ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಾ ಜನತೆಯ ಕುಡಿಯುವ ನೀರನ್ನು ಕದ್ದವನು ಎಲ್ಲವನೆಲ್ಲವನೆ

By Staff
|
Google Oneindia Kannada News

* ಹ.ಚ. ನಟೇಶ್‌ಬಾಬು

ಅತ್ತ ಹೇಮಾವತಿ, ಇತ್ತ ಗಾಯತ್ರಿ, ನಡುವೆ ಹರಿದು ಬಾ ತಾಯೆ ಎಂದು ಬೊಗಸೆಯಾಡ್ಡಿ ಕಾಯುತ್ತಿದೆ ಶಿರಾ. ಪ್ರತಿವರ್ಷ ಮಾಮೂಲಾಗಿರುವ ಕುಡಿಯುವ ನೀರಿನ ಬರ ಈ ಹೊತ್ತು ಬೇಸಗೆಯ ಮೊದಲ ಪಾದದಲ್ಲೇ ಕಾಣಿಸಿಕೊಂಡಿರುವುದು ವಿಶೇಷ .

ಸಮೃದ್ಧತೆ ಅನ್ನುವುದನ್ನು ಯಾವತ್ತೂ ಕಾಣದ ಕಾರಣ, ಈ ಹೊತ್ತು ಶಿರಾದ ನಾಗರಿಕ ಕುಡಿಯುವ ನೀರಿನ ಸಮಸ್ಯೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ . ವಾರಕ್ಕೊಮ್ಮೆ ಕೊಳಾಯಿಯಲ್ಲಿ ಬರುವ ಅರ್ಧ ತಾಸಿನ ನೀರನ್ನೇ ನಂಬಿಕೊಂಡಿರುವ ಗೃಹಿಣಿ, ಕುಡಿಯುವ ನೀರಿಗಾಗಿ ಕೊಡಪಾನ ಹಿಡಿದು ಮೈಲುದಾರಿ ಸವೆಸಲಿಕ್ಕೆ ಮುಜುಗರ ಪಡುತ್ತಿಲ್ಲ .

ಇಷ್ಟಕ್ಕೂ , ತುಮಕೂರು ಜಿಲ್ಲೆಯ ಅರ್ಧ ಲಕ್ಷ ಜನಸಂಖ್ಯೆಯುಳ್ಳ ಈ ಪಟ್ಟಣ, ತೀರಾ ಕುತ್ತಿಗೆಗೆ ಬರದ ಹೊರತು ಮೌನ ಮುರಿದ ಉದಾಹರಣೆಗಳೇ ಇಲ್ಲ . ಎರಡು ವರ್ಷಗಳ ಹಿಂದೆ ಶೇಂಗಾ ಬೆಳೆಗೆ ಸೂಕ್ತ ಬೆಲೆ ದೊರಕಲಿಲ್ಲ ಎಂದು ವ್ಯವಸ್ಥೆಯ ವಿರುದ್ಧ ರೈತರು ಬಂಡೆದ್ದ ಕಾರಣವಾಗಿ ಹೊತ್ತಿ ಉರಿದ ಶಿರಾ ಸುದ್ದಿ ಕೇಂದ್ರವಾಗಿತ್ತು . ಉಳಿದಂತೆ, ಬೆಂಗಳೂರಿನಿಂದ ಪುಣೆ ಮಾರ್ಗವಾಗಿ 124 ಕಿಮೀ ದೂರದಲ್ಲಿ ರುವ, ಹೆದ್ದಾರಿಯ ನಂಟಸ್ತಿಕೆ ಹೊಂದಿರುವ ಈ ಊರು ಸದ್ದಿಲ್ಲದೆ ಬಿದ್ದುಕೊಂಡಿರುತ್ತೆ .

