ವೀರಪ್ಪನ್ ಪತ್ತೆ ಅಮೆರಿಕಾದ ರೇಡಾರ್‌ಗೆ ಸಾಧ್ಯ: ಸರ್ಕಾರ ಕೊಳ್ಳುತ್ತದಾ?
ಬೆಂಗಳೂರು: ಅತ್ಯಾಧುನಿಕ ರೇಡಾರ್ ತಂತ್ರಜ್ಞಾನ ಬಳಸಿ ದಟ್ಟಾರಣ್ಯದಲ್ಲಿ ಅಡಗಿಕೊಂಡಿರುವ ನರಹಂತಕ ವೀರಪ್ಪನ್ ಸುಳಿವನ್ನು ಪತ್ತೆ ಮಾಡಬಹುದು ಎಂದು ಎಲೆಕ್ಟ್ರಾನಿಕ್ ರೇಡರ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಲ್‌ಆರ್‌ಡಿಇ) ಮಾಜಿ ನಿರ್ದೇಶಕ ಡಾ। ಆರ್.ಪಿ. ಶೆಣೈ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಅಭಿವೃದ್ಧಿ ಪಡಿಸಿರುವ ಫೊಪೆನ್ ರೇಡರ್ ನಿಧಾನಗತಿಯ ಗುರಿಗಳನ್ನು ನಿಖರವಾಗಿ ಗುರ್ತಿಸುವ ಸಾಮರ್ಥ್ಯ ಹೊಂದಿದೆ. ದಟ್ಟಾರಣ್ಯದಲ್ಲಿ ಅಡಗಿಕೊಂಡಿರುವ ಯಾವುದೇ ಶಂಕಾಸ್ಪದ ಚಟುವಟಿಕೆಗಳನ್ನು ಈ ರೇಡರ್ ಗುರ್ತಿಸಬಲ್ಲದು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶೆಣೈ ಹೇಳಿದರು.
ಮರಳುಗಾಡಿನಿಂದ ದಟ್ಟಾರಣ್ಯದೊಳಗೆ ಯಾವುದೇ ವಾತಾವರಣ ಹಾಗೂ ಪ್ರತಿಕೂಲ ಹವಾಮಾನದಲ್ಲೂ ಫೊಪೆನ್ ಕಾರ್ಯ ನಿರ್ವಹಿಸಬಲ್ಲುದು. ಇಂಥ ರೇಡಾರ್ ಅಭಿವೃದ್ಧಿಪಡಿಸಲು ಭಾರತಕ್ಕೆ ಏಳೆಂಟು ವರ್ಷ ಬೇಕಾಗಬಹುದು. ಆದ್ದರಿಂದ, ತಕ್ಷಣಕ್ಕೆ ವೀರಪ್ಪನ್ ಪತ್ತೆ ಹಚ್ಚಲು ಅಮೆರಿಕಾದಿಂದ ರೇಡಾರ್ ಖರೀದಿಸಬಹುದು ಎಂದು ಶೆಣೈ ಸರ್ಕಾರಕ್ಕೆ ಸಲಹೆ ಮಾಡಿದರು.
ಡಿಸೆಂಬರ್ 12 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ರೇಡಾರ್ ಸಮ್ಮೇಳನ (ಐಆರ್‌ಎಸ್‌ಐ)- 2001 ರ ಕುರಿತು ಶೆಣೈ ಸುದ್ದಿಗಾರರಿಗೆ ವಿವರಗಳನ್ನು ನೀಡಿದರು. ಭಾರತ ಹಾಗೂ ವಿದೇಶಗಳ ಸುಮಾರು 350 ಅತಿಥಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. 101 ತಂತ್ರಜ್ಞಾನ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಮ್ಮೇಳನ ಸಮಿತಿಯ ಅಧ್ಯಕ್ಷ ಸಿಪಿಕೆ ಮೆನನ್ ಹೇಳಿದರು.
ಬಾಲಂಗೋಚಿ : ಒಸಾಮನನ್ನು ಪತ್ತೆ ಹಚ್ಚಲು ಈ ರೇಡಾರ್ ಬಳಕೆಯಾಗಿದೆಯೇ ಅಥವಾ ಈ ರೇಡಾರ್‌ನಿಂದ ಒಸಾಮನ ಪತ್ತೆ ಸಾಧ್ಯವೇ ಎನ್ನುವ ಕುರಿತು ಶೆಣೈ ಏನನ್ನೂ ಹೇಳಿಲ್ಲ .
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications