ನನಗೆ ದುಡ್ಡು ಬೇಡ, ಭರವಸೆ ಕಟ್ಟಿಕೊಡಿ !
(ಇನ್‌ಫೊ ವಿಶೇಷ)
ಬೆಂಗಳೂರು : ಈ ಬಾಲಕನ ಹೆಸರು ಕುಶಾಲ್ ಕುಮಾರ್. ಖ್ಯಾತ ಕಲಾವಿದ ಪ.ಸ. ಕುಮಾರ್ ಅವರ ಪುತ್ರ. ವಯಸ್ಸು 12. ಬೆಳೆಯುವ ಬಾಲಕನಿಗೆ ಎರಡು ಮೂತ್ರ ಪಿಂಡವೂ ಕೈಕೊಟ್ಟಿತು. ತನ್ನ ವಯಸ್ಸಿನ ಮಕ್ಕಳು ಕುಣಿದು ಕುಪ್ಪಳಿಸುತ್ತಾ, ಸಮವಸ್ತ್ರ ತೊಟ್ಟು ಶಾಲೆಗೆ ಹೋಗುತ್ತಿದ್ದರೆ, ಈ ಬಾಲಕ ವೇದನೆ ಅನುಭವಿಸುತ್ತಾ ಕಣ್ಣೀರು ಗರೆದ.
ಪುಟ್ಟ ವಯಸ್ಸಿನಲ್ಲೇ ಬಾಲಕ ಅನುಭವಿಸಿದ ನೋವು ನೂರಾರು. ಕುಶಾಲನಿಗೆ ಈಗ ಮೂತ್ರಪಿಂಡದ ಕಸಿ ಚಿಕಿತ್ಸೆಯೂ ಆಗಿದೆ. ಅಷ್ಟೇನೂ ಸ್ಥಿತಿವಂತರಲ್ಲದ ತಂದೆ ಲಕ್ಷಾಂತರ ರುಪಾಯಿ ಖರ್ಚುಮಾಡಿ ಮಗನನ್ನು ಉಳಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಆಯಿತು ಇನ್ನೇನು ಭಯವಿಲ್ಲ ಎಂದು ನಿಟ್ಟುಸಿರು ಬಿಡುವ ಮೊದಲೇ, ಔಷಧಗಳ ಪಾರ್ಶ್ವ ಪರಿಣಾಮದಿಂದಾಗಿ ಹೊಸ ಸಮಸ್ಯೆಗಳೂ ಕುಶಾಲನನ್ನು ಕಾಡಿವೆ. ಮೈಯೆಲ್ಲಾ ರೋಮ ಬೆಳೆದಿದೆ. ಹಾರ್ಮೋನ್‌ಗಳ ವ್ಯತ್ಯಾಸದಿಂದ ಹೀಗಾಗಿದೆ ಎನ್ನುತ್ತಾರೆ ವೈದ್ಯರು. ಈ ಎಲ್ಲದರ ಜೊತೆಗೆ ಕುಶಾಲ್ ನಿತ್ಯ ಸೈಕ್ಲೋಸ್ಟುರಿನ್ ಮಾತ್ರೆ ಸೇವಿಸಲೇ ಬೇಕು. ತಿಂಗಳೊಂದಕ್ಕೆ ಬರೀ ಮಾತ್ರೆಗೇ 6 ಸಾವಿರ ರುಪಾಯಿ ಬೇಕು. ಈಗ ಕುಶಾಲ್ ಈ ಎಲ್ಲ ಹಂತ ದಾಟಿದ್ದಾನೆ.
ತನ್ನ ಔಷಧದ ಖರ್ಚನ್ನು ತಾನೇ ಸಂಪಾದಿಸುವ ದಾರಿ ತುಳಿದಿದ್ದಾನೆ.
ಸ್ವಾವಲಂಬನೆಯ ಛಲ ಹೊತ್ತ ಈ ಪೋರನಿಗೆ ಕುಂಚಕಲೆ ಕರಗತವಾಗಿದೆ. ತನ್ನ ತಂದೆ ಚಿತ್ರ ಬಿಡಿಸುವುದನ್ನು ನೋಡಿಯೇ ಚಿತ್ರಕಲೆ ಕಲಿತ ಕುಶಾಲ್ ಕುಂಚದಿಂದ ನೂರಾರು ಚಿತ್ರಗಳು ಮೂಡಿವೆ. ನಂದಿನಿ ಬಡಾವಣೆಯ ಆಕ್ಸ್‌ಫರ್ಡ್ ಸ್ಕೂಲ್‌ನಲ್ಲಿ ಓದುತ್ತಿದ್ದ ಈ ಬಾಲಕ ಸಮರನೌಕೆ, ಪ್ರಾಣಿ, ಪಕ್ಷಿ, ವಿಮಾನ, ಆಟ, ಓಟ, ನಿಸರ್ಗವನ್ನೆಲ್ಲಾ ತನ್ನ ಕುಂಚದಲ್ಲಿ ಬಂಧಿಸಿದ್ದಾನೆ.
ಇದೇ ಭಾನುವಾರದಿಂದ ( ಫೆ. 25) ಮಾರ್ಚ್ 5ನೇ ತಾರೀಖಿನವರೆಗೆ ಬೆಳಗ್ಗೆ 11ರಿಂದ ಸಂಜೆ 7ಗಂಟೆ ವರೆಗೆ ಬಾಲ ಕಲಾವಿದ ಕುಶಾಲ್ ರಚಿಸಿರುವ ಚಿತ್ರಗಳ ಪ್ರದರ್ಶನ ‘ಟೇಕ್ ಆಫ್’ ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯಲ್ಲಿರುವ ( ರಾಮಕೃಷ್ಣ ಮಠ ಸಮೀಪ) ನಿರ್ಮಲಾ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ. ಡಿ.ಜಿಪಿ. ಮತ್ತು ಐ.ಜಿ (ಬಂದೀಖಾನೆ) ರೇವಣ ಸಿದ್ದಯ್ಯ ಈ ಚಿತ್ರಪ್ರದರ್ಶನ ಉದ್ಘಾಟಿಸುತ್ತಿದ್ದಾರೆ. ಪರ್‌ಫೆಟ್ಟಿ ಇಂಡಿಯಾ ಸಂಸ್ಥೆ ಈ ಪ್ರದರ್ಶನದ ಪ್ರಾಯೋಜಕತ್ವ ವಹಿಸಿದೆ.
ಈ ಪ್ರದರ್ಶನದಲ್ಲಿ ತನ್ನ ಚಿತ್ರಗಳನ್ನು ಮಾರಿ, ಬಂದ ಹಣದಲ್ಲಿ ಪ್ರತಿತಿಂಗಳೂ ತನ್ನ ಔಷಧಗಳಿಗೆ ವೆಚ್ಚವಾಗುವ 10 ಸಾವಿರ ರುಪಾಯಿಗಳನ್ನು ನಾನೇ ಸಂಪಾದಿಸುತ್ತೇನೆ ಎನ್ನುತ್ತಾನೆ ಕುಶಾಲ್. ಕುಶಾಲ್‌ಗೆ ಮೂತ್ರಪಿಂಡದ ತೊಂದರೆ ಕಾಣಸಿಕೊಂಡಾಗ ಆತನ ಮಾತಾ ಪಿತೃಗಳಿಗೆ ಭರಸಿಡಿಲು ಬಡಿದಂತಾಯ್ತು. ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಮೂರು ಲಕ್ಷ ರುಪಾಯಿಗಳನ್ನು ಅದೂ ಒಂದು ವಾರದ ಅಲ್ಪಾವಧಿಯಲ್ಲಿ ಹೇಗೆ ಸಂಗ್ರಹಿಸುವುದು ಎಂಬ ಚಿಂತೆ ಕಾಡಿತು.
ಆಗ ಚಿತ್ರಕಲಾವಿದ ಪ.ಸ. ಕುಮಾರ್ ನೆರವಿಗೆ ಬಂದವರು ಕನ್ನಡಪ್ರಭ ಸಹೋದ್ಯೋಗಿಗಳು ಮತ್ತು ಕಲಾವಿದ ಮಿತ್ರರು. ಕುಮಾರ್‌ಗೆ ಧೈರ್ಯ ಹೇಳಿದರು. ಕುಮಾರ್ ಅವರ ಚಿತ್ರ ಪ್ರದರ್ಶನ ಏರ್ಪಡಿಸಿದರು. ಕೇಂದ್ರ ಸಚಿವ ಅನಂತಕುಮಾರ್, ಪೊಲೀಸ್ ಅಧಿಕಾರಿ ರೇವಣ ಸಿದ್ಧಯ್ಯ ಸಹಾಯ ಹಸ್ತ ನೀಡಿದರು. ಕಲಾ ಪ್ರದರ್ಶನದಲ್ಲಿ ಮಾರಾಟವಾದ ಚಿತ್ರಗಳು ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸುವಲ್ಲಿ ನೆರವಾಯಿತು.
ಈಗ ಕುಶಾಲ್ ಕೂಡ ತಂದೆಯಿಂದ ಸ್ಫೂರ್ತಿಪಡೆದು ತಾನೇ ರಚಿಸಿದ ನೌಕಾದಾಳಿ, ವಾಯುದಾಳಿ, ಗೌತಮಬುದ್ಧ, ಚುಕ್ಕಿ ಚಂದ್ರಮರ ಚಿತ್ರಗಳನ್ನು ಮಾರಲು ಸಿದ್ಧನಾಗಿದ್ದಾನೆ. ಆತ್ಮಾಭಿಮಾನಿಗಳ ಕುಟುಂಬದ ಈ ದಿಟ್ಟ ಬಾಲಕನ ಚಿತ್ರ ಪ್ರದರ್ಶನಕ್ಕೆ ನೀವು ಬನ್ನಿ. ನಿಮ್ಮ ಮನೆಯ ಗೋಡೆಗಳನ್ನು ನೊಂದ ಬಾಲಕನ ಕಲ್ಪನೆಯ ಚಿತ್ರಗಳಿಂದ ಸಿಂಗರಿಸಿ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications