ಹುಬ್ಬಳ್ಳಿಯಲ್ಲಿ ರಾಜೀವ್ ದೀಕ್ಷಿತ್; ಸ್ವದೇಶಿ ಉದ್ದಿಮೆ ಉಳಿಸಲು ಕರೆ
ಹುಬ್ಬಳ್ಳಿ : ವಿದೇಶಿ ಉತ್ಪನ್ನಗಳ ಮೋಹಕ್ಕೆ ಒಳಗಾಗದೆ ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ದೇಶದಲ್ಲಿನ ಉದ್ದಿಮೆಗಳನ್ನು ಉಳಿಸುವಂತೆ ಆಜಾದಿ ಬಚಾವೋ ಆಂದೋಲನದ ನಾಯಕ ರಾಜೀವ್ ದೀಕ್ಷಿತ ಜನತೆಗೆ ಕರೆ ನೀಡಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ನಡೆದ ಸ್ವದೇಶಿ ಸಣ್ಣ ಉದ್ದಿಮೆದಾರರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ದೇಶದಲ್ಲಿನ ಉದ್ದಿಮೆಗಳ ಇಂದಿನ ದುಸ್ಥಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ ಎಂದು ಆಪಾದಿಸಿದರು.
ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಗ್ಯಾಟ್ ಹಾಗೂ ವಿಶ್ವ ವ್ಯಾಪಾರ ಒಪ್ಪಂದಗಳಿಂದಾಗಿ ದೇಶದ ಬಹುತೇಕ ಉದ್ದಿಮೆಗಳು ದಿವಾಳಿಯಾಗಿದ್ದು , 2003 ರ ನಂತರ ಬಹುತೇಕ ಉದ್ದಿಮೆಗಳು ಕೊನೆಯುಸಿರು ಎಳೆಯಲಿವೆ. ಇಂಥ ಸಂದರ್ಭದಲ್ಲಿ ಸ್ವದೇಶಿ ಆಂದೋಲನವನ್ನು ಚುರುಕುಗೊಳಿಸುವುದು ಅನಿವಾರ್ಯವಾಗಿದೆ. ದೇಶದಲ್ಲಿನ ಕಚ್ಚಾ ವಸ್ತುಗಳ ಬೆಲೆಗೆ ಕೆಲವು ದೇಶಗಳು ಸಿದ್ಧ ವಸ್ತುಗಳನ್ನು ಮಾರುತ್ತಿವೆ. ಪರಿಸ್ಥಿತಿ ಹೀಗಿರುವಾಗ ಸ್ವದೇಶಿ ಉದ್ದಿಮೆಗಳಿಗೆ ಉಳಿಗಾಲವೆಲ್ಲಿ ಎಂದು ದೀಕ್ಷಿತ್ ಆತಂಕ ವ್ಯಕ್ತಪಡಿಸಿದರು.
ಭಾರತಕ್ಕೆ ಚೀನಾ, ಜಪಾನ್ ಮಾದರಿ
ಚೀನಾ, ಜಪಾನ್ ದೇಶಗಳು ಅಲ್ಲಿನ ಉದ್ದಿಮೆದಾರರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿವೆ. 24 ಗಂಟೆಗಳ ಕಾಲ ವಿದ್ಯುತ್, ಏಕ ಹಂತದ ತೆರಿಗೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ರಸ್ತೆ , ನೀರು ಮುಂತಾಗಿ ಎಲ್ಲ ಸೌಲಭ್ಯಗಳನ್ನು ಆ ಸರ್ಕಾರಗಳು ಒದಗಿಸುತ್ತಿದ್ದು ರಫ್ತನ್ನು ಉತ್ತೇಜಿಸುತ್ತಿವೆ. ಭಾರತ ಸರ್ಕಾರಕ್ಕೆ ಚೀನಾ ಹಾಗೂ ಜಪಾನ್ ಮಾದರಿಯಾಗಿವೆ ಎಂದು ರಾಜೀವ್ ದೀಕ್ಷಿತ್ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮದನ ದೇಸಾಯಿ, ಕೆ.ಬಿ.ದೇಸಾಯಿ, ಹುಬ್ಬಳ್ಳಿ ಗ್ರಾಹಕರ ವೇದಿಕೆಯ ಅಧ್ಯಕ್ಷ ಡಾ। ಅನಂತ ಹುಯಿಲಗೋಳ, ಜಸಬೀರ ಸಿಂಗ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications