ಕೊಡಗಿನ ಸತ್ಯ ಹರಿಶ್ಚಂದ್ರದೇವಳದ ಮೇಲೆದುಷ್ಕರ್ಮಿಗಳ ದಾಳಿ
ಮಡಿಕೇರಿ : ಇಲ್ಲಿನ ಹರಿಶ್ಚಂದ್ರ ದೇವಸ್ಥಾನವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ ಹಿನ್ನೆಲೆಯಲ್ಲಿ ಪಾಲೂರು, ಕೊಟ್ಟಮುಡಿ, ನಾಪೋಕ್ಲು, ಮಡಿಕೇರಿ ಮತ್ತು ಸುಂಟಿಕೊಪ್ಪದಲ್ಲಿ ಪ್ರಕ್ಷುಬ್ಧ ವಾತಾವರಣ ತಲೆದೋರಿದೆ.
ಸುಂಟಿಕೊಪ್ಪದಲ್ಲಿ ಭಾನುವಾರ ಎರಡು ಕೋಮುಗಳ ನಡುವೆ ನೆಡದ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಲಾಠೀ ಪ್ರಹಾರ ನಡೆಸಿ, ಸೆಕ್ಷನ್ 144 ಜಾರಿ ಮಾಡಿದ್ದಾರೆ. ನಾಪೋಕ್ಲುವಿನಲ್ಲಿ ಗಲಾಟೆ ನಡೆಯದಂತೆ ಮುನ್ನೆಚ್ಚರಿಕೆ ಸಲುವಾಗಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಪೇಟೆಯಲ್ಲಿಯೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪಾಲೂರಿನ ಮಹಾಲಿಂಗೇಶ್ವರ ದೇವಸ್ಥಾನದ ಅರಣ್ಯದೊಳಗೆ ಸತ್ಯ ಹರಿಶ್ಚಂದ್ರ ಗುಡಿಯಿದ್ದು, ಅದನ್ನು ದುಷ್ಕರ್ಮಿಗಳು ಶನಿವಾರ ಪುಡಿಗಟ್ಟಿದ್ದಾರೆ. ಇದರಿಂದಾಗಿ ಪಾಲೂರಿನಲ್ಲಿ ಆರಂಭವಾದ ಪ್ರತಿಭಟನೆ, ರಸ್ತೆ ತಡೆ. ಕಲ್ಲುತೂರಾಟ ಕ್ರಮೇಣ ಸುಂಟಿಕೊಪ್ಪ, ನಾಪೋಕ್ಲು ಮತ್ತು ಮಡಿಕೇರಿಗೂ ಹಬ್ಬಿತು. ಸುಂಟಿಕೊಪ್ಪದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಟಯರ್ ಹೊತ್ತಿಸಿ ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿದರೆ, ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಿ ಬಂದ್ ಆಚರಿಸುವಂತೆ ಒತ್ತಾಯಿಸಲಾಯಿತು.
ದೇವಾಲಯ ಹಾಳುಗೆಡವಿದವರನ್ನು ಬಂಧಿಸುವವರೆಗೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಬಿ. ಬೋಪಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ಬಿ. ದೇವಯ್ಯ ಹೇಳಿದ್ದಾರೆ. ಮೈಸೂರು- ಮಂಗಳೂರು ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications