ವೀರಪ್ಪನ್‌ನನ್ನು ಹಿಡಿವವರೆಗೆ ಎಂ.ಎಂ.ಹಿಲ್ಸ್‌ನಲ್ಲಿ ಗಣಿಗಾರಿಕೆ ಇಲ್ಲ
ಬೆಂಗಳೂರು : ಕಾಡುಗಳ್ಳ ವೀರಪ್ಪನ್ ಹಾಗೂ ಆತನ ಸಹಚರರನ್ನು ವಿಶೇಷ ಕಾರ್ಯಪಡೆ ಬಂಧಿಸುವವರೆಗೆ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಗ್ರಾನೈಟ್ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ . ಸರಕಾರ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸದಂತೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವುದೂ ಇಲ್ಲ ಎಂದು ರಾಜ್ಯ ಗಣಿ ಖಾತೆ ಸಚಿವ ವಿ. ಮುನಿಯಪ್ಪ ಸೋಮವಾರ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸಚಿವರು, 1999ರ ಅವಧಿಯಲ್ಲಿ ಅಂದಿನ ಡಿ.ಜಿ.ಪಿ. ಅವರ ವರದಿಯ ಆಧಾರದ ಮೇಲೆ ಸರಕಾರವು ನಿಷೇಧವನ್ನು ಹಿಂದಕ್ಕೆ ಪಡೆದಿತ್ತು. ಆದರೆ, ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಅವರ ಅಪಹರಣಾನಂತರ ಮತ್ತೆ ಇಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಯಿತು ಎಂದು ಅವರು ಹೇಳಿದರು.
ಈ ಪ್ರದೇಶದ ಗಣಿ ಉದ್ಯಮಿಗಳು ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಇದರಿಂದ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ತೊಡಕಾಗುವ ಸಂಭವ ಇರುವುದರಿಂದ ಸರಕಾರ ನಿಷೇಧವನ್ನು ಹಿಂದಕ್ಕೆ ಪಡೆಯಲು ಸಿದ್ಧವಿಲ್ಲ ಎಂದು ಅವರು ವಿವರಿಸಿದರು.
ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆ ನಡೆಸದಂತೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಸರಕಾರದ ಬೊಕ್ಕಸಕ್ಕೆ 100 ಕೋಟಿ ರುಪಾಯಿ ನಷ್ಟ ಸಂಭವಿಸಿದೆ ಎಂದು ಸಚಿವರು ತಿಳಿಸಿದರು.
(ಪಿ.ಟಿ.ಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications