ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕಲ್‌ ಗುಬ್ಬಿಯ ಮೇಲೆ ಎಚ್‌.ಟಿ. ಸಾಂಗ್ಲಿಯಾನ ಬ್ರಹ್ಮಾಸ್ತ್ರ

By Staff
|
Google Oneindia Kannada News

*ಜಿ.ಕೆ.ಗೋವಿಂದರಾವ್‌

ಮಾನ್ಯರೇ,

ಎಚ್‌.ಟಿ.ಸಾಂಗ್ಲಿಯಾನಾ ಅವರು ಸಮರ್ಥ ಮತ್ತು ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ಎಂದು ಕೇಳಿದ್ದ ಯಾರಿಗೇ ಆಗಲಿ ಅವರು ನಮ್ಮ ನೂತನ ಕಮಿಷನರ್‌ ಆಗಿ ನೇಮಕಗೊಂಡರೆಂದು ಕೇಳಿದಾಗ ಸಂತೋಷವೇ ಆಗುತ್ತದೆ. ಇಂಥ ಮನಃಸ್ಥಿತಿಯಲ್ಲಿ ನಾವಿರುವಾಗಲೆ ಸಾಂಗ್ಲಿಯಾನ ಅವರು ವಾಹನ ಸಂಚಾರಗಳ ಬಗ್ಗೆ ತಮ್ಮ ಹೊಸ ಯೋಜನೆಗಳನ್ನು ಮಂಡಿಸುತ್ತ ಎಂ.ಜಿ.ರಸ್ತೆಯಲ್ಲಿ ಸೈಕಲ್‌ ಸಂಚಾರವನ್ನು ರದ್ದುಗೊಳಿಸುವುದಾಗಿ ಸೂಚಿಸಿದ್ದಾರೆ.

ಈಗಾಗಲೇ ಎಂ.ಜಿ.ರಸ್ತೆಯಲ್ಲಿ ಸೈಕಲ್‌ ನಿಲುಗಡೆ ನಿಷೇಧಿಸಲಾಗಿದೆ. ಇನ್ನು ಸಂಚಾರವನ್ನೂ ನಿಷೇಧಗೊಳಿಸಿಬಿಟ್ಟರೆ ದೂರದೂರ ಜಾಗಕ್ಕೆ ತಮ್ಮ ಕೆಲಸಗಳಿಗೆ ಹೋಗಲು ಸೈಕಲ್ಲನ್ನೇ ನಂಬಿಕೊಂಡು ಬದುಕುವ ನೂರಕ್ಕೆ ಎಂಭತ್ತು ವಾಹನ ಬಳಕೆದಾರರಿಗೆ ಮಹಾ ಅನ್ಯಾಯವಷ್ಟೇ ಅಲ್ಲ , ಬಡ ಜನಗಳ ಕುರಿತಾದ ಸರ್ಕಾರದ, ಅಧಿಕಾರಶಾಹಿಯ ತಿರಸ್ಕಾರ, ಅಸಹನೆ ಸ್ಪಷ್ಟವಾಗುತ್ತದೆ.

ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ, ಕಮೀಷನರ್‌ ಅವರು ಮುಂದುವರೆದು, ಸೈಕಲ್ಲುಗಳು ಕಣ್ಣಿಗೆ ಬೀಳುವುದೆಂದರೆ- ಅದೂ ಎಂ.ಜಿ.ರಸ್ತೆಯಲ್ಲಿ - ಕಣ್ಣಿಗೆ ರಾವು ಬಡಿದಂತೆ ಅಂದಿದ್ದಾರೆ. ವಿದೇಶಿ ಪ್ರವಾಸಿಗರು ಈ ಸುಂದರ ನಗರದ ಬಗ್ಗೆ ಏನಂದುಕೊಂಡಾರು? ಎಂದು ಕೂಡ ಮರುಗಿದ್ದಾರೆ. ಬೆಂಗಳೂರು ಇರುವುದು, ಬೆಂಗಳೂರಿನ ಜನಕ್ಕಾಗಿ, ವಿದೇಶೀ ಪ್ರವಾಸಿಗರ ಕಣ್ತಂಪು ಮಾಡುವುದಕ್ಕಲ್ಲ . ಆದರೆ ಸಾಂಗ್ಲಿಯಾನಾ ಅವರ ಯೋಜನೆ ಬೆಂಗಳೂರನ್ನು ಸಿಂಗಪುರ ಮಾಡಹೊರಟಿರುವ ನಮ್ಮ ಮುಖ್ಯಮಂತ್ರಿಗಳ ಕನಸಿಗೆ ತಕ್ಕುದಾಗಿಯೆ ಇದೆ.

ಹಸು, ಎಮ್ಮೆಗಳು ರಸ್ತೆಯಲ್ಲಿರಬಾರದು- ಸರಿ. ನಾಳೆ, ಬಹು ನಿಧಾನಗತಿಯಲ್ಲಿ ಚಲಿಸುವ ವೃದ್ಧರು, ಮಕ್ಕಳು ಕೂಡ ವೇಗಗತಿಯಲ್ಲಿ ನಡೆಯುವ ಬೇರೆ ಪಾದಚಾರಿಗಳಿಗೆ ತೊಂದರೆ ಎನ್ನಿಸಬಹುದಲ್ಲ !

ಈಗಾಗಲೇ ಬೆಂಗಳೂರಿನಲ್ಲಿ ಅನೇಕ ಕಡೆ ವಾಹನ ಸಂಚಾರಕ್ಕಾಗಿ ರಸ್ತೆಯನ್ನು ಅಗಲವಾಗಿಸುತ್ತ ಪಾದಚಾರಿಗಳನ್ನು ಪಕ್ಕದ ಚರಂಡಿವರೆಗೆ ತಳ್ಳಿಯಾಗಿದೆ. ಮುಂದೆ ಹಲವು ಮುಖ್ಯ ರಸ್ತೆಗಳಲ್ಲಿ ಸೈಕಲ್‌ ಸಂಚಾರ ನಿಷೇಧದಂತೆಯೆ ಪಾದಚಾರಿ ಸಂಚಾರವೂ ನಿಷೇಧಗೊಂಡರೆ ಅಚ್ಚರಿಯೇನಿಲ್ಲ .

ಹಾಗೆ ನೋಡಹೋದರೆ ಈಗಾಗಲೆ ಅದನ್ನೂ ಸಾಧಿಸಿ ಆಗಿದೆಯಲ್ಲ- ಅಥವಾ ಸಾಧಿಸಬೇಕೆಂಬ ಯೋಜನೆ ಹಾಕಿಕೊಂಡು ಆಗಿದೆಯಲ್ಲ ! ಬೆಂಗಳೂರು- ಮೈಸೂರು ಮಧ್ಯೆ ಗಂಟೆಗೆ 120 ಕಿ.ಮೀ. ವೇಗದಲ್ಲಿ ಓಡುವ ಅತಿ ಅವಸರದ ಶ್ರೀಮಂತರು ಮಾತ್ರ ಬಳಸಬಹುದಾದ ಒಂದು ಹೆದ್ದಾರಿ ನಿರ್ಮಾಣದ ಯೋಜನೆಯಲ್ಲಿ ಬಡವರ ಈ ಘನ ಸರ್ಕಾರ ತೊಡಗಿದೆ. ಈ ರಸ್ತೆಯಲ್ಲಿ ಸೈಕಲ್ಲುಗಳೂ ಇರಲಿ, ಮನುಷ್ಯರೂ ಓಡಾಡುವ ಹಾಗಿಲ್ಲ .

ಈ ಎಲ್ಲವನ್ನೂ ಸದ್ಯ ನಡೆಯುತ್ತಲಿರುವ ಪುರಸಭಾ ಚುನಾವಣೆಗೆ ನಿಂತಿರುವ ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ಗಮನದಲ್ಲಿಟ್ಟುಕೊಳ್ಳಬೇಕು. ಅಧಿಕಾರಕ್ಕೆ ಬರಲು ಬಡವರ ಓಟು, ಅಧಿಕಾರದಲ್ಲಿ ಉಳಿಯಲು ಶ್ರೀಮಂತರ ಓಲೈಕೆ ಎಂಬ ಇಂದಿನವರೆಗಿನ ಪದ್ಧತಿ ನಿಲ್ಲಬೇಕು. ಇದನ್ನು ನಮ್ಮ ಬಡವರ ಬಂಧುಗಳು ಅರಿತುಕೊಂಡಾರೆಯೆ?

ಆದರೆ ನಮ್ಮ ಕೈಯಲ್ಲಾಗುವುದನ್ನು ನಾವು ತತ್‌ಕ್ಷಣ ಮಾಡಬೇಕಾಗಿದೆ.ಈ ನಗರದ ಪ್ರತಿಯಾಬ್ಬ ಪ್ರಜೆಯೂ- ಈ ಸೈಕಲ್‌ ನಿಷೇಧಾಜ್ಞೆಯ ಕುರಿತಾಗಿ ವಿರೋಧವಿರುವವರು- ಮುಖ್ಯಮಂತ್ರಿಗಳಿಗೆ ಒಂದು ಅಂಚೆ ಕಾರ್ಡಿನಲ್ಲಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿ ಕಾಗದ ಬರೆಯಬೇಕು- ತುರ್ತಾಗಿ.

ಮುಖಪುಟ / ಸಾಂಗ್ಲಿಯಾನ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X