ಮೊನ್ನೆ , ಗಾಯತ್ರಿ ಕಾಮಗಾರಿ ವಿಳಂಬವನ್ನು ಪ್ರತಿಭಟಿಸಿ ಅಧಿಕಾರ ಇಲ್ಲದ ಬಿ. ಸತ್ಯನಾರಾಯಣ ಧರಣಿ ಕೂತಾಗ, ಆ ಧರಣಿಗೆ ಸಾರ್ವತ್ರಿಕ ರೂಪ ದೊರಕಲೇ ಇಲ್ಲ . ಕ್ಷೇತ್ರದ ಅಭಿವೃದ್ಧಿಗಿಂತ, ಗ್ಯಾರೇಜಿನಲ್ಲಿ ನಿಂತಿರುವ ಬಸ್ಸುಗಳೆಷ್ಟು, ರಸ್ತೆಯಲ್ಲಿ ಕುಂಟುತ್ತಿರುವ ಬಸ್ಸುಗಳೆಷ್ಟು ಅನ್ನುವ ಲೆಕ್ಕಾಚಾರದಲ್ಲಿರುವ ಹನುಮಾನ್‌ ಬಸ್ಸುಗಳ ಮಾಲೀಕ, ಹಾಲಿ ಶಾಸಕ ರಂಗನಾಥಪ್ಪ ಅವರಿಗಂತೂ, ಗಾಯತ್ರಿ ಎಂಬ ಅಟೆಕಟ್ಟು ಇರುವ ಬಗೆಗಾಗಲೀ, ಅಲ್ಲಿಂದ ಶಿರಾಕ್ಕೆ ಕುಡಿಯುವ ನೀರು ತರುವ ಯೋಜನೆಯಾಂದು ರೂಪುಗೊಂಡಿದೆ ಅನ್ನುವುದಾಗಲೀ ಗೊತ್ತಿಲ್ಲ . ಯಾಕೆಂದರೆ, ಗಾಯತ್ರಿಯ ಹಿಂದಿನ ರೂವಾರಿ ಮಾಜಿ ಸಚಿವ ಬಿ. ಸತ್ಯನಾರಾಯಣ. ಅವರು ಕಾಂಗ್ರೆಸ್‌ ಪಕ್ಷದವರಲ್ಲ . ಆ ಕಾರಣದಿಂದಲೇ, ರಂಗನಾಥಪ್ಪ ಕುಡಿಯುವ ನೀರಿನ ರಾಜಕೀಯವನ್ನು ಜಯಚಂದ್ರರಿಗೆ ತಗಲುಹಾಕಿ ನಿರಾಳವಾಗಿದ್ದಾರೆ.

ಶಿರಾ ಪಟ್ಟಣದ ಕುಡಿಯುವ ನೀರಿನ ವಿಷಯ ಈ ಹೊತ್ತು ಕೇವಲ ಜನರ ಸಮಸ್ಯೆಯಾಗಿ ಉಳಿಯದೆ, ರಾಜಕೀಯ ಸಮಸ್ಯೆಯಾಗಿ ಪರಿವರ್ತನೆ ಹೊಂದಿದೆ. ದಶಕಗಳ ನಂತರ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸುವ ಅವಕಾಶವನ್ನು ನುಂಗಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಈಗ ಕುಡಿಯುವ ನೀರಿನ ರಾಜಕೀಯ ಮಾಡ ಹೊರಟಿದ್ದಾರೆ. ಅವರಿಗೆ ಹೆಗಲು ಕೊಟ್ಟಿರುವ ಅಗ್ಗಳಿಕೆ ಚಿತ್ರದುರ್ಗದ ಸಚಿವ ಕೆ.ಎಚ್‌. ರಂಗನಾಥ್‌ ಅವರದ್ದು . ಒಬ್ಬರು ಕೃಷಿ ಸಚಿವರು, ಮತ್ತೊಬ್ಬರು ಕಾಡು ಮಂತ್ರಿಗಳು ಅನ್ನುವುದು ಗಮನಾರ್ಹ.

ಗಾಯತ್ರಿ/ಹೇಮಾವತಿ ಹರಿದು ಬಾ ತಾಯೇ.. ಹಳ್ಳ, ಕಾಡುಗಳ ನುಸುಳಿ ಬಾ

ಕಾವೇರಿ ಬೆಂಗಳೂರಿಗೆ ಬರುವುದರಲ್ಲೇ ಸುಸ್ತಾಗಿರುವುದರಿಂದ, ಬೇರೆ ಜಲಮೂಲಗಳು ಇಲ್ಲದಿರುವುದರಿಂದ- ಗಾಯತ್ರಿ ಅಥವಾ ಹೇಮಾವತಿ ಎರಡು ಮಾತ್ರ ಶಿರಾ ನಾಗರಿಕರ ನಾಲಗೆ ತಣಿಸಲು ಸಾಧ್ಯ. ಹೇಮಾವತಿಯನ್ನು ಕರೆ ತರುವಲ್ಲಿ ಕಳ್ಳಂಬೆಳ್ಳದ ಜಯಚಂದ್ರ ಅಕ್ಕರೆ ತೋರುತ್ತಿದ್ದರೆ, ಶಿರಾದ ಸತ್ಯನಾರಾಯಣ ಅವರಿಗೆ ಗಾಯತ್ರಿಯ ಬಗೆಗೆ ಒಲವು. ಯಾವುದಾದರೂ ಸರಿ, ಕುಡಿಯಲು ನೀರು ಬಂದರಾಯಿತು ಎನ್ನುತ್ತಾನೆ ಬಯಲಿಗೆ ಬಾರದೆ ಮನೆಯಲ್ಲೇ ಕುಳಿತಿರುವ ನಾಗರಿಕ.

ಗಾಯತ್ರಿಯೇ ಸೂಕ್ತ , ಏಕೆ ?

