಿ ಅಂತಿಮ ತೀರ್ಮಾನ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಈ ವಿಷಯವನ್ನು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣದಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಚಿವರು, ಬಿಟಿ ಪಾರ್ಕ್‌ಗಾಗಿ ದೇವನಹಳ್ಳಿ ಬಳಿ 300 ಎಕರೆ ಭೂಮಿ ಮತ್ತು ಜೈವಿಕ ತಂತ್ರಜ್ಞಾನ ಸಂಶೋಧನೆ ಕೇಂದ್ರ ಸ್ಥಾಪನೆಗೆ ಕೃಷಿ ವಿದ್ಯಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಆಸುಪಾಸಿನಲ್ಲಿ 50 ಎಕರೆ ಜಮೀನು ಖರೀತಿಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸರಕಾರದ ವಿಳಂಬ ನೀತಿಯಿಂದ ಬೇಸತ್ತಿರುವ ಕೆಲವು ಬಿಟಿ ಕಂಪನಿಗಳು ಹೈದರಾಬಾದ್‌ನತ್ತ ಪ್ರಯಾಣ ಬೆಳೆಸಿರುವುದನ್ನು ಒಪ್ಪಿಕೊಂಡ ಅವರು, ಆದಷ್ಟು ಬೇಗ ಭೂಮಿ ಸಮಸ್ಯೆಯನ್ನು ಬಗೆಹರಿಸಿ, ಈ ಕಂಪನಿಗಳು ಬೆಂಗಳೂರಿನಲ್ಲೇ ಬಿಟಿ ವಲಯದಲ್ಲಿ ಹಣ ತೊಡಗಿಸುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಜೈವಿಕ ತಂತ್ರಜ್ಞಾನ ಸಂಶೋದನೆ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಸರಕಾರವೇ ಒದಗಿಸಲಿದ್ದು, ಉಳಿದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಟಿ ಪಾರ್ಕ್‌ನಲ್ಲಿ ವಹಿವಾಟು ನಡೆಸುವ ಕಂಪನಿಗಳ ಮನವೊಲಿಸಲಾಗುವುದು ಎಂದೂ ಚಂದ್ರಶೇಖರ್ ಹೇಳಿದರು.
ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications