Get Updates
Get notified of breaking news, exclusive insights, and must-see stories!

ರಂಗನತಿಟ್ಟು ಪಕ್ಷಿಧಾಮಕ್ಕೆ ಕಾಯಕಲ್ಪ

* ಆರ್‌. ಮೋಹನ್‌ ಬಾಬು

Birds in Rangantittuಬೆಂಗಳೂರು : ಭಾರತದ ಎರಡನೇ ಅತಿ ದೊಡ್ಡ ಪಕ್ಷಿಧಾಮ ಎಂಬ ಖ್ಯಾತಿಗೆ ಪಾತ್ರವಾಗಿರುವ ಕರ್ನಾಟಕದ ಹೆಮ್ಮೆಯ ರಂಗನತಿಟ್ಟು ಪಕ್ಷಿಧಾಮವನ್ನು ವಿಸ್ತರಿಸಿ, ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಪರಿಸರ ಪ್ರವಾಸೋದ್ಯಮ ಯೋಜನೆಯ ಅಡಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಯೋಜನೆ ಸಿದ್ಧಪಡಿಸಿದೆ.

ಅರಮನೆಗಳ ನಗರಿ ಮೈಸೂರಿಗೆ ಸಮೀಪದಲ್ಲಿರುವ ಈ ಸುಂದರ ಪಕ್ಷಿಧಾಮದ ಅಭಿವೃದ್ಧಿಗೆ 90 ಲಕ್ಷ ರುಪಾಯಿಗಳನ್ನು ವೆಚ್ಚ ಮಾಡಲಾಗುವುದು. ಅಲ್ಲದೆ ಕಾವೇರಿ ನದಿಯಲ್ಲಿ ಇರುವ ಎಲ್ಲ ಐದು ದ್ವೀಪಗಳಿಗೂ ಇಲ್ಲಿಂದ ಪ್ರವೇಶಾವಕಾಶ ಕಲ್ಪಿಸಲಾಗುವುದು. ಈ ವಿಷಯವನ್ನು ದಕ್ಷಿಣ ವಲಯದ ಅರಣ್ಯ ಸಂರಕ್ಷಣಾಧಿಕಾರಿ ರವಿ ರಲಾಫ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ನಾವು ಪಕ್ಷಿಧಾಮದಲ್ಲಿ ಇನ್ನೂ ಹೆಚ್ಚು ಗಿಡ ಮರಗಳನ್ನು ನೆಡಲು ನಿರ್ಧರಿಸಿದ್ದೇವೆ. ಈ ಸಂಬಂಧ ಯೋಜನೆಯಾಂದು ಸಿದ್ಧವಾಗಿದ್ದು, ಕೇಂದ್ರ ಸರಕಾರದ ಅನುಮತಿಗಾಗಿ ಕಳುಹಿಸಲಾಗಿದೆ. ಯೋಜನೆಗೆ ಹಸಿರು ನಿಶಾನೆ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುವುದೆಂದು ಅವರು ಹೇಳಿದರು.

ಕೃಷ್ಣರಾಜ ಸಾಗರದಿಂದ ಮುಂದೆ ಹರಿಯುವ ಕಾವೇರಿಯಲ್ಲಿ ಐದು ದ್ವೀಪಗಳಿದ್ದು, ಇಲ್ಲಿ ದೇಶ - ವಿದೇಶಗಳ ಸಾವಿರಾರು ವಿವಿಧ ನಮೂನೆಯ ಪಕ್ಷಿಗಳು ಆಶ್ರಯ ಪಡೆಯುತ್ತವೆ. ವಿದೇಶದಿಂದ ಪಕ್ಷಿಧಾಮಕ್ಕೆ ಬರುವ ವಲಸೆ ಹಕ್ಕಿಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿದೆ ಎನ್ನುತ್ತಾರೆ ಅಧಿಕಾರಿಗಳು.

ಆದರೆ, ಈ ಪಕ್ಷಿಧಾಮಕ್ಕೆ ಸೈಬೀರಿಯಾ ಹಾಗೂ ಅಮೆರಿಕೆಯಿಂದ ಕೂಡ ಪಕ್ಷಿಗಳು ಬರುತ್ತವೆ ಎಂಬ ಅರಣ್ಯ ಇಲಾಖೆಯ ಅಧಿಕಾರಿಗಳ ವಾದವನ್ನು ಪಕ್ಷಿ ಅಧ್ಯಯನಿಗಳು ಒಪ್ಪುವುದಿಲ್ಲ. ಇಲ್ಲಿ ಮೊಟ್ಟೆ ಇಟ್ಟು ಮರಿ ಮಾಡಲು ಭಾರತೀಯ ಮೂಲದ ಹಕ್ಕಿಗಳು ಮಾತ್ರ ಬರುತ್ತವೆ. ಸೈಬೀರಿಯಾ ಹಾಗೂ ಅಮೆರಿಕಾ ಮೂಲದ ಹಕ್ಕಿಗಳು ಗೂಡು ಕಟ್ಟುವುದಿಲ್ಲ ಎಂಬುದನ್ನೂ ಅವರು ಉಲ್ಲೇಖಿಸುತ್ತಾರೆ.