ಪಟೇಲ್‌ ಸಂಪುಟದಲ್ಲಿ ಸಚಿವರಾಗಿದ್ದಾಗ, ಗಾಯತ್ರಿ ಯೋಜನೆಯನ್ನು ಸತ್ಯನಾರಾಯಣ ರೂಪಿಸಿದರು. ಅದು ಅವರ ರಾಜಕೀಯ ಜೀವನದ ಮಹತ್ವಾಕಾಂಕ್ಷೆ ಅಂದರೂ ಆದೀತು . ಸತ್ಯನಾರಾಯಣ ಅವರ ಯೋಜನೆಗೆ ಅನುಗುಣವಾಗಿ ಜೆ.ಹೆಚ್‌. ಪಟೇಲರ ಸರ್ಕಾರ 25.02.1999 ರಂದು ಗಾಯತ್ರಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ (ಸಂಖ್ಯೆ/ನ.ಅ.ಇ/35/4ಡಬ್ಲ್ಯೂಎಸ್‌/98) ನೀಡಿತು. ಯೋಜನೆಯ ಮೊತ್ತ 14 ಕೋಟಿ ರುಪಾಯಿ. ಅದರಲ್ಲಿ ಅರ್ಧ ಭಾಗವನ್ನು ಸರ್ಕಾರ ಭರಿಸಲೂ, ಉಳಿದರ್ಧವನ್ನು ಹುಡ್ಕೋ ಸಾಲದಿಂದ ತುಂಬಲು ನಿರ್ಧರಿಸಲಾಗಿತ್ತು .

ಸುವರ್ಣಮುಖಿ ನದಿಯನ್ನು ಅವಲಂಬಿಸಿರುವ ಗಾಯತ್ರಿ ಜಲಾಶಯ ಶಿರಾಕ್ಕೆ 24 ಕಿಮೀ ದೂರದಲ್ಲಿದೆ. ನದಿಯ ನೀರು ಮಾತ್ರವಲ್ಲದೆ, ಮಳೆ ನೀರಿನ ಆಸರೆಯೂ ಜಲಾಶಯಕ್ಕಿದೆ. ಚಿತ್ರದುರ್ಗ ಜಿಲ್ಲೆ , ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿಯಲ್ಲಿರುವ ಜಲಾಶಯ 1831 ಚ.ಕಿ.ಮೀ ಜಲಾನಯನ ಪ್ರದೇಶಕ್ಕೆ ಹಸುರು ತಂದಿದೆ.

1876 ಮೀ. ಎತ್ತರವಿರುವ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 1 ಟಿಎಂಸಿ ಮಾತ್ರ. ಆದರೆ, ಜಲಾಶಯದಿಂದ ಪ್ರತಿವರ್ಷ 0.5 ಟಿಎಂಸಿಯಿಂದ 1 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಹರಿದುಹೋಗ್ತುತಿದೆ. ಕಳೆದ ಹತ್ತು ವರ್ಷಗಳಲ್ಲಿ ಏಳು ವರ್ಷಗಳು ಯಥೇಚ್ಛ ನೀರು ಹರಿದುಹೋಗಿದೆ. ಕೆಲವೊಮ್ಮೆ ಸತತವಾಗಿ ಮೂರು ತಿಂಗಳ ಕಾಲ ನೀರು ಕೋಡಿ ಹರಿದಿರುವುದೂ ಉಂಟು. ಈ ಹೆಚ್ಚುವರಿ ನೀರನ್ನು ಶಿರಾಕ್ಕೆ ಒದಗಿಸಲು, ಅದಕ್ಕಾಗಿ ಜಲಾಶಯವನ್ನು 2 ಅಡಿಯಷ್ಟು ಎತ್ತರಿಸಲು ಯೋಜನೆ ಉದ್ದೇಶಿಸಿದೆ. ಅಂದಹಾಗೆ, ಶಿರಾಕ್ಕೆ ಬೇಕಾಗಿರುವುದು 0.122 ಟಿಎಂಸಿ ನೀರು ಮಾತ್ರ.

ಶಿರಾಕ್ಕೆ ಕುಡಿಯುವ ನೀರನ್ನು ಒದಗಿಸುವ ಮೂಲಗಳ ಬಗೆಗೆ ಸಮೀಕ್ಷೆ ನಡೆಸಿರುವ ನವದೆಹಲಿಯ ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮ, ಗಾಯತ್ರಿ ಯೋಜನೆಯನ್ನು ಅನುಮೋದಿಸಿದೆ. ಶಿರಾ ಮಾತ್ರವಲ್ಲದೆ, ಆಸುಪಾಸಿನ ಜವಗೊಂಡನಹಳ್ಳಿ, ಉಜ್ಜನಕುಂಟೆ, ತಾವರೆಕೆರೆ, ಮಾರನಕೆರೆ, ಮಾನಂಗಿ ಗ್ರಾಮದ ನಾಲಗೆಗಳಿಗೆ ಕೂಡ ಜಲಾಶಯದಿಂದ ನೀರುಣಿಸಬಹುದೆಂದು ಸಮೀಕ್ಷಾ ವರದಿ ತಿಳಿಸಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X