ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನದ ಸಂಖ್ಯಾ ಫಲಕ ಕನ್ನಡದಲ್ಲಿದೆಯಾ?ಪೊಲೀಸರಿದ್ದಾರೆ ಜೋಕೆ!

By Staff
|
Google Oneindia Kannada News

ಬೆಂಗಳೂರು : ಕೆಲವು ವರ್ಷಗಳ ಹಿಂದೆ, ವಾಹನಗಳ ಸಂಖ್ಯಾಫಲಕಗಳನ್ನು ಕನ್ನಡ ಅಂಕಿಗಳಲ್ಲಿ ಬರೆಯುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈಚಿನ ದಿನಗಳಲ್ಲಿ ಇಂಥಾ ಕಾರ್ಯಕ್ರಮ ಅಪರೂಪವಾಗುತ್ತಿವೆ. ಕೆಲವು ಆಟೋ ಚಾಲಕರು ಮಾತ್ರ ಭಾಷಾಭಿಮಾನದಿಂದ ಕನ್ನಡ ಅಂಕಿಗಳಲ್ಲೇ ಸಂಖ್ಯಾಫಲಕ ಬರೆಸುವುದನ್ನು ಈಗಲು ಕಾಣಬಹುದು.

ಕನ್ನಡ ಸಂಖ್ಯಾಫಲಕಗಳನ್ನು ಇತ್ತೀಚಿನ ದಿನಗಳಲ್ಲಿ ಆರ್‌ಟಿಓ ಅಧಿಕಾರಿಗಳು ಕೂಡ ಬೆಂಬಲಿಸುತ್ತಿದ್ದಾರೆ. ಕನ್ನಡದಲ್ಲೇ ಸಂಖ್ಯಾ ಫಲಕ ಹಾಕಿಸಿ ಎನ್ನುವುದು ಆರ್‌ಟಿಓ ಅಧಿಕಾರಿಗಳ ಸ್ಪಷ್ಟ ಸೂಚನೆ. ಆದರೆ, ಪೊಲೀಸರದು ಇದಕ್ಕೆ ತೀರಾ ವ್ಯತಿರಿಕ್ತ ವರ್ತನೆ. ಕನ್ನಡ ಸಂಖ್ಯಾ ಫಲಕ ಹಾಕಿಕೊಂಡಿರುವ ವಾಹನಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿಕ್ಕೆ ಪೊಲೀಸರು ಹಿಂಜರಿಯುತ್ತಿಲ್ಲ . ಈ ಕ್ರಮ ಕೆಲವೊಮ್ಮೆ ಹಿಂಸಾಚಾರವಾಗಿ ಬದಲಾಗುವುದೂ ಉಂಟು.

ಅಶೋಕನಗರ ಪೊಲೀಸ್‌ ಠಾಣೆ ಸಂಚಾರಿ ಸಬ್‌ ಇನ್ಸ್‌ಪೆಕ್ಟರ್‌ ರಾಜನ್‌ ಇಂಥಾ ಕಿರುಕುಳ ನೀಡಿದ ಆರೋಪಕ್ಕೆ ತುತ್ತಾಗಿದ್ದಾರೆ. ಆಟೋ ಚಾಲಕ ರವಿಯನ್ನು ಸಂಖ್ಯಾ ಫಲಕ ಕನ್ನಡದಲ್ಲಿದೆ ಎನ್ನುವ ಕಾರಣಕ್ಕಾಗಿ ಸೋಮವಾರ ಕಿರುಕುಳ ನೀಡಿದರು ಅನ್ನುವ ಅಪವಾದ ರಾಜನ್‌ರ ತಲೆಮೇಲೆ ಕೂತಿದೆ. ರೊಚ್ಚಿಗೆದ್ದ ಆಟೋ ಚಾಲಕರು ಸೋಮವಾರ ರಾತ್ರಿ 9.30 ರಿಂದ 11 ರವರೆಗೆ ಬ್ರಿಗೇಡ್‌ ಹಾಗೂ ಎಂಜಿ ರಸ್ತೆಯಲ್ಲಿ ರಸ್ತೆತಡೆ ನಡೆಸಿ ರಾಜನ್‌ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು.

ಸಂಖ್ಯಾಫಲಕ ಕನ್ನಡದಲ್ಲಿರಲಿ ಎಂದು ಆರ್‌ಟಿಓ ಅಧಿಕಾರಿಗಳು ಹೇಳುತ್ತಾರೆ, ಪೊಲೀಸರು ಬೇಡವೆನ್ನುತ್ತಾರೆ. ನಾವೇನು ಮಾಡಬೇಕು? ಯಾರ ಮಾತು ಕೇಳಬೇಕು ? ಎನ್ನುತ್ತಾರೆ ಅಡಕತ್ತರಿಯಲ್ಲಿ ಸಿಲುಕಿರುವ ಆಟೋ ಚಾಲಕರು. ಪರಿಹಾರ ಹುಡುಕಿಕೊಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಂಘಟನೆಗಳನ್ನು ಆಟೋ ಚಾಲಕರು ಕೋರಿದ್ದಾರೆ, ಪರಿಹಾರ ಸಿಗುತ್ತದೆನ್ನುವ ವಿಶ್ವಾಸದೊಡನೆ!

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X