ಇಂಗ್ಲಿಷ್ ಟೀಚರ್ ಕೊಟ್ಟ ಪಂಚ್, ಇಬ್ಬರು ವಿದ್ಯಾರ್ಥಿನಿಯರು ಆಸ್ಪತ್ರೆಗೆ
ಮೈಸೂರು : ಆಟದಲ್ಲಿ ಗೆದ್ದ ಖುಷಿಯಲ್ಲಿ ಪರಸ್ಪರ ನೀರೆರೆಚಿಕೊಂಡು ಕುಣಿದಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಇಂಗ್ಲಿಷ್ ಟೀಚರ್ ಕೊಟ್ಟ ಒದೆ ಆಸ್ಪತ್ರೆಗೆ ಸೇರುವಂತೆ ಮಾಡಿದೆ.
ಎನ್‌ಸಿಇಆರ್‌ಟಿ ನಡೆಸುತ್ತಿರುವ ಡೆಮಾನ್‌ಸ್ಟ್ರೇಷನ್ ಶಾಲೆಯ ಪಲ್ಲವಿ ಹಾಗೂ ಮೇಘನಾ ಎಂಬ ಎಂಟನೇ ಇಯತ್ತೆ ವಿದ್ಯಾರ್ಥಿನಿಯರೇ ಒದೆ ತಿಂದವರು. ಆಸ್ಪತ್ರೆಗೆ ಸೇರಿಸಿದ ನಂತರವೇ ಇಬ್ಬರಿಗೂ ಪ್ರಜ್ಞೆ ಬಂದಿದ್ದು. ಅಂಥಾ ಹೊಡೆತ ಗುರುವಾರ ಇಬ್ಬರಿಗೂ ಬಿದ್ದಿತ್ತು. ಪಲ್ಲವಿ ಈಗ ಮಾಮೂಲಿನ ಸ್ಥಿತಿಗೆ ಮರಳಿದ್ದಾಳೆ. ಮೇಘನಾ ಆಘಾತದಿಂದ ಪೂರ್ಣ ಪ್ರಮಾಣದಲ್ಲಿ ಹೊರ ಬಂದಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡ ಮೇಘನಾ ಹೇಳುತ್ತಾಳೆ- ನನಗೆ, ಪಲ್ಲವಿಗೆ ಮತ್ತು ಕಲ್ಯಾಣಿಗೆ ಇಂಗ್ಲಿಷ್ ಟೀಚರ್ ಸಿಕ್ಕಾಪಟ್ಟೆ ಹೊಡೆದರು. ಯಾಕೆ ಅಂತ ಗೊತ್ತಿಲ್ಲ. ನಾವೇನೂ ತಪ್ಪು ಮಾಡಲಿಲ್ಲ. ಆಟದಲ್ಲಿ ಗೆದ್ದೆವು. ಖುಷಿಯಿಂದ ನೀರೆರಚಾಡುತ್ತಿದ್ದೆವು, ಅಷ್ಟೆ.
ಪಲ್ಲವಿಗೆ ಪ್ರಕಾರ ಅದೊಂದು ಬಾಕ್ಸಿಂಗ್ ಪಂಚ್. ನಮಗೆ ಪಾಠ ಹೇಳುವವರೇ ಹೀಗೆ ಮಾಡುತ್ತಾರೆ ಅಂದರೆ ಬೇಸರವಾಗುತ್ತೆ ಎನ್ನುತ್ತಾಳವಳು. ಶಾಲೆಯ ಮುಖ್ಯ ಅಧ್ಯಾಪಕಿ ಶುಭಾ ಕೇಶವನ್ ಹೇಳುವಂತೆ- ಇದು ಶಾಲೆ ಮತ್ತು ಪೋಷಕರಿಗೆ ಸಂಬಂಧಪಟ್ಟ ವಿಷಯ. ಮುಂದಿನ ವಾರ ಈ ಬಗ್ಗೆ ಸಭೆ ಸೇರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಮೇಘನಾ ತಾಯಿ ಗೀತಾ ಕ್ರುದ್ಧರಾಗಿದ್ದಾರೆ. ಮಕ್ಕಳನ್ನು ಹೊಡೆದದ್ದಲ್ಲದೆ, ನಂತರವೂ ಅವರ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸಿಲ್ಲ. ಈ ಕಾರಣಕ್ಕೆ ಶಾಲಾ ಆಡಳಿತ ಮಂಡಳಿಗೆ ಅವರು ದೂರು ಕೊಡಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಈ ವರದಿಯನ್ನು ಹೆಕ್ಕಿ ತೆಗೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications