• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿಷೇಕ, ಅರ್ಚನೆ ಎಂದರೇನು?ಅದನ್ನು ಮಾಡುವುದು ಏಕೆ?

By Staff
|

ದೈವಭಕ್ತಿ ಉಳ್ಳವರೆಲ್ಲರೂ ಮನದಲ್ಲಿ - ಮನೆಯಲ್ಲಿ ದೇವರನ್ನು ಪೂಜಿಸುತ್ತಾರೆ. ದೇವಾಲಯಗಳಿಗೂ ಹೋಗುತ್ತಾರೆ. ಲಕ್ಷಾರ್ಚನೆ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕ ಮಾಡಿಸುತ್ತಾರೆ. ದೇವರಿಗೆ ಬೆಣ್ಣೆ ಅಲಂಕಾರ, ಗೋಡಂಬಿ ಅಲಂಕಾರ, ಅರಿಶಿನ ಕುಂಕುಮ ಅಲಂಕಾರ, ಪುಷ್ಪಾಲಂಕಾರ ಮಾಡಿಸುತ್ತಾರೆ.

ಈ ಅಭಿಷೇಕಗಳನ್ನು, ಅರ್ಚನೆಗಳನ್ನು ಮಾಡಿಸುವುದು ಏಕೆ? ನಿಜವಾಗಿಯೂ ದೇವರಿಗೆ ಅರ್ಚನೆ, ಅಭಿಷೇಕ ಮಾಡಿಸಬೇಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲೂ ಮೂಡಿರ ಬಹುದು. ಗುರು ಮೂಲ, ಋಷಿ ಮೂಲ, ದೈವ ಮೂಲ ಹುಡುಕ ಬಾರದು ಎಂಬ ಹಿರಿಯರ ಮಾತು ಈ ಬಗ್ಗೆ ಮುಂದಡಿ ಇಡಲು ಹಿಂಜರಿಯುವಂತೆ ಮಾಡಿರಲೂ ಬಹುದು.

ನಮಗೂ ಈ ಪ್ರಶ್ನೆ ಉದ್ಭವಿಸಿತ್ತು. ಪಂಡಿತ - ಪುರೋಹಿತರೊಂದಿಗೆ ಚರ್ಚಿಸಿದ ಬಳಿಕ ಅವರು ಹೇಳಿದ ಅಭಿಪ್ರಾಯಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ವೇದಕಾಲ : ಪರಬ್ರಹ್ಮ ಸೃಷ್ಟಿಯಾದ ವೇದಕಾಲದಲ್ಲಿ ಮೂರ್ತಿ ಪೂಜೆಯ ಪರಿಕಲ್ಪನೆಯೇ ಇರಲಿಲ್ಲವಂತೆ. ದೇವರನ್ನು ನಿರಾಕಾರ, ನಿರ್ಗುಣ ಎಂದು ಪೂಜಿಸುತ್ತಿದ್ದರು. ನಿರಾಕಾರ, ಆಕಾರ, ಸಾಕಾರ ಎಂದದ್ದು ಆಗಲೇ.

ಆನಂತರ ಅಂದರೆ 60 ಸಾವಿರ ವರ್ಷಗಳ ಹಿಂದೆ ವ್ಯಾಸ ಮಹರ್ಷಿಗಳು ವೇದಗಳನ್ನು ನಾಲ್ಕು ಭಾಗವಾಗಿ ಮಾಡಿದರು. ಆಚಾರ್ಯ ತ್ರಯರಾದ ಶ್ರೀ ಶಂಕರಾಚಾರ್ಯರು, ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರು ಬದಲಾಗುತ್ತಿದ್ದ ಸನ್ನಿವೇಶಗಳಿಗೆ ಅನುಗುಣವಾಗಿ ಪಂಡಿತ - ಪಾಮರರಿಗೂ ಅರಿವು ನೀಡುವ ರೀತಿಯಲ್ಲಿ ಮೂರ್ತಿಪೂಜೆಯನ್ನು ಸಕ್ರಮಗೊಳಿಸಿದರು.

ಅಷ್ಟಾದಶ ಪುರಾಣಗಳಲ್ಲಿನ ಉಲ್ಲೇಖ, ಮಹಾಭಾರತ, ರಾಮಾಯಣಗಳಲ್ಲಿ ಬರುವ ಮೂರ್ತಿ ಪೂಜೆಯ ಕಲ್ಪನೆ ಹಾಗೂ ಭಾಗವತಗಳನ್ನನುಸರಿಸಿ ದೇವರ ಮೂರ್ತಿಗಳನ್ನು ಕಡೆಯಲಾಯಿತು. ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರು ವಿಷ್ಣು ಮೂರ್ತಿಗಳ ಪೂಜೆಗೆ ಕಾರಣಾದರೆ, ಶಂಕರರು ಶಿವ ಹಾಗೂ ಶಕ್ತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದರು.

ಕಲಿಯುಗದಲ್ಲಿ ಮನುಷ್ಯನ ಮನಸ್ಸು ಚಂಚಲವಾದ್ದರಿಂದ ಹಾಗೂ ದೇವರು ನಿರ್ವಿಕಾರ, ನಿರ್ಗುಣ ಎಂದರೆ ಆ ಸತ್ಯವನ್ನು ಅರಿಯಲಾರದ ಪಾಮರನಿಗೆ ಇದುವೇ ದೇವರು, ದೇವರು ಹೀಗಿದ್ದ ಎಂದು ತೋರಿಸಲು ಅಂದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಅನಿವಾರ್ಯವಾಗಿತ್ತು ಎನ್ನುತ್ತಾರೆ ಗಜೇಂದ್ರನಗರದ ಈಶ್ವರಂ ಶ್ರೀನಿವಾಸ ಶಾಸ್ತ್ರೀಗಳು.

ಈ ಮೂರ್ತಿಗಳನ್ನು ಪೂಜಿಸಿ, ದೇವರನ್ನು ಮೆಚ್ಚಿಸಿ ಫಲ ಪಡೆಯಲು ಶೋಡಷೋಪಚಾರ (16 ಬಗೆಯ ಪೂಜೆ)ಗಳನ್ನು ವಿವರಿಸಲಾಯಿತು. ಆ ಪ್ರಕಾರವಾಗಿ ಧ್ಯಾನ, ಆಸನ, ಪಾದ್ಯ, ಅರ್ಘ್ಯ, ಆಚಮನ, ಸ್ನಾನ, ವಸ್ತ್ರ, ಉತ್ತರೀಯ, ಆಭರಣ, ಗಂಧ, ಮಂಗಳದ್ರವ್ಯ, ಪುಷ್ಪ, ಆರ್ಚನ, ದೂಪ-ದೀಪ-ನೀರಾಜನ, ನೈವೇದ್ಯ ಹಾಗೂ ಪ್ರಾರ್ಥನೆಗಳು ಅನುಷ್ಠಾನಕ್ಕೆ ಬಂದವು.

ಆಚಾರ್ಯರು ಈ ಒಂದೊಂದು ಪೂಜೆಯ ಕ್ರಮವನ್ನೂ ಜನಸಾಮಾನ್ಯರಿಗೂ ತಿಳಿಯುವಂತೆ ವಿವರಿಸಿ ಜಯಪ್ರಿಯಗೊಳಿಸಿದರು ಎನ್ನುತ್ತಾರೆ ಶ್ರೀನಿವಾಸ ಶಾಸ್ತ್ರೀಗಳು. ಸೂರ್ಯಾರಾಧನೆ, ಸೂರ್ಯ ನಮಸ್ಕಾರ, ಧ್ಯಾನ ಆಗಲೇ ಅಚರಣೆಗೆ ಬಂದದ್ದು. ದೇಹೋ ದೇವಾಲಯ ಪ್ರೋಕ್ತೋ ಜೀವೋ ದೇವಃ ಸನಾತನಃ ತ್ಯಜೇತ್‌ ನಿರ್ಮಾಲ್ಯಂಸೋ ಅಹಂ ಭಾವೇನ ಪೂಜಯೇತ್‌ ಎಂಬ ಉಲ್ಲೇಖವನ್ನೇ ಬಸವಣ್ಣನವರು ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದು ಶ್ರೀಸಾಮಾನ್ಯನಿಗೂ ತಿಳಿಯುವಂತೆ ವಿವರಿಸಿದರೆನ್ನುತ್ತಾರೆ ಅವರು.

ಆದರೆ, ದೇವರನ್ನು ಪೂಜಿಸುವಾಗ ಮನಸ್ಸು, ಪೂಜಾಸ್ಥಳ ಎಲ್ಲವೂ ಅಂತರ್‌ಶುದ್ಧಿ, ಬಹಿರ್‌ಶುದ್ಧಿಯಿಂದಿರಬೇಕು ಎಂಬ ಕಾರಣದಿಂದ ಸ್ನಾನ (ಶುದ್ಧೋದಕ) ರೂಢಿಗೆ ಬಂದಿದೆ. ನಾವು ನಮ್ಮ ಮಕ್ಕಳು ಮಾತು ಕೇಳದಿದ್ದಾಗ ಚಿನ್ನ, ರನ್ನ, ಬಂಗಾರಿ, ಮುದ್ದು ಎಂದು ಪುಸಲಾಯಿಸುವಂತೆಯೇ, ನಮ್ಮ ಕರೆಯನ್ನು ಕೇಳದ ದೇವರಿಗೆ ಹತ್ತಾರು ಹೆಸರುಗಳಿಂದ ಕರೆಯುವ ಮತ್ತು ‘ಕಲೌನಾಮ ಸಂಕೀರ್ತನೆ’(ಕಲಿಯುಗದಲ್ಲಿ ನಾಮ ಸಂಕೀರ್ತನೆಯಿಂದ ಪುರುಷಾರ್ಥ ಸಿದ್ಧಿ) ಮೂಲಕ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನವಾಗಿ ಸಹಸ್ರ ನಾಮಾರ್ಚನೆ, ಲಲಿತಾ ಸಹಸ್ರನಾಮವೇ, ಕೋಟಿ ನಾಮಾರ್ಚನೆ ಮೊದಲಾದವು ಹುಟ್ಟಿಕೊಂಡವು ಎಂಬುದು ಅವರ ಅಂಬೋಣ.

ಅಭಿಷೇಕ : ಮೊದಲೇ ಹೇಳಿದಂತೆ ಅಂತರ್‌ಶುದ್ಧಿ ಬಹಿರ್‌ಶುದ್ಧಿಗಾಗಿ ಮೊದಲು ಶುದ್ಧೋದಕ (ಶುಚಿಯಾದ ನೀರು) ಸ್ನಾನ, ಆನಂತರ ಮಾನವ ನಿರ್ಮಿತವಲ್ಲದ ನೈಸರ್ಗಿಕವಾದ ದ್ರವಗಳಾದ ಕಾಮಧೇನುವಿನಿಂದ ದೊರಕುವ ಹಾಲು-ಮೊಸರು, ತುಪ್ಪ, ಜೇನ್ನೊಣದಿಂದ ಸಿಗುವ ಮಧು, ಕಬ್ಬಿನಿಂದ ಬರುವ ಸಕ್ಕರೆ ಹಾಗೂ ಕಲ್ಪವೃಕ್ಷದಿಂದ ದತ್ತವಾದ ಎಳನೀರಿನಿಂದ ಮಾಡುವ ಅಭಿಷೇಕಕ್ಕೆ ಪಂಚಾಮೃತಾಭಿಷೇಕ ಎನ್ನಲಾಯಿತು. (ಮುಕ್ಕೋಟಿ ದೇವರುಗಳೂ ಗೋವಿನಲ್ಲಿದ್ದಾರೆ ಎಂಬುದು ಪ್ರತೀತಿ ಹೀಗಾಗೇ ಗೋವಿನ ಹಾಲನ್ನು ಮಾತ್ರ ಅಭಿಷೇಕಕ್ಕೆ ಬಳಸಲಾಗುತ್ತದೆ)

ಈ ಅಭಿಷೇಕಗಳನ್ನು ಮಾಡುವಾಗ ಏಕಾಗ್ರತೆ ಹಾಗೂ ದೈವಸ್ತುತಿಗಾಗಿ ಮಂತ್ರಗಳ ಉಗಮವಾಯಿತು. ಚಮಕ, ನಮಕಗಳ ಉಚ್ಚಾರಣೆಯಾಂದಿಗೆ ದೇವರಿಗೆ ಅಭಿಷೇಕ ಮಾಡುವುದು ರೂಢಿಗೆ ಬಂತು.

ಅಲಂಕಾರ : ನಾವು ಸ್ನಾನ ಮಾಡಿ ಶುಚಿಯಾದ ವಸ್ತ್ರ ಧರಿಸುವಂತೆಯೇ ದೇವರಿಗೂ ಅಲಂಕಾರ ಮಾಡಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದವರು, ತಮ್ಮ ಗಂಡು ಮಕ್ಕಳಿಗೇ ಹೆಣ್ಣು ಅಲಂಕಾರ ಹಾಕಿ ನೋಡಿ ಆನಂದಪಡುವಂತೆಯೇ ಭಕ್ತನು, ತನ್ನ ಆರಾಧ್ಯ ದೈವನಿಗೆ ಬೆಣ್ಣೆ, ಗೋಡಂಬಿ, ಪುಷ್ಪ ಮೊದಲಾದುವುಗಳಿಂದ ಅಲಂಕರಿಸಿ ಆನಂದಪಡುತ್ತಾನೆ. ಮನುಷ್ಯನ ಉತ್ಕಟ ಭಕ್ತಿಯಿಂದ ಬೆಳೆದದ್ದೇ ವಿವಿಧ ಬಗೆಯ ಅಲಂಕಾರಗಳು.

ಧೂಪ - ದೀಪ : ವಾತಾವರಣದಲ್ಲಿ ಕಾಣದ ಕಲ್ಮಶಗಳನ್ನು ಹೋಗಲಾಡಿಸಿ ಕಲುಷಿತ ವಾತಾವರಣವನ್ನು ಶುದ್ಧವಾಗಿಡಲು ಸಾಮ್ರಾಣಿ, ದಶಾಂಗ - ಗುಗ್ಗುಳಗಳ ಬಳಕೆ. ಅಲ್ಲದೆ ಶೀತಕ್ಕೆ ಉಷ್ಣವೇ ಮದ್ದು ಅಲ್ಲವೇ ಹೀಗಾಗಿ ಶುದ್ಧೋದಕ- ಪಂಚಾಮೃತ ಅಭಿಷೇಕದಿಂದ ಶೀತವಾದ ದೇವರಿಗೆ ಮಂಗಳಾರತಿ, ದೀಪಾರತಿ, ಸಾಂಮ್ರಾಣಿಯ ಮೂಲಕ ಉಷ್ಣ ಪೂಜೆ ಮಾಡಲಾಗುತ್ತದೆ.

ದೀಪ : ದೀಪ ಶಕ್ತಿ ಸ್ವರೂಪ, ಬೆಳಕಲ್ಲಿ ಆತ್ಮನಿವೇದನಾರ್ಥವಾಗಿ ಹಾಗೂ ಕಣ್ಣತುಂಬ ದೇವರನ್ನು ಬೆಳಕಲ್ಲಿ ತುಂಬಿಕೊಳ್ಳುವ ಸಲುವಾಗಿ ದೀಪಾರಾಧನೆ.