ಅರ್ಧ ದಿನದಲ್ಲಿ ಸರ್ಕಾರಿ ಆಜ್ಞೆ : ಪಕ್ಷಿಗಳಿಗೆ ಪ್ರಿಯವಾದ ತಾಣವಾಗಿರುವ ರಂಗನತಿಟ್ಟನ್ನು ಹೆಸರಾಂತ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ಅವರ ಸಲಹೆಯ ಮೇರೆಗೆ 1938ರಲ್ಲಿ ಪಕ್ಷಿಧಾಮ ಎಂದು ಘೋಷಿಸಲಾಯಿತು. ಇಲ್ಲೊಂದು ಸ್ವಾರಸ್ಯ ಇದೆ. ಬೆಳಗ್ಗೆಯೆಲ್ಲಾ ಮೈಸೂರು ಸುತ್ತ ಮುತ್ತಲ ಪ್ರದೇಶದಲ್ಲಿ ಸುತ್ತಾಡಿದ ಡಾ. ಅಲಿ ಅವರು ಈ ಸಲಹೆ ನೀಡಿದ್ದು ಮಧ್ಯಾಹ್ನ. ಅವರ ಸಲಹೆಯನ್ನು ಮನ್ನಿಸಿದ ಅಂದಿನ ಸರಕಾರ ಸಂಜೆಯ ಹೊತ್ತಿಗೆ ಈ ಸಂಬಂಧ ಸರಕಾರಿ ಆದೇಶವನ್ನೇ ಹೊರಡಿಸಿತ್ತು ಎಂಬುದನ್ನು ನಿವೃತ್ತ ಅರಣ್ಯ ಅಧಿಕಾರಿಯಾಬ್ಬರು ಸ್ಮರಿಸುತ್ತಾರೆ.

ಸದ್ಯಕ್ಕೆ ಕೇವಲ ಒಂದೇ ಒಂದು ದ್ವೀಪ ವೀಕ್ಷಣೆಗೆ ಮಾತ್ರ ಅವಕಾಶ ಇದ್ದು, ಇನ್ನುಳಿದ ದ್ವೀಪಗಳಲ್ಲಿ ಬೀಡುಬಿಡುವ ಹಕ್ಕಿಗಳನ್ನು ಕಾಣುವುದು ದುರ್ಲಭವಾಗಿದೆ ಎನ್ನುವುದು ಡಾ. ರಲಾಫ್‌ ಅವರ ಅನಿಸಿಕೆ. ಹೀಗಾಗಿ ತೂಗು ಸೇತುವೆಗಳನ್ನು ನಿರ್ಮಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಅರಣ್ಯ ಇಲಾಖೆಯು ಪಕ್ಷಿಧಾಮದಿಂದ ಸುಮಾರು 37 ಲಕ್ಷ ರುಪಾಯಿಗಳ ಆದಾಯ ಗಳಿಸಿತು. ಕಳೆದ ವರ್ಷ ಹತ್ತಿರ ಹತ್ತಿರ ಒಂದು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರು ಎನ್ನುವ ಅವರು ಪಕ್ಷಿಧಾಮ ವಿಸ್ತರಣೆಗೆ ಈಗಾಗಲೇ ಕಂದಾಯ ಇಲಾಖೆಯಿಂದ 9 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದರು.

ಪರಿಸರವಾದಿಗಳ ಎಚ್ಚರಿಕೆ : ಪಕ್ಷಿಧಾಮವನ್ನು ಅಭಿವೃದ್ಧಿ ಪಡಿಸುವಾಗ ಜಾಗರೂಕತೆಯಿಂದ ಇರುವಂತೆ ಸರಕಾರಕ್ಕೆ ಪರಿಸರ ವಾದಿಗಳು ಹಾಗೂ ಪಕ್ಷಿ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ. ಅಜಾಗರೂಕತೆಯ ಕಾಮಗಾರಿಯಿಂದ ಪಕ್ಷಿಗಳು ಹೆದರಿ ಪಲಾಯನ ಮಾಡುವ ಅವಕಾಶ ಇದ್ದು, ಹಾಗಾದಲ್ಲಿ ರಂಗನತಿಟ್ಟು ಪಕ್ಷಿಧಾಮ ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತದೆ ಎಂದೂ ಎಚ್ಚರಿಸಿದ್ದಾರೆ.

(ಯು.ಎನ್‌.ಐ.)

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+