ಬಿಜಾಪುರ : ಅಂಜುಮನ್ ಕಾಲೇಜು ಮುಚ್ಚಲುಕೆಎಸ್‌ಬಿಸಿ ಶಿಫಾರಸು
ಬಿಜಾಪುರ : ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್( ಕೆಎಸ್‌ಬಿಸಿ) ಬಿಜಾಪುರದ ಅಂಜುಮಾನ್ ಕಾನೂನು ಕಾಲೇಜನ್ನು ಮುಚ್ಚುವಂತೆ ಕೇಂದ್ರ ಬಾರ್ ಕೌನ್ಸಿಲ್‌ಗೆ ಶಿಫಾರಸು ಮಾಡಿದೆ. ಅಲ್ಲಿ ಅಧ್ಯಾಪಕರಿಗೆ ವೇತನವಿಲ್ಲ , ಕಾಲೇಜಿನಲ್ಲಿ ಮೇಜು ಕುರ್ಚಿಗಳಿಲ್ಲ ಎನ್ನುವ ಪರಿಸ್ಥಿತಿ. ಆದರೂ, ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವುದರಿಂದ ಅದು ಕಾಲೇಜು ಅನ್ನಿಸಿಕೊಂಡಿದೆ.
ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳೂ ಇಲ್ಲದಿರುವುದರಿಂದ ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜನ್ನು ಮುಚ್ಚುವಂತೆ ಕೆಎಸ್‌ಬಿಸಿ ತನ್ನ ಶಿಫಾರಸ್ಸಿನಲ್ಲಿ ಹೇಳಿದೆ. ಕೆಎಸ್‌ಬಿಸಿಯ ನಿರೀಕ್ಷಣಾ ಸಮಿತಿಯ ಅಧ್ಯಕ್ಷ ಜಯಕುಮಾರ್ ಎಸ್. ಪಾಟೀಲ್ ಮತ್ತು ಸಮಿತಿಯ ಸದಸ್ಯರು ಅಂಜುಮನ್ ಕಾಲೇಜಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಐದು ವರ್ಷ ಅವಧಿಯ ಕಾನೂನು ಕೋರ್ಸ್ ನಡೆಸಲು ಕೇಂದ್ರ ಬಾರ್ ಕೌನ್ಸಿಲ್ ಅನುಮತಿ ನೀಡಿರುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಂಜುಮನ್ ಇಸ್ಲಾಂ ಸೊಸೈಟಿ ನಡೆಸುತ್ತಿರುವ ಕಾನೂನು ಕಾಲೇಜಿನಲ್ಲಿ ಕೊಠಡಿಗಳು ಸುಸ್ಥಿತಿಯಲ್ಲಿಲ್ಲ. ಅಧ್ಯಾಪಕ ವರ್ಗಕ್ಕೆ ಸರಿಯಾದ ವೇತನವೂ ದೊರಕುತ್ತಿಲ್ಲ . ಕಳೆದ 1996ನೇ ಇಸವಿಯಿಂದ ಪ್ರಾಂಶುಪಾಲರಿಗೆ ಸರಿಯಾದ ವೇತನ ಪಾವತಿಯಾಗಿಲ್ಲ. ಕಾಲೇಜು ಆಡಳಿತ ಮಂಡಳಿ 3000 ಪುಸ್ತಕಗಳ ಉತ್ತಮ ಲೈಬ್ರರಿಯಿದೆ ಎಂದು ಹೇಳಿಕೊಂಡಿದೆ. ಆದರೆ ಲೈಬ್ರರಿಯಲ್ಲಿ ಕೇವಲ 800 ರಿಂದ 900 ಪುಸ್ತಕಗಳಷ್ಟೇ ಇರುವುದು ನಿರೀಕ್ಷಣಾ ಸಮಿತಿಯ ಗಮನಕ್ಕೆ ಬಂದಿದೆ.
ಕಾಲೇಜು ಆಡಳಿತ ಮಂಡಳಿ ತಕ್ಷಣವೇ 20 ಲಕ್ಷ ರೂಪಾಯಿ ಖರ್ಚು ಮಾಡಿ ಕಾಲೇಜಿಗೆ ಬೇಕಾದ, ಪೀಠೋಪಕರಣ ಮತ್ತು ಕಟ್ಟಡ ನಿರ್ಮಾಣ ವನ್ನು ಕೈಗೆತ್ತಿಕೊಳ್ಳಬೇಕು. ವರ್ಷಕ್ಕೆ ಐದು ಲಕ್ಷ ರೂಪಾಯಿಗಳನ್ನು ಅಧ್ಯಾಪಕ ವರ್ಗದ ವೇತನಕ್ಕಾಗಿ ಎತ್ತಿಡಬೇಕು ಎಂದು ನಿರೀಕ್ಷಣಾ ಸಮಿತಿ ಕಾಲೇಜನ್ನು ಮುಚ್ಚುವಂತೆ ಕೇಂದ್ರಕ್ಕೆ ಮಾಡಿದ ಶಿಫಾರಸ್ಸಿನಲ್ಲಿ ತಿಳಿಸಿದೆ.
(ಬಿಜಾಪುರ ಪ್ರತಿನಿಧಿಯಿಂದ)












Click it and Unblock the Notifications