ನೈವೇದ್ಯ : ಇಷ್ಟೆಲ್ಲಾ ಆದ ಮೇಲೆ ದೇವರ ಹಸಿವು ನೀಗಸಲು ಏನಾದರೂ ಕೊಡಬೇಕಲ್ಲವೇ ಅದುವೇ ನೈವೇದ್ಯ. ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಕದಳಿಫಲ ಹಾಗೂ ನಾರಿಕೇಳ (ಬಾಳೆಹಣ್ಣು ಹಾಗೂ ತೆಂಗಿನಕಾಯಿ) ಮಾತ್ರವೇ ಶ್ರೇಷ್ಠ. ಈ ಎರಡೂ ಮಾನವನ ಎಂಜಲಿನ ಸೋಂಕಿಲ್ಲದೆ ಬೆಳೆವ ಫಲಗಳು.

ಮಾವು, ಹಲಸು ಎಲ್ಲವೂ ನಾವು ತಿಂದು ಎಸೆದ ಹಣ್ಣಿನ ಒಳಗಿರುವ ಬೀಜದಿಂದ ಹುಟ್ಟುವುದಾದ್ದರಿಂದ ಇದು ನೈವೇದ್ಯಕ್ಕೆ ಯೋಗ್ಯವಲ್ಲ ಎನ್ನುತ್ತಾರೆ ಹಿರಿಯರು.

ವ್ರತಗಳು : ನಮ್ಮಲ್ಲಿ ಬಹುತೇಕ ವರ್ಷದ 365ದಿನಕ್ಕೂ ಒಂದೊಂದು ವ್ರತವಿದೆ. ಈ ಸ್ಪರ್ಧೆ, ಒತ್ತಡದ ವಿಶ್ವದಲ್ಲಿ ನಿರ್ದಿಷ್ಟ ದಿನಗಳಲ್ಲಾದರೂ ದೇವರನ್ನು ಸ್ಮರಿಸಲಿ ಎಂಬ ಕಾರಣಕ್ಕಾಗಿ ಹಬ್ಬ- ಹರಿದಿನ - ವ್ರತಗಳನ್ನು ಮಾಡಲಾಗಿದೆ. ಹೇಗೆಂದರೆ ಒಂದು ಊರಿಗೆ ಒಂದೇ ಒಂದು ದೇವಾಲಯ ಸಾಕು. ಆದರೂ ಎಲ್ಲ ಬಡಾವಣೆಗಳಲ್ಲೂ ದೇವಾಲಯ ಇರುತ್ತದೆ.

ಇದಕ್ಕೆ ಕಾರಣ ಇಷ್ಟೇ ಬದುಕಿನ ಜಂಜಾಟದಲ್ಲಿ ಮನುಷ್ಯ ದೇವಾಲಯದ ಬಳಿ ಬಂದಾಗಲಾದರೂ, ಕ್ಷಣಕಾಲ ಆ ದೇವರನ್ನು ಸ್ಮರಿಸಲಿ ಎಂಬುದು ಇದರ ಹಿಂದಿರುವ ಉದ್ದೇಶ. ಮನೆಯಲ್ಲಿ ಕುಳಿತು ದೇವರನ್ನು ಗಂಟೆ ಗಟ್ಟಲೆ ಪೂಜಿಸಲಾಗದ ಈ ಯಾಂತ್ರಿಕ ಬದುಕಿನಲ್ಲಿ ದೇವಾಲಯಗಳು ಕಂಡಾಗ, ನಮಗರಿವಿಲ್ಲದೆ ನಾವು ತಲೆಬಾಗಿಸುತ್ತೇವೆ. ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more