ಹೇಮಾವತಿಗೆ ಅಡಿಗೊಂದು ಅಡ್ಡಿ , ಹೇಗೆ ಬಂದಾಳು ?
ಜಯಚಂದ್ರರೇನೋ ಹೇಮಾವತಿ ತಂದೇ ತರುತ್ತೇನೆ ಎಂದು ಭಗೀರಥ ವಿಶ್ವಾಸದಲ್ಲಿ ಆಶ್ವಾಸನೆ ನೀಡುತ್ತಾರೆ. ಆದರೆ, ಅದೇ ಆಶ್ವಾಸನೆ ಎಲ್ಲಾ ಚುನಾವಣೆಗಳಲ್ಲೂ ನವೀಕೃತಗೊಳ್ಳುತ್ತಿದೆಯೇ ಹೊರತು, ಕಾರ್ಯರೂಪಕ್ಕೆ ಬರುವ ಯಾವ ಲಕ್ಷಣಗಳೂ ಇಲ್ಲ . ಅವರ ನಡೆಗಳನ್ನು ಬಲ್ಲ ಜನರ ಪ್ರಕಾರ, ಹೇಮಾವತಿ ಜಯಚಂದ್ರರ ಪಾಲಿಗೆ ಜೀವಂತ ರಾಜಕೀಯ ವಿಚಾರ, ಅಷ್ಟೇ.
ಹೇಮಾವತಿ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ 21 ಟಿಎಂಸಿ ನೀರಿನಿಂದ - ತುಮಕೂರು ನಗರ, ತಿಪಟೂರು, ಅರಸೀಕೆರೆ ಪಟ್ಟಣಗಳಿಗೆ ನೀರು ಕೊಡಲಾಗಿದೆ. ಇದೇ ನೀರಿನಲ್ಲಿ ತುರುವೇಕೆರೆ ಮತ್ತು ಗುಬ್ಬಿ ಪಟ್ಟಣಗಳಿಗೂ ಪಾಲಿಡಲಾಗಿದೆ.
ಈಗಾಗಲೇ ಹೇಮಾವತಿ ನೀರಿನ ಬಳಕೆಯ ಮಿತಿ ಭರ್ತಿಯಾಗಿರುವುದರಿಂದ, ಹೇಮಾವತಿಯನ್ನು ಶಿರಾ ನೆಚ್ಚಿಕೊಳ್ಳುವಂತಿಲ್ಲ . ಹೇಮಾವತಿಯನ್ನು ಶಿರಾಕ್ಕೆ ತರುವುದಾದರೆ, ಈ ವ್ಯಾಲಿಯಲ್ಲಿ 1.5 ಟಿಎಂಸಿಯಷ್ಟು ನೀರು ಹರಿಯಬೇಕು. ಶಿರಾಕ್ಕೆ ಬೇಕಾಗಿರುವುದು 0.122 ಟಿಎಂಸಿ ನೀರು ಮಾತ್ರ. ಇದರಿಂದಾಗಿ ತಾತ್ವಿಕ ನೆಲೆಯಲ್ಲಿ ಶಿರಾಕ್ಕೆ ಹೇಮಾವತಿ ಹಾಯಿಸಲು ನೀರಾವರಿ ಇಲಾಖೆ ಒಪ್ಪುವುದು ಸಾಧ್ಯವೇ ಇಲ್ಲ . ಆದರೂ, ಜಯಚಂದ್ರ ಹೇಮಾವತಿಯನ್ನೇ ಜಗ್ಗಾಡುತ್ತಿದ್ದಾರೆ. ಅದ್ಯಾವ ಜಾದುವಿನಿಂದಲಾದರೂ, ಹೇಮಾವತಿ ಸಾಧ್ಯವಾಗುವುದಾದರೆ ಕಳ್ಳಂಬೆಳ್ಳ ಕೆರೆ ತುಂಬುತ್ತದೆ ಅನ್ನುವುದವರ ಲೆಕ್ಕಾಚಾರ. ಅದಕ್ಕಾಗಿಯೇ ಗಾಯತ್ರಿಯ ಜುಟ್ಟು ಹಿಡಿದಿದ್ದಾರೆ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಹೇಮಾವತಿ ಸಾಧ್ಯವಾದರೆ, ಅದರ ಯಶಸ್ಸು ಜಯಚಂದ್ರರಿಗೆ ಸಲ್ಲುತ್ತದೆ. ಅವರು ಈ ಪ್ರದೇಶದ ಜನರ ಪಾಲಿಗೆ ಭಗೀರಥರಾಗುತ್ತಾರೆ. ಈ ಯಶಸ್ಸಿಗಾಗಿ ಕಾತರಿಸುತ್ತಿರುವ ಜಯಚಂದ್ರ, ಯಾರಿಗೂ ಪಾಲು ಕೊಡಲು ಒಪ್ಪುತ್ತಿಲ್ಲ .
