ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಹಕಾಣಿಕೆ ರಂಗಮಾಲಿಕೆ

By Staff
|
Google Oneindia Kannada News

1980ರ ದಶಕದಲ್ಲಿ ರವೀಂದ್ರ ಕಲಾಕ್ಷೇತ್ರ ಸದಾ ಗಿಜಿಗುಡುತ್ತಿತ್ತು. ಸಿನಿಮಾ ಮೋಡಿ, ಮಾಯಾ ಪೆಟ್ಟಿಗೆ ಟಿವಿ ಜಾದೂ ಆಗ ಸಹೃದಯರನ್ನು ಅಷ್ಟಾಗಿ ಕಿತ್ತುಕೊಂಡಿರಲಿಲ್ಲ. ನಾಟಕ ಮಾಡಲು ಹಿಂಡುಗಟ್ಟಲೆ ಜನರಲ್ಲಿ ಚಿರ ಉತ್ಸಾಹ. ಅವರಿಗೆ ಬ್ರೇವೋ ಹೇಳಲು ಅಭಿಮಾನಿಗಳ ದೊಡ್ಡದೊಂದು ದಂಡು. ನಾಟಕ ಶುರುವಾಗುವ ಗಂಟೆಗೂ ಮುನ್ನವೇ ಕಲಾಕ್ಷೇತ್ರದ ಆವರಣದಲ್ಲಿ ಹರಟೆ ಕೊಚ್ಚುತ್ತಾ, ನಾಟಕ ಮುಗಿದ ನಂತರವೂ ತಪ್ಪು- ಒಪ್ಪು- ಅದ್ಭುತಗಳನ್ನು ಮೆಲುಕು ಹಾಕುತ್ತಾ ಕಲಾಕ್ಷೇತ್ರವನ್ನೇ ಎರಡನೇ ಮನೆಯಾಗಿಸಿಕೊಂಡಿದ್ದ ದೊಡ್ಡ ಬಳಗವೇ ಇತ್ತು. ಆದರೆ 90ರ ದಶಕದಲ್ಲಿ ಇಂಥಾ ವಿಫುಲ ಅವಕಾಶಗಳು ವಿರಳವಾಗತೊಡಗಿದವು. ನಿತ್ಯ ನಾಟಕದ ಹಬ್ಬವಂತೂ ಕನಸಿನ ಮಾತಾಗತೊಡಗಿತು. ಇಂಥಾ ದಿನಗಳಲ್ಲಿ ಬೆಂಗಳೂರು ಇದೀಗ ನಿತ್ಯ ನಾಟಕ ನಗರಿಯಾಗುತ್ತಿರುವುದು ಸಹೃದಯರಿಗೆ ಹಬ್ಬದೂಟವೇ ಸರಿ.

ಅಕ್ಟೋಬರ್‌ 22ರಿಂದ 24ರವರೆಗೆ ಜಯನಗರದ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ನೀನಾಸಂ ನಾಟಕದೂಟ ಉಣಬಡಿಸಲಿದೆ. ಅದು ಮುಗಿದ ಎರಡೇ ದಿನಕ್ಕೆ ಸರಣಿ ನಾಟಕ ಪ್ರದರ್ಶನಗಳನ್ನು ಕೊಡಲಿದೆ ಸಿ.ಆರ್‌.ಸಿಂಹ ಕಟ್ಟಿದ ‘ವೇದಿಕೆ’. 40 ವರ್ಷಗಳಷ್ಟು ಹಳೆಯದಾದ ವೇದಿಕೆ ಕಳೆದ ಎಂಟು ವರ್ಷಗಳಿಂದ ಮುಗುಮ್ಮಾಗಿತ್ತು.

ಟಿಪಿಕಲ್‌ ಟಿ.ಪಿ.ಕೈಲಾಸಂ ಎಂದೊಡನೆ ಕಣ್ಣ ಮುಂದೆ ಬರುತ್ತಿದ್ದ ಸಿ.ಆರ್‌.ಸಿಂಹ ಹಿಡಿದು ಹಿಡಿದು ಬಿಡುತ್ತಿದ್ದ ಸಂಭಾಷಣೆಗಳ ಸರಕು ಈ ಹೊತ್ತೂ ಹೊಸತಾಗಿಬಿಡುತ್ತದೆ. ಆದರೆ ಸಿಂಹ ಮತ್ತೆ ಗರ್ಜಿಸಲೇ ಇಲ್ಲ ಅನ್ನುವುದು ದುರಂತ. ತುಘಲಕ್‌ ಮೂಲಕ ಕೊಂಚ ಸದ್ದು ಮಾಡಿದರೂ, ಸಿಂಹ ಇವತ್ತಿಗೂ ಟಿಪಿಕಲ್‌ ಟಿಪಿಕೆಯಾಗೇ ಮನದಲ್ಲಿ ಉಳಿದು ಬಿಟ್ಟಿದ್ದಾರೆ. ಕಳೆದ ಜೂನ್‌ 18ರಂದು ಅಗ್ನಿ ಮತ್ತು ಮಳೆ ಪ್ರದರ್ಶನದ ಮೂಲಕ ವೇದಿಕೆ ನಾಟಕದೂಟ ಬಡಿಸುವ ತನ್ನ ಇರಾದೆ ಹೊರಹಾಕಿತು. ಈಗ ಅದು ನಿತ್ಯ ನಾಟಕ ಹಬ್ಬ ಮಾಡಿದರೆ ಎಷ್ಟು ಚೆನ್ನು ಎಂದು ಯೋಚಿಸುತ್ತಿದೆ? ವಿಜಯದಶಮಿಯಂದು ಡಜನ್ನಿಗೂ ಹೆಚ್ಚು ಸಿನಿಮಾಗಳ ಮುಹೂರ್ತ ನಡೆಯುವ ವಿಷಯ ದೊಡ್ಡ ಸುದ್ದಿಯಾಗುತ್ತದೆ. ಅದೇ ತಣ್ಣಗಿದ್ದ ಸಿಂಹ ನಿತ್ಯ ಗರ್ಜಿಸಲಿದೆ ಅನ್ನೋದು ಎಲ್ಲೋ ಕೇಳಿ ಹಾಗೇ ಗಾಳಿ ಸೇರಿಹೋಗುತ್ತದೆ.

ರಂಗಪ್ರೇಮಿಗಳಿಗಿದೋ ರಂಗಮಾಲಿಕೆ

ಬೆಂಗಳೂರಿಗರೇ, ವಿಜಯದಶಮಿಯ ಸಂಜೆಯ ಎರಡೂವರೆ ತಾಸನ್ನು ನಾಟಕ ನೋಡಲು ಮೀಸಲಿಡಿ. ಜಯನಗರದ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಸಿಂಹ ತಂಡದ ನಾಟಕದಾಟ ಶುರುವಾಗಲಿದೆ. ಅಂದಿನಿಂತ ವಾರಕ್ಕೊಂದರಂತೆ ಸತತ 10 ವಾರಗಳ ಕಾಲ ನಾಲ್ಕು ನಾಟಕಗಳು ತಲಾ 10 ಪ್ರದರ್ಶನ ಕಾಣಲಿವೆ. ಡಿಸೆಂಬರ್‌ವರೆಗೆ ವಾರಕ್ಕೊಂದು ನಾಟಕ ಪ್ರದರ್ಶನ. ಈ ಅಪರೂಪದ ಯೋಜನೆಗೆ ಸಿಂಹ ಕೊಟ್ಟಿರುವ ಹೆಸರು ‘ರಂಗ ಮಾಲಿಕೆ’. ‘ಟಿಪಿಕಲ್‌ ಟಿ.ಪಿ.ಕೈಲಾಸಂ’, ‘ರಸ ಋಷಿ’ (ಕುವೆಂಪು ಅವರ ಜೀವನ ಕೃತಿಗಳ ಬಗ್ಗೆ ಸಿಂಹ ಬರೆದಿರುವ ನಾಟಕ), ಕಾರ್ನಾಡರ‘ಅಗ್ನಿ ಮತ್ತು ಮಳೆ’ಯಲ್ಲದೆ ‘ಅಂಥೋನಿ ಶಫರ್‌’ನ ಸ್ಲೂಥ್‌ ನಾಟಕದ ರೂಪಾಂತರ ‘ಹಾವು ಏಣಿ’ನಾಟಕಗಳು ನಿಮ್ಮ ಪಾಲಿಗೆ. ಅಂದಹಾಗೆ, ಹಾವು ಏಣಿ ಪ್ರದರ್ಶನದ ರೂವಾರಿ ಸಿಂಹ ಅವರ ಮಗ ಋತ್ವಿಕ್‌.

ಇದು ನನ್ನ ಕನಸಾಗಿತ್ತು. ಈಗ ನನಸಾಗುತ್ತಿದೆ. ಕಳೆದ ಐದಾರು ವರ್ಷಗಳಿಂದ ಕನ್ನಡ ನಾಟಕ ರಂಗ ಕಳೆಗುಂದುತ್ತಾ ಬಂದಿದೆ ನಿಜ. ಜನ ಹರೀಬರಿಯಲ್ಲಿರುತ್ತಾರೆ. ಟಿವಿ ವೆರೈಟಿ ಕೊಡುತ್ತದೆ. ಧಾರಾವಾಹಿಗಳು ನಾಟಕಗಳ ಕೊರತೆ ನೀಗುತ್ತಿವೆ ಎಂಬಂತಾಗಿದೆ. ಆದರೆ ವಾಸ್ತವದಲ್ಲಿ ಹಾಗಲ್ಲ. ನಾಟಕದ ಮೊನಚೇ ಬೇರೆ. ಜನರನ್ನು ಪದೇ ಪದೇ ನಾಟಕ ನೋಡಲು ಕರೆತರಬೇಕು. ಅದಕ್ಕೆ ನಾಟಕಗಳನ್ನು ಮಾಡುತ್ತಿರಬೇಕು, ಆಡುತ್ತಿರಬೇಕು. ಈ ಉದ್ದೇಶದ ನಮ್ಮ ಪ್ರಯತ್ನ ಸಫಲವಾಗಲಿದೆ ಅನ್ನುವುದು ನನ್ನ ನಂಬುಗೆ ಎನ್ನುವ ಹಸನ್ಮುಖಿ ಸಿಂಹ ಜೀವನ್ಮುಖಿಯೂ ಹೌದು.

ಅಪ್ಪ- ಮಕ್ಕಳಲ್ಲದೆ ಸಿಂಹ ಅವರ ಹೆಂಡತಿ ಶಾರದ, ಸೊಸೆ ಜಸ್ಲೀನ್‌ ಕೂಡ ರಂಗಪಾಕ ಸಿದ್ಧ ಮಾಡುತ್ತಿದ್ದಾರೆ. ಶಾರದ ಲೈಟ್ಸ್‌ ಉಸ್ತುವಾರಿ ವಹಿಸಿಕೊಂಡರೆ, ಜಸ್ಲೀನ್‌ ಬ್ಯಾಕ್‌ಸ್ಟೇಜ್‌ ಕೆಲಸಗಳನ್ನು ಮಾಡಲು ಮುಂದಾಗಿದ್ದಾರೆ. ಜೇಬಿಗೆ ಕತ್ತರಿ ಬೀಳುವುದಿಲ್ಲವೇ ಅಂತ ಸಿಂಹ ಅವರನ್ನು ಕಿಚಾಯಿಸಿದರೆ ಅದಕ್ಕೂ ನಗುನಗುತ್ತಲೇ ಉತ್ತರ ಕೊಡುತ್ತಾರೆ- 18 ವರ್ಷಗಳಿಂದ ತುಂಬಿಕೊಂಡಿರುವ ಅನುಭವ ರಂಗಲೋಕದಲ್ಲಿ ಹೇಗೆ ಹೆಜ್ಜೆ ಇಡಬೇಕು ಅನ್ನೋದನ್ನ ಕಲಿಸಿಕೊಟ್ಟಿದೆ. ಈ ಪ್ರೊಜೆಕ್ಟ್‌ ಯಶಸ್ವಿಯಾದರೆ ಇದನ್ನು ಮುಂದುವರೆಸುವ ಆಸೆಯಿದೆ.

ಬಂತಿದೋ ರಂಗ ಮಾಸ ತಂತು ಚಂದ್ರಹಾಸ !

ಸೆಪ್ಟೆಂಬರ್‌ 12 ರಿಂದ 17ರವರೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಎಕ್ಸ್‌ಪ್ಲೋಸಿಟಿ ಆಯೋಜಿಸಿದ್ದ ಇಂಗ್ಲಿಷ್‌ ನಾಟಕೋತ್ಸವ ಕೂಡ ಭಾರೀ ಸದ್ದು ಮಾಡಿತ್ತು. ಪೊಯ್ಲ್‌ ಸೇನ್‌ ಗುಪ್ತಾ, ನೀಲ್‌ ಸೈಮನ್‌, ಅರುಣ್‌ ಮುಖರ್ಜಿ, ಮೈಕ್‌ ಕುಲ್ಲೆನ್‌, ಅರ್ಥರ್‌ ಮಿಲ್ಲರ್‌, ಮಾರ್ಕ್‌ ಮೆಡೋಫ್‌ ಮೊದಲಾದ ದಿಗ್ಗಜರ ನಾಟಕಗಳು ಅಲ್ಲಿ ಅನಾವರಣಗೊಂಡಿದ್ದವು. ಅದಾದ ನಂತರ ಸೆಪ್ಟೆಂಬರ್‌ 26ರಿಂದ 28ರವರೆಗೆ ತಬರನ ಕಥೆ, ನಮ್ಮೊಳಗೊಬ್ಬ ನಾಜೂಕಯ್ಯ ಹಾಗೂ ಹರಕೆಯ ಕುರಿ ನಾಟಕಗಳು ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾದವು. ಈ ಉತ್ಸವದ ಯಶಸ್ಸಿಗೆ ಪಣ ತೊಟ್ಟ ನಾಟಕ ಅಕಾಡೆಮಿ ಅಧ್ಯಕ್ಷ ನಾಗೇಶ್‌ ಹಲ್ಲು ಮುರಿಸಿಕೊಂಡರು.

ಇಷ್ಟೆಲ್ಲಾ ಜಂಜಾಟ- ತೊಳಲಾಟ- ತುಡಿತಗಳ ಪರಿಣಾಮ ಸೆಪ್ಟೆಂಬರ್‌ ತಿಂಗಳ ನಂತರ ಬೆಂಗಳೂರು ನಾಟಕಗಳ ನಗರಿಯಾಗುತ್ತಿರುವುದು ಸುಸ್ಪಷ್ಟ. ಹೀಗೇ ನಾಟಕಗಳ ಪರ್ವ ಮುಂದುವರೆದರೆಷ್ಟು ಚೆನ್ನ ಅಲ್ಲವೇ? ಸಿಂಹ, ನಾಗೇಶ್‌ ಅಂಥವರು ಈ ನಿಟ್ಟಿನಲ್ಲಿ ಛಲ ಬಿಡದಿರಲಿ.

Post your views

ಮುಖಪುಟ / ಲೋಕೋಭಿನ್ನರುಚಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X