ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರದೊಂದು ಡೈರೆಕ್ಟರಿ; ಕಟ್ಟಿಕೊಡುತ್ತಿದ್ದಾರೆ ಸನ್ನಿ

By Staff
|
Google Oneindia Kannada News

*ಎಸ್ಕೆ. ಶಾಮಸುಂದರ, Email : [email protected]

ಮೇಲಧಿಕಾರಿ ಕೊಡುವ ಅಸೈನ್‌ಮೆಂಟ್‌ ಯಾವತ್ತಾದರೂ ಕೆಲಸಗಾರರಿಗೆ ಸ್ಫೂರ್ತಿ ನೀಡುವುದುಂಟಾ... ಬಾಸ್‌ ಕೊಡುವ ಕೆಲಸವನ್ನು ‘ಶುರುವಾಯಿತು ವರಾತ...’ ಅಂತಲೇ ನೌಕರರು ಕೈಗೆತ್ತಿಕೊಳ್ಳುವುದು ಲೋಕರೂಢಿ. ಆದರೆ ಬಾಸ್‌ ಕೊಡುವ ವರಾತವೇ ಸಾಧನೆಯಾಂದಕ್ಕೆ ಸ್ಫೂರ್ತಿಯಾಗಬಾರದು ಅಂತೇನಿದೆ ..

ಉದಾಹರಣೆಗೆ ಸನ್ನಿ ಕುಲತಕಲ್‌ ಅವರನ್ನೇ ನೋಡಿ. (ಹೆಸರು ನೋಡಿದರೆ ಮಲಯಾಳಿ ಥರ ಕಾಣತ್ತೆ. ಕನ್ನಡ ವೆಬ್‌ಸೈಟಿನಲ್ಲಿ ಅವರಿಗೇಕೆ ಜಾಗ ಎನ್ನುತ್ತೀರಾ ?) ಒಂದು ಕಾಲದಲ್ಲಿ ಸನ್ನಿ ಇಲ್ಲಸ್ಟ್ರೇಟೆಡ್‌ ವೀಕ್ಲಿಯಲ್ಲಿ ಕೆಲಸ ಮಾಡುತ್ತಿದ್ದರು. ವರದಿಗಾರರೆಂದ ಮೇಲೆ ಅಸೈನ್‌ಮೆಂಟ್‌ಗಳ ಬಗ್ಗೆ ಬೇರೆ ಹೇಳಬೇಕಾ. ಗಲ್ಫ್‌ನಲ್ಲಿ ನೆಲಸಿರುವ ಭಾರತೀಯರ ಜೀವನ ಶೈಲಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಮಾಡು ಅಂತ ಪತ್ರಿಕೆ ಸನ್ನಿಗೆ ವಿಮಾನದ ಟಿಕೇಟು ಕೊಟ್ಟು ಕಳಿಸಿಯೇ ಬಿಟ್ಟಿತು.

ಸನ್ನಿ ಗಲ್ಫ್‌ಗೆ ಹೋದರು. ಗಲ್ಫ್‌ನಲ್ಲಿ ಭಾರತೀಯರ ಜನಜೀವನ, ಅವರು ಅಲ್ಲಿ ಅಡ್ಜೆಸ್ಟ್‌ ಆಗಲಿಕ್ಕೆ ಪಡುವ ಕಷ್ಟ, ಅಲ್ಲಿನ ಭಾಷೆ ತಿಳಿಯದೆ ಒದ್ದಾಟ.. ಮಸ್ಕತ್‌ನಿಂದ ಕುವೈತ್‌ವರೆಗಿನ ಭಾರತೀಯರ ಬದುಕು... ಎಲ್ಲ ವನ್ನೂ ಸನ್ನಿ ಬರೆದರು. ಗಲ್ಫ್‌ ಭಾರತೀಯರ ಡೈರೆಕ್ಟರಿ ರೆಡಿಯಾದದ್ದು ಆಗಲೇ. ಜೊತೆಗೊಂದು ಹೊಸ ಪ್ರೊಜೆಕ್ಟ್‌ನ ಐಡಿಯಾ ಕೂಡ ಚಕ್ಕಂತ ಹೊಳೆಯಿತು. ಸನ್ನಿ ಈಗ ಆ ಹೊಸ ಯೋಜನೆ- ವಿಶ್ವದಾದ್ಯಂತ ಇರುವ ಅನಿವಾಸಿ ಭಾರತೀಯರದ್ದೊಂದು ಡೈರೆಕ್ಟರಿ ತಯಾರಿಕೆಯಯಲ್ಲಿ ವ್ಯಸ್ತರು. ತ್ರಿವಿಕ್ರಮ ಕೆಲಸ.

