ದೇವೇಗೌಡ, ರೇವಣ್ಣರಿಗೆ ಎಚ್‌ಐವಿ ಇಂಜೆಕ್ಷನ್‌ಚುಚ್ಚುವುದಾಗಿ ಬೆದರಿಕೆ
ಬೆಂಗಳೂರು : ಸಮಾಜದಲ್ಲಿ ಗಣ್ಯರು ಎಂದು ಹೆಸರಾದ ಮನುಷ್ಯರಿಗೆ ಹಾಗೂ ರಾಜಕಾರಣಿಗಳಿಗೆ ಜೀವ ಬೆದರಿಕೆಗಳು ಬರುವುದು ಮಾಮೂಲು. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ರಾಜಕೀಯ ವಾರಸುದಾರ ಪುತ್ರ ಎಚ್.ಡಿ. ರೇವಣ್ಣ ವಿನೂತನ ರೀತಿಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಏಡ್ಸ್ ಇಂಜೆಕ್ಷನ್ ಚುಚ್ಚಿ ಸಾಯಿಸುವುದಾಗಿ ಕಿಡಿಗೇಡಿಗಳು ಅಪ್ಪ ಮಕ್ಕಳಿಗೆ ಬೆದರಿಕೆ ಒಡ್ಡಿದ್ದಾರೆ.
ರೇವಣ್ಣ ಅವರ ಹೆಸರಿಗೆ ಏಪ್ರಿಲ್ 2 ರಂದು ಬೆದರಿಕೆ ಪತ್ರ ಬಂದಿದೆ . ಈ ಕುರಿತು ಮಾಜಿ ಪ್ರಧಾನಿಗಳ ಭದ್ರತಾ ಸಿಬ್ಬಂದಿ ದೂರು ನೀಡಿದ್ದು , ಬನಶಂಕರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗೌಡರ ಪತ್ನಿ ಚೆನ್ನಮ್ಮ ಹಾಗೂ ರೇವಣ್ಣ ಅವರ ಪತ್ನಿ ಭವಾನಿಗೆ ಆ್ಯಸಿಡ್ ಎರಚಿರುವುದು ತಮ್ಮ ಗುಂಪಿಗೆ ಖುಷಿ ತಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಪ್ಪ ಮಕ್ಕಳಿಬ್ಬರನ್ನು ಕೊಲೆ ಮಾಡಲು ಸಮಯ ಕಾಯುತ್ತಿದ್ದೇವೆ. ದೇವೇಗೌಡರು ಸುಲಭವಾಗಿ ಸಿಕ್ಕುವುದಿಲ್ಲ . ಆದರೆ, ರೇವಣ್ಣ ಇಂದಲ್ಲಾ ನಾಳೆ ಸಿಕ್ಕೇ ಸಿಗುತ್ತಾನೆ. ಆಗ ಎಚ್‌ಐವಿ ಇಂಜೆಕ್ಷನ್ ನೀಡಿ ನರಳಿ ಸಾಯುವಂತೆ ಮಾಡುತ್ತೇವೆ ಎಂದು ಪತ್ರ ಬರೆದವರು ಬೆದರಿಸಿದ್ದಾರೆ. ಪತ್ರದುದ್ದಕ್ಕೂ ಬೆದರಿಕೆ ಒಡ್ಡಿರುವ ಅನಾಮಿಕರು ಅಶ್ಲೀಲ ಭಾಷೆ ಬಳಸಿದ್ದಾರೆ.
ಅಧಿಕಾರ ಕಳೆದುಕೊಂಡ ನಂತರ, ಈಚಿನ ದಿನಗಳಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಒಡಕು ಮಾತುಗಳು ಕೇಳಿಬರುತ್ತಿರುವುದನ್ನು ಹಾಗೂ ಹಲ್ಲೆಯ ಯತ್ನಗಳು ನಡೆದಿರುವುದನ್ನು ಗಮನಿಸಬಹುದು. ಫೆ. 21 ರ ಶಿವರಾತ್ರಿಯಂದು ಗೌಡರ ಮೂಲನೆಲೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಹಾಗೂ ಭವಾನಿ ಅವರ ಮೇಲೆ ಗೌಡರ ಸೋದರ ಬಸವೇಗೌಡರ ಪುತ್ರ ಲೋಕೇಶ್ ಆ್ಯಸಿಡ್ ದಾಳಿ ನಡೆಸಿದ್ದ .
(ಇನ್ಫೋ ವಾರ್ತೆ)












Click it and Unblock the Notifications