ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲ್ದೀ ಚುಕ್ತಾ ಅಂಚೆ ಆಫೀಸುಗಳ ಮೂಲಕ ಪಾಸ್‌ಪೋರ್ಟ್‌- ಪಾಸ್ವಾನ್‌

By Staff
|
Google Oneindia Kannada News

ನವದೆಹಲಿ : ದೇಶದ 117 ಕ್ಷಿಪ್ರ ವಿಲೇವಾರಿ ಅಂಚೆ ಕಚೇರಿಗಳು ಸದ್ಯದಲ್ಲೇ ಪಾಸ್‌ಪೋರ್ಟ್‌ ಸೇವೆಯನ್ನೂ ಒದಗಿಸಲಿವೆ.

ಅರ್ಜಿಗಳ ವಿತರಣೆ, ಸ್ವೀಕಾರ ಹಾಗೂ ಅವುಗಳ ವಿಲೇವಾರಿ ಎಲ್ಲವೂ ಕ್ಷಿಪ್ರ ವಿಲೇವಾರಿ ಅಂಚೆ ಕಚೇರಿಗಳಲ್ಲೇ ನಡೆಯಲಿವೆ ಎಂದು ಕೇಂದ್ರದ ಸಂಪರ್ಕ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಸೋಮವಾರ ಹೇಳಿದರು. ದೇಶದ ಎಲ್ಲಾ ಪ್ರಜೆಗೂ ಪಾಸ್‌ಪೋರ್ಟ್‌ ಪಡೆಯುವ ಹಕ್ಕು ನೀಡಬೇಕು. 100 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕೇವಲ 2 ಕೋಟಿ ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಈ ಸವಲತ್ತು ಪಡೆದಿರುವವರಲ್ಲಿ ಕೇರಳಿಗರದೇ ಮೊದಲ ಸ್ಥಾನ. 3 ಲಕ್ಷದ 57 ಸಾವಿರ ಕೇರಳಿಗರು ಪಾಸ್‌ಪೋರ್ಟ್‌ ಪಡೆದಿದ್ದಾರೆ ಎಂದರು.

ಅಂಚೆ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಂಟಿಯಾಗಿ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ವಿತರಣಾ ಸೇವೆಯನ್ನು ಒದಗಿಸಲಿವೆ. ಮನೆಬಾಗಿಲಿಗೆ ಪಾಸ್‌ಪೋರ್ಟ್‌ ಸೇವೆಯನ್ನು ವಿಸ್ತರಿಸಬೇಕೆನ್ನುವುದೇ ಈ ಹೊಸ ಸೇವೆಯ ಉದ್ದೇಶ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹೇಳಿದರು.

ಕ್ಷಿಪ್ರ ವಿಲೇವಾರಿ ಅಂಚೆ ಕಚೇರಿಗಳಲ್ಲಿ ಹೊಸ ಕೌಂಟರೊಂದನ್ನು ತೆರೆಯಲಾಗುವುದು. ಅದರಲ್ಲಿ ಲಕೋಟೆ ಸಹಿತ ಪಾಸ್‌ಪೋರ್ಟ್‌ ಅರ್ಜಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವತಿಯಿಂದ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕರಿಸಿ, ಕ್ಷಿಪ್ರ ಅಂಚೆ ಸೇವೆಯ ಮೂಲಕ ಆಯಾ ವಿಭಾಗದ ಪಾಸ್‌ಪೋರ್ಟ್‌ ಕಚೇರಿಗೆ ಕಳುಹಿಸಲಾಗುವುದು. ಅಲ್ಲಿ ಅರ್ಜಿಗಳ ಪರಿಶೀಲನೆ ನಡೆಸುವರು. ಪಾಸ್‌ಪೋರ್ಟ್‌ ಕಚೇರಿಯವರೇ ಪೊಲೀಸರಿಂದ ಖಾತ್ರಿ ಕಾರ್ಯವನ್ನು ಆಯೋಜಿಸುವರು. ನಂತರ ಅಂಚೆ ಸೇವೆಯ ಮೂಲಕ ಅರ್ಹ ಅಭ್ಯರ್ಥಿಗಳ ಮನೆ ಬಾಗಿಲಿಗೆ ಪಾಸ್‌ಪೋರ್ಟ್‌ ಬಂದು ಸೇರುವುದು.

ಸಾಮಾನ್ಯ ಪಾಸ್‌ಪೋರ್ಟಿಗೆ ಮಾತ್ರ ಈ ಸೇವೆ ಸೀಮಿತ. ಅಧಿಕಾರಿ ಪಾಸ್‌ಪೋರ್ಟ್‌, ಪ್ರತಿನಿಧಿಗಳಿಗೆ ನೀಡುವ ಪಾಸ್‌ಪೋರ್ಟ್‌ ಮತ್ತಿತರ ವಿಶೇಷ ಪಾಸ್‌ಪೋರ್ಟ್‌ ಸೇವಾ ಸೌಲಭ್ಯ ಅಂಚೆ ಕಚೇರಿಗಳಲ್ಲಿ ಅಲಭ್ಯ. ಪಾಸ್‌ಪೋರ್ಟಿನ ಪರಿಶೀಲನಾ ಕಾರ್ಯ, ಸ್ವೀಕೃತಿ- ಅಸ್ವೀಕೃತಿ ಮೊದಲಾದ ವಿಷಯ ತಿಳಿಯುವುದೂ ಸುಲಭ. ಅರ್ಜಿಯಾಂದಿಗೆ ನಿಮಗೊಂದು ಕೀ ಕೋಡನ್ನು ಕೊಡಲಾಗುವುದು. ಜೊತೆಗೆ ನೀವು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನೂ ತಿಳಿಸಲಾಗುತ್ತದೆ. ಆ ದೂರವಾಣಿ ಸಂಖ್ಯೆಗೆ ಫೋನಾಯಿಸಿ, ನಿಮ್ಮ ಕೀ ಕೋಡ್‌ ಒತ್ತಿದರೆ, ಮಾಹಿತಿ ತಂತಾನೇ ಲಭ್ಯ. ಹೀಗಾಗಿ ಪಾಸ್‌ಪೋರ್ಟ್‌ ಪಡೆಯಬಯಸುವವರು ಪದೇ ಪದೇ ಪಾಸ್‌ಪೋರ್ಟ್‌ ಕಚೇರಿಗೆ ಎಡತಾಕುವುದು ತಪ್ಪಲಿದೆ.

ಮೊದಲ ಹಂತದಲ್ಲಿ ದೇಶದ 800 ಮುಖ್ಯ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಸೇವೆಯನ್ನು ಪ್ರಾರಂಭಿಸಲಾಗುವುದು. ಕ್ರಮೇಣ ಇತರೆ ಅಂಚೆ ಕಚೇರಿಗಳಿಗೂ ಸೇವೆಯನ್ನು ವಿಸ್ತರಿಸಲಾಗುವುದು. ಕರ್ನಾಟಕ, ಕೇರಳ, ಹೈದರಾಬಾದ್‌, ಮುಂಬಯಿ, ದೆಹಲಿ, ಚೆನ್ನೈ, ಕೋಲ್ಕತಾ ಹಾಗೂ ಅಹ್ಮದಾಬಾದ್‌ ನಗರಗಳಿಗೆ ಮೊದಲ ಹಂತದ ಸೇವೆ ಲಭ್ಯವಾಗಲಿದೆ.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X