ಗಾಯತ್ರಿಗೆ ಅಡ್ಡಗಾಲು, ಎಲ್ಲಿ , ಏಕೆ ?
ಗಾಯತ್ರಿ ಬಗ್ಗೆ ಅಸಮಾಧಾನವಿದ್ದ ಜಯಚಂದ್ರ, ನೀರಾವರಿ ಇಲಾಖೆಯ ಅಧೀನ ಕಾರ್ಯದರ್ಶಿ ಡಿ. ಉದಯಶಂಕರ್ ಅವರಿಂದ ತಮಗೆ ಅಗತ್ಯವಾದ ಆದೇಶ ಹೊರಡಿಸಿದರು (ಸಂಖ್ಯೆ. ನೀ.ಇ. 216. ಎನ್.ಹೆಚ್.ಪಿ.94, ದಿನಾಂಕ 18.05.2000). ಅದರ ಪ್ರಕಾರ, ಹೇಮಾವತಿ ನಾಲೆಯ 106 ನೇ ಕಿ.ಮೀ. ಒಂದು ಎಸ್ಕೇಪ್ ಮೂಲಕ ಶಿರಾಕ್ಕೆ ಅಗತ್ಯವಾದ ನೀರು ಒದಗಿಸಲು ಅನುಮತಿ ನೀಡಲಾಯಿತು. ಹೇಮಾವತಿ ನೀರು ಕೊಡುವಂತೆ, ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಗೆ ನೀರಾವರಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಪತ್ರ ಬರೆದದ್ದೂ ಆಯಿತು. ಇದರಿಂದಾಗಿ, ಗಾಯತ್ರಿ ಯೋಜನೆ ನೆನೆಗುದಿಗೆ ಬಿತ್ತು .
ಕೊನೆಗೆ, ಗಾಯತ್ರಿಗೆ ಜೀವ ತುಂಬಲು ಮುಖ್ಯಮಂತ್ರಿಗಳೇ ಬರಬೇಕಾಯಿತು. ಜಯಚಂದ್ರ ರೂಪಿಸಿದ ಯೋಜನೆಯನ್ನು , ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಸ್.ಎಂ. ಕೃಷ್ಣ , ಗಾಯತ್ರಿಗೇ ಸೈ ಅಂದರು. ಈ ಹೊತ್ತಿಗೆ ಗಾಯತ್ರಿ ಯೋಜನೆಯ ಟೆಂಡರ್ ಪಡೆದಿದ್ದ ಕೈಗಳೂ ಬದಲಾದವು. ಹಿಂಜರಿದ ಹೈದರಾಬಾದ್‌ನ ಭೂರತ್ನಂ ಕಂಪನಿ ಜಾಗೆಯಲ್ಲಿ ಮುಂಬಯಿಯ ಸುರೀಂದ್ರ ಅಂಡ್ ಕಂಪನಿ ಬಂದಿತು. ಪೈಪ್‌ಲೈನ್ ಕಾಮಗಾರಿಯೂ ಆರಂಭವಾಯಿತು. ಈ ಹೊತ್ತಿನಲ್ಲಿ ಆರಂಭವಾದದ್ದು ಕಾಡುಮಂತ್ರಿ ರಂಗನಾಥ್ ಅವಾಂತರ.
ಹಿರಿಯೂರು ತಾಲ್ಲೂಕಿನ ಜನತೆ, ಮುಖ್ಯವಾಗಿ ರೈತವರ್ಗ ಪೈಪ್‌ಲೈನ್ ಕಾಮಗಾರಿಗೆ ಅಡ್ಡಿಪಡಿಸಿದ್ದರಿಂದ ಗಾಯತ್ರಿ ಕಾಮಗಾರಿ ಸ್ಥಗಿತಗೊಂಡಿತು. ಈ ಪ್ರತಿಭಟನೆಯ ಬೆನ್ನಲ್ಲಿದ್ದುದು ರಂಗನಾಥ್. ಅವರಿಗೆ ಹಿರಿಯೂರು ರೈತರ ಹಿತಾಸಕ್ತಿಯ ವಕ್ತಾರನಾಗುವ ಹೆಬ್ಬಯಕೆ. ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಜಲಾಶಯವನ್ನು ಎತ್ತರಿಸಲಾಗುತ್ತಿದೆ. ಜಲಾಶಯವನ್ನು ಎತ್ತರಿಸುವುದರಿಂದ ಹಿರಿಯೂರು ಪ್ರದೇಶದ ಜನರಿಗೆ ಇನ್ನೂ ಹೆಚ್ಚಿನ ನೀರೊದಗುತ್ತದೆ ಅನ್ನುವ ಅಂಶಗಳ್ಯಾವುವೂ ರಂಗನಾಥ್‌ರ ಮುಟ್ಟಲಿಲ್ಲ . ಅದಕ್ಕೆ ಜಯಚಂದ್ರರೊಂದಿಗೆ ಅವರಿಗಿದ್ದ ಸ್ನೇಹ, ಒಂದೇ ಪಕ್ಷದವರೆನ್ನುವ ಅಭಿಮಾನ ಅಡ್ಡಿಯಾಯಿತು.
ಸತ್ಯನಾರಾಯಣರಿಗೆ ಧರಣಿ ಹೊರತು ಅನ್ಯಮಾರ್ಗವೇ ಇರಲಿಲ್ಲ
ಗಾಯತ್ರಿ ಕಾಮಗಾರಿ ಸ್ಥಗಿತಗೊಳ್ಳುತ್ತಿದ್ದಂತೆಯೇ, ಅದಕ್ಕೆ ಜೀವ ಹೊಯ್ದಿದ್ದ ಸತ್ಯನಾರಾಯಣ ವಿಲಿವಿಲಿಗುಟ್ಟಿದರು. ಕಾಮಗಾರಿ ಆರಂಭಕ್ಕೆ ಆಗ್ರಹಿಸಿ ಧರಣಿ ಕೂತರು. ಈ ಕುರಿತ ಪ್ರಸ್ತಾಪ, ಸದನದಲ್ಲೂ ಪ್ರಸ್ತಾಪವಾಯಿತು. ಸಮಸ್ಯೆಯ ಗಂಭೀರತೆಯನ್ನು ಮನಗೊಂಡ ಕೃಷ್ಣ , ಹೇಮಾವತಿ ಯೋಜನೆ ಮಂಜೂರು ಮಾಡುವ ಬಗೆಗೆ ಭರವಸೆ ನೀಡಿದರು.
ಹೇಮಾವತಿ ಮೂಲಕ ಶಿರಾ ಜನತೆಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎನ್ನುವ ಮುಖ್ಯಮಂತ್ರಿಗಳ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿ ಜಯಚಾಮರಾಜ ಅರಸ್ ಹಾಗೂ ಪೊಲೀಸ್ ಅಧಿಕಾರಿ ಆರ್.ಹಿತೇಂದ್ರ, ಸತ್ಯನಾರಾಯಣ ಅವರಿಗೆ ತಲುಪಿಸಿದರು. ಹೇಮಾವತಿಯಾದರೇನು, ಗಾಯತ್ರಿಯಾದರೇನು, ನೀರು ಮುಖ್ಯ ಎನ್ನುತ್ತ ಸತ್ಯನಾರಾಯಣ ಧರಣಿ ವಾಪಸ್ಸು ಪಡೆದಿದ್ದಾರೆ. ಯಾವುದಕ್ಕೂ ಮೂರು ತಿಂಗಳು ಕಾಯುತ್ತೇನೆ ಎಂದಿದ್ದಾರೆ. ಶಾಸಕ ರಂಗನಾಥಪ್ಪ ಮಾತ್ರ ಈ ರಗಳೆ ನನಗೆ ಸಂಬಂಧಿಸಿದ್ದಲ್ಲ ಎಂದು ತೆಪ್ಪಗಿದ್ದಾರೆ.
ಆದರೆ, ಗಾಯತ್ರಿ ಯೋಜನೆ ಕಾಮಗಾರಿಯನ್ನು 50 ರೈತರು ತಡೆದರೆಂದು ಕಾಮಗಾರಿ ನಿಲ್ಲಿಸಿರುವ ಸರ್ಕಾರ, ಹೇಮಾವತಿ ಸಂದರ್ಭದಲ್ಲಿ ಆ ಪ್ರದೇಶದ ರೈತರು ಕೆಂಪು ಬಾವುಟ ತೋರಿಸಿದರೆ ಏನು ಮಾಡುತ್ತದೆ ? ವೈ.ಕೆ. ರಾಮಯ್ಯ ಏನೂ ಸುಮ್ಮನಿರುವುದಿಲ್ಲವಲ್ಲ .
ಇದರಿಂದಾಗಿ -
ಹೇಮಾವತಿ ಹಾಗೂ ಗಾಯತ್ರಿ ವಿಷಯಗಳು ರಾಜಕೀಯ ದಾಳಗಳಾಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಂದಮೇಲೆ, ಶಿರಾ ನಾಗರಿಕ ರಾಜಕೀಯ ಪ್ರತಿಷ್ಠೆಯಲ್ಲಿ ಬೇಯುವುದು ನಿಶ್ಚಿತ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications