ಮುಳಬಾಗಿಲು ಬಳಿ ರಸ್ತೆ ಅಪಘಾತ : ಕೆಂಗೇರಿಯ 9 ಮಂದಿ ಸಾವು
ಕೋಲಾರ : ಟಾಟಾ ಸುಮೋ ಹಾಗೂ ಲಾರಿಯ ನಡುವೆ ಮುಳಬಾಗಿಲು ಬಳಿ ಸೋಮವಾರ ರಾತ್ರಿ 7-30ರ ಸುಮಾರಿನಲ್ಲಿ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐದು ವರ್ಷದ ಬಾಲಕ, ಮೂವರು ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ.
ಮುಳಬಾಗಲು ಬೈಪಾಸ್ ರಸ್ತೆಯಲ್ಲಿ ನಡೆದ ಈ ಅಪಘಾತದಲ್ಲಿ ಮಗು, ಐವರು ಪುರುಷರು, 3 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರು. ಲಾರಿಯ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಇಲ್ಲಿನ ಜಾಲಪ್ಪ ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಸಾವನ್ನಪ್ಪಿದವರಲ್ಲರೂ ಬೆಂಗಳೂರು ಸಮೀಪದ ಕೆಂಗೇರಿಯವರು. ಇವರು ಕಡೆ ಕಾರ್ತೀಕ ಸೋಮವಾರದ ನಿಮಿತ್ತ ಕೋಟಿಲಿಂಗದರ್ಶನಕ್ಕಾಗಿ ತೆರಳಿದ್ದರು. ಕೋಲಾರ ಬಳಿಯ ಬಂಗಾರ ತಿರುಪತಿ, ಕೋಟಿಲಿಂಗೇಶ್ವರ ದರ್ಶನ ಮಾಡಿಕೊಂಡು ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು.
ಮರಳು ಲಾರಿಯಾಂದು ಮತ್ತೊಂದು ವಾಹನವನ್ನು ಹಿಂದೆ ಹಾಕುವ ಯತ್ನದಲ್ಲಿ ಎದುರಿಗೆ ಬರುತ್ತಿದ್ದ ಟಾಟಾಸುಮೋಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿಯು ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮಕ್ಕೆ ಸೇರಿದ್ದು, ಲಾರಿ ಚಾಲಕ ಬಾಲರಾಜ್ ಪರಾರಿಯಾಗಿದ್ದಾನೆ. ಮೃತ ದೇಹಗಳನ್ನು ಮುಳಬಾಗಿಲು ಆಸ್ಪತ್ರೆಯಲ್ಲಿಡಲಾಗಿದೆ.
ಗಾಯಾಳುಗಳಾದ ರಾಮಮೂರ್ತಿ, ಅವರ ಇಬ್ಬರು ಮಕ್ಕಳಾದ ಅರುಣ್ ಕುಮಾರ್, ಅಶ್ವಿನಿ ಹಾಗೂ ಧನಲಕ್ಷ್ಮೀ, ಯಶೋಧಾ ಮತ್ತು ಲಾರಿಯಲ್ಲಿದ್ದ ಕೂಲಿಯಾಳು ತಾವರೆಕೆರೆಯ ನಾರಾಯಣ ಸ್ವಾಮಿ ಸಹ ಗಾಯಗೊಂಡಿದ್ದು ಈ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications