ನಗರಗಳ ಕುಡಿಯುವ ನೀರು ಪೂರೈಕೆ ಖಾಸಗಿ ತೆಕ್ಕೆಗೆ: ಕೃಷ್ಣ ಇಂಗಿತ
ಬೆಂಗಳೂರು : ರಾಜ್ಯದ ನಗರ ಪ್ರದೇಶಗಳ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸಲು ರಾಜ್ಯ ಸರಕಾರ ಚಿಂತಿಸಿದೆ. ಈ ಬಗ್ಗೆ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ಈ ವಿಷಯವನ್ನು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಲ್ಲಿ ತಿಳಿಸಿದ್ದಾರೆ.
ಕೃಷ್ಣರಾಜಪುರ ಕೇಂದ್ರವಾಗುಳ್ಳ ಬೆಂಗಳೂರು ಪೂರ್ವ ತಾಲೂಕಿನ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಗಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲ ನಾಗರಿಕರಿಗೂ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಒದಗಿಸಲು ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವುದು ಅನಿವಾರ್ಯವಾಗಿದೆ ಎಂದರು.
ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರಕಾರಕ್ಕೆ ಕಷ್ಟಸಾಧ್ಯವಾಗಿದೆ. ನೀರು, ರಸ್ತೆ, ವಿದ್ಯುತ್ ಆಸ್ಪತ್ರೆಗಳ ನಿರ್ವಹಣೆಯನ್ನು ಸರಕಾರವೊಂದೇ ನೋಡಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಸರಕಾರದ ಪಾಲುದಾರಿಕೆಯಲ್ಲಿ ಪ್ರಾಯೋಗಿಕವಾಗಿ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಿಕೊಡಲು ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸನ್ನಿವೇಶದಲ್ಲಿ ಮುಂದಿನ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಯೋಜನೆ ರೂಪಿಸಬೇಕಿದೆ. ಆ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಈ ಹೊತ್ತು ವಿಶ್ವದ ಗಮನವನ್ನೇ ಸೆಳೆದಿರುವ ಬೆಂಗಳೂರಿಗೆ, ಈ ಬ್ರಾಂಡ್ ನೇಮ್ ಕಾಯಂ ಆಗಬೇಕಾದರೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯಬೇಕು ಎಂದು ಕೃಷ್ಣ ಹೇಳಿದರು. ಸಕ್ಕರೆ ಹಾಗೂ ಪಶುಸಂಗೋಪನೆ ಖಾತೆ ಸಚಿವ ಎ. ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications