ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್‌ ದಕ್ಷಿಣ ಆಫ್ರಿಕಕ್ಕೆ, ಶ್ರೀನಾಥ್‌ ಮರಳಿ ಮನೆಗೆ

By Staff
|
Google Oneindia Kannada News

ಮುಂಬಯಿ : ಬಿರುಕು ಬಿಟ್ಟಿರುವ ತಮ್ಮ ಬಲಗಾಲ ಹೆಬ್ಬೆರಳಿನ ಮೂಳೆಯ ಚಿಕಿತ್ಸೆಗಾಗಿ ಸಚಿನ್‌ ತೆಂಡೂಲ್ಕರ್‌ ಮುಂದಿನ ವಾರ ದಕ್ಷಿಣ ಆಫ್ರಿಕಕ್ಕೆ ತೆರಳಲಿದ್ದಾರೆ. ಇದೇ ಸಮಯದಲ್ಲಿ ಬಂದಿರುವ ಇನ್ನೊಂದು ಕೆಟ್ಟ ಸುದ್ದಿಯೆಂದರೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯ ಇನ್ನೆರಡೂ ಪಂದ್ಯಗಳಲ್ಲಿ ಜಾವಗಲ್‌ ಶ್ರೀನಾಥ್‌ ಆಡುತ್ತಿಲ್ಲ.

ಕ್ರೀಡಾ ಔಷಧ ತಜ್ಞ ಅನಂತ್‌ ಜೋಷಿ ಶನಿವಾರ ಹೊರಡಿಸಿದ ಹೇಳಿಕೆಯಲ್ಲಿ, ಆಗಸ್ಟ್‌ 22 ಅಥವಾ 23ರಂದು ಸಚಿನ್‌ ಜೋಹಾನ್ಸ್‌ಬರ್ಗ್‌ಗೆ ಪ್ರವಾಸ ಬೆಳೆಸಲಿದ್ದಾರೆ ಎಂದು ತಿಳಿಸಿದರು.

ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಾ.ಫರ್ಗ್ಯೂಸನ್‌ ಅವರು ಸಚಿನ್‌ ತೆಂಡೂಲ್ಕರ್‌ಗೆ ಚಿಕಿತ್ಸೆ ನೀಡಲಿದ್ದಾರೆ. ಗಾಯವಾದ ಪಾದಕ್ಕೆಂದೇ ವಿನ್ಯಾಸ ಮಾಡಲಾದ ಷೂ ಕೂಡ ಸಚಿನ್‌ಗೆ ಲಭ್ಯವಾಗಲಿದೆ. ಅವರ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಮಂಡಳಿ ಭರಿಸಲಿದೆ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಯಾಣ ಬೆಳೆಸಲಿದ್ದು, ಆ ಹೊತ್ತಿಗೆ ಸಚಿನ್‌ ಗುಣಮುಖರಾಗಬಹುದು ಎಂಬ ವಿಶ್ವಾಸವನ್ನು ಜಯವಂತ ಲೆಲೆ ವ್ಯಕ್ತಪಡಿಸಿದರು.

ಕೊಲಂಬೋ ವರದಿ : ಗಾಲೆಯಲ್ಲಿ ನಡೆದ ಪ್ರಥಮ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ದಿಲ್ಹರಾ ಫರ್ನಾಂಡೋ ಎಸೆತದಿಂದ ಪೆಟ್ಟು ಬಿದ್ದು, ಜಾವಗಲ್‌ ಶ್ರೀನಾಥ್‌ ಎಡಗೈ ಕಿರು ಬೆರಳಿನ ಕೆಳ ಮೂಳೆ ಮುರಿದಿದೆ. ಶನಿವಾರ ಎಕ್ಸ್‌ ರೇ ವರದಿ ಇದನ್ನು ಖಚಿತಪಡಿಸಿದ್ದು, ಈ ತೊಂದರೆಯಿಂದ ಗುಣಮುಖರಾಗಲು ಶ್ರೀನಾಥ್‌ಗೆ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಿದೆ. ಈ ಕಾರಣಕ್ಕೇ ಶ್ರೀನಾಥ್‌ ಶನಿವಾರವೇ ತವರಿಗೆ ಮರಳಿದ್ದಾರೆ ಎಂದು ಭಾರತ ತಂಡದ ಕೋಚ್‌ ಜಾನ್‌ ರೈಟ್‌ ಹೇಳಿದರು. ಶ್ರೀನಾಥ್‌ ಬದಲಿಗೆ ಯಾವ ಆಟಗಾರನೂ ಶ್ರೀಲಂಕಾಗೆ ಬರುತ್ತಿಲ್ಲ.

ಭಾರತ ಕ್ರಿಕೆಟ್‌ ತಂಡ, ಸರಣಿ ಸೋಲಿನಿಂದ ಹಾಗೂ ಗಾಯಾಳುಗಳ ಉದ್ದ ಪಟ್ಟಿಯಿಂದ ಅಕ್ಷರಶಃ ಕಂಗೆಟ್ಟಿದೆ. ಶ್ರೀಲಂಕಾ ಸರಣಿಯ ಉಳಿದೆರಡೂ ಟೆಸ್ಟ್‌ಗಳಲ್ಲಿ ಭಾರತ ಮಾನಸಿಕ ಒತ್ತಡದಲ್ಲೇ ಕಣಕ್ಕಿಳಿಯಲಿದ್ದು, ಗೆಲುವಿನ ದಾರಿ ಮತ್ತಷ್ಟು ದೂರವಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X