ಸದ್ಯ ಬೆಂಗಳೂರಿನಲ್ಲಿರುವ ಸನ್ನಿ ನಮ್ಮ ವೆಬ್‌ಸೈಟಿಗೆ ಮಾತನಾಡಿದರು :

ಇನ್ನು ಮೂರು ವರ್ಷ ಕಳೆದರೆ ಷಷ್ಟ್ಯಬ್ಧಿ ಆಚರಿಸಿಕೊಳ್ಳಲಿರುವ ಸನ್ನಿ ಕುಲತಕಲ್‌ಗೆ 18ರ ಹುಮ್ಮಸ್ಸು. ವಾಸ ಬಹರೈನ್‌ನಲ್ಲಿ. ಹಾಕಿಕೊಂಡ ಯೋಜನೆಯನ್ನ ಇನ್ನು ನಾಲ್ಕು ವರ್ಷದೊಳಗೆ ಮುಗಿಸಬೇಕು ಅಂತ ಪ್ರತಿಜ್ಞೆ ಮಾಡಿಕೊಂಡಿದ್ದಾರೆ. ವಿದೇಶದಲ್ಲಿರುವ ಭಾರತೀಯರ ಸಂಘ ಸಂಸ್ಥೆಗಳ ನೆರವಿಗಾಗಿ ಓಡಾಡುತ್ತಿದ್ದಾರೆ. ಈ-ಮೇಯ್ಲ್‌, ವೆಬ್‌ಸೈಟ್‌..ರಾಯಭಾರಿ ಕಚೇರಿಗಳು ಅಂತ ಮಾಹಿತಿಗಾಗಿ ಚಣಚಣವೂ ದುಡಿತ, ಅಲೆತ.

ಸನ್ನಿ ಹೊರತರುವ ಡೈರಕ್ಟರಿಯ ಮೊದಲ ಸಂಪುಟದಲ್ಲಿ 40 ಸಾವಿರ ಮಂದಿ ಅನಿವಾಸಿ ಭಾರತೀಯರ ವ್ಯಕ್ತಿಚಿತ್ರ ಇರುತ್ತದಂತೆ. ಭಾರತೀಯರು ಸಾಮಾನ್ಯರೇ.. ಹೋದಲ್ಲಿ ಒಂದಲ್ಲ ಒಂದು ಮಹತ್ವದ ಕೆಲಸ ಮಾಡಿಯೇ ತೀರುತ್ತಾರೆ. ಅವರದೇ ಆದ ಇಮೇಜ್‌ ಬೆಳೆಸಿಕೊಂಡಿರ್ತಾರೆ. ಅವರ ವ್ಯಕ್ತಿಚಿತ್ರ ಬರೆಯುವುದು ಕುಶಾಲಿನ ಮಾತಾ... ನನಗೆ ಗಲ್ಫ್‌ ಭಾರತೀಯರ ಡೈರೆಕ್ಟರಿ ತಯಾರಿಸಲಿಕ್ಕೇ ಮೂರು ವರ್ಷ ಬೇಕಾಯ್ತು ಅಂತ ಬಲಗೈನ ಮೂರು ಬೆರಳು ತೋರಿಸುತ್ತಾ ಸನ್ನಿ ಹೇಳುತ್ತಾರೆ.

ಅಂದಹಾಗೆ, ಗಲ್ಫ್‌ ಭಾರತೀಯರ ಡೈರೆಕ್ಟರಿ-2002 ಬರುವ ವರ್ಷದ ಆರಂಭದಲ್ಲಿ ಬಿಡುಗಡೆಯಾಗುತ್ತದೆ. ಸನ್ನಿ ಬಳಿ ಇನ್ನೊಂದು ಯೋಚನೆ ಇದೆ- ಬಹರೈನ್‌ನಲ್ಲಿರುವ ಭಾರತೀಯರ ಬಗೆಗೇನೆ 500 ಪುಟ ಎಕ್ಸ್‌ಕ್ಲುಸಿವ್‌ ಎಡಿಷನ್‌ ತರುವುದು. ಈ ಡೈರೆಕ್ಟರಿಯನ್ನು ಗಲ್ಫ್‌ ನ್ಯೂಸ್‌ ಡೈಲಿ ವಿತರಿಸುವ ಹೊಣೆ ಹೊತ್ತಿದೆ. ‘

ವಿಶ್ವ ಸುತ್ತಿ ಬರಬೇಕು ಸ್ವಾಮಿ...

ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಅನ್ನೋ ಗಾದೆ ಕೇಳಿದ್ದೀರಾ...’ ಸನ್ನಿ ಅದನ್ನು ನಂಬುತ್ತಾರೆ. ಗಲ್ಫ್‌ ಭಾರತೀಯರ ಡೈರೆಕ್ಟರಿಯಿಂದ ಬರುವ ಹಣವನ್ನು ಓದೋ ಮಕ್ಕಳಿಗೆ ಸಹಾಯ ಮಾಡಲಿಕ್ಕೇಂತ ಎತ್ತಿಡುತ್ತಾರೆ. ಎಂಎಸ್‌ಆರ್‌ಐಟಿ, ಬೆಂಗಳೂರಿನ ದಯಾನಂದ ಸಾಗರ್‌ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಓದುವ ಮಕ್ಕಳಿಗೆ ಸ್ಕಾಲರ್‌ ಷಿಪ್‌ ಕೊಡುವ ಯೋಚನೆ ಇದೆ. ಗಲ್ಫ್‌ನಲ್ಲಿನ ಬಡ ಭಾರತೀಯ ನಿರಾಶ್ರಿತರಿಗೂ ಸಹಕರಿಸುವ ಪ್ಲಾನ್‌ ಕೂಡ ಉಂಟು.

ಇಷ್ಟೆಲ್ಲಾ ಯಾತಕ್ಕೆ ಮಾಡಬೇಕು

ಸುಮ್ಮನೇ ಹೆಂಡತಿ ಮಕ್ಕಳೆಂದು ಆರಾಮವಾಗಿರಬಾರದಾ? ಈ ಡೈರೆಕ್ಟರಿ ಕೆಲಸ ವರ್ಷಗಳಲ್ಲಿ ಪೂರ್ತಿಯಾಗುವುದುಂಟಾ ? ಆದರೆ, ಸನ್ನಿ ಅವರಿಗಿದು ಬರೀ ಡೈರೆಕ್ಟರಿ ಮಾತ್ರವಲ್ಲ. ಈ ಪ್ರಯತ್ನ ಮಾನವೀಯ ಸಂಬಂಧಗಳು, ಜೀವನ ಶೈಲಿ, ಅಂತರರಾಷ್ಟ್ರೀಯ ಸಂಬಂಧಗಳಿಗೆ ಪೂರಕ ಎಂದು ನಂಬಿದವರು. ಜಗತ್ತಿನಾದ್ಯಂತ ಇರುವ ಭಾರತೀಯರ ವ್ಯಕ್ತಿಚಿತ್ರಕ್ಕಾಗಿ ವಿಶ್ವ ಸುತ್ತಿ ಬರಬೇಕು. ಅದೂ ರೋಚಕ ಅನುಭವ.

ಇನ್ನೊಂದು ಮಾತು. ಸನ್ನಿಯವರ ಬಹುಮುಖಿ ಆಸಕ್ತಿಗಳ ಕುರಿತಾದ್ದು. ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವ ಮಲಯಾಳೀ ಸಮ್ಮೇಳನದ ಮುಖ್ಯ ಸಂಯೋಜಕ ಜವಾಬ್ದಾರಿಯೂ ಅವರ ಹೆಗಲಿಗಿದೆ. ಈ ಮನುಷ್ಯನಿಗೆ ಈಪಾಟಿ ಟೈಂ ಎಲ್ಲಿಂದ ಬರುತ್ತದೆ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಸನ್ನಿ ಒಳ್ಳೆಯ ಉದಾಹರಣೆ.

ಅಂದಹಾಗೆ- ಸನ್ನಿಯವರ ವಿಶ್ವ ಅನಿವಾಸಿ ಭಾರತೀಯರ ಡೈರೆಕ್ಟರಿಯಲ್ಲಿ ನಿಮ್ಮ ವ್ಯಕ್ತಿ ಚಿತ್ರ ದಾಖಲಿಸಬೇಕಾ... ತಕ್ಷಣ ಈಮೇಯ್ಲ್‌ ಮಾಡಿ. [email protected], ಫೋನಾದರೂ ಸರಿ. 080 5258675. ಹಾಗೇ ನಮಗೂ ಎರಡು ಸಾಲು ಬರೆದರೆ ಓದಿ ಖುಷಿ ಪಡುತ್ತೇವೆ.

ಮುಖಪುಟ / ಲೋಕೋಭಿನ್ನರುಚಿ


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X