ಪ್ಲಾಸ್ಟಿಕ್ ಸರ್ಜರಿವರೆಗೆ ಬಂದು ನಿಂತ ಗೌಡರ ಮನೆಯ ಒಳಜಗಳ
ಹಾಸನ : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಹಾಗೂ ತಮ್ಮ ದೊಡ್ಡಮ್ಮ ಚೆನ್ನಮ್ಮ ದೇವೇಗೌಡ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಅವರನ್ನು ಕೊಲ್ಲಲೆಂದೇ ಬೆಂಗಳೂರಿನಿಂದ ಒಂದು ಲೀಟರ್ ಆ್ಯಸಿಡ್ ಕೊಂಡು ತಂದಿದ್ದಾಗಿ ಆ್ಯಸಿಡ್ ಪ್ರಕರಣದ ಪ್ರಮುಖ ಆರೋಪಿ ಲೋಕೇಶ್ ಹೇಳಿಕೆ ನೀಡಿದ್ದಾನೆ.
1996ರವರೆಗೆ ನಾವುಗಳು (ಕುಟುಂಬದವರು) ಚೆನ್ನಾಗೇ ಇದ್ದೆವು. ಕ್ಯಾತನಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದರು, ಅವಮಾನ ಮಾಡಿದರು, ಪಿತ್ರಾರ್ಜಿತ ಆಸ್ತಿ ಭಾಗ ವಿಷಯದಲ್ಲೂ ಅಧಿಕಾರ ಇದೆ ಎಂದು ಅನ್ಯಾಯ ಮಾಡಿದರು. ಇದು ಕೌಟುಂಬಿಕ ದ್ವೇಷಕ್ಕೆ ಕಾರಣ ಆಯಿತು. ನಮಗಾದ ಅವಮಾನ ನನ್ನಿಂದ ಈ ಕೆಲಸ ಮಾಡಿಸಿತು ಎಂದು ಲೋಕೇಶ್ ಪೊಲೀಸರಿಗೆ ತಿಳಿಸಿದ್ದಾನೆ.
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ. ದೇವೇಗೌಡರು ದೇವರು ಎಲ್ಲ ನೋಡಿದ್ದಾನೆ. ತನಿಖೆ ಬೇಡ ಎಂಬ ಹೇಳಿಕೆ ನೀಡಿದ್ದಾರೆ. ಸತ್ಯ ಹೊರ ಬರಬೇಕಾದರೆ ತನಿಖೆ ಆಗಲೇ ಬೇಕು ಎಂದು ಪ್ರತಿಪಕ್ಷದ ಕೆಲವು ನಾಯಕರು ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದಾರೆ.
ಹೊಳೆನರಸೀಪುರ ಬಂದ್ : ದೇವೇಗೌಡರ ಪತ್ನಿ ಹಾಗೂ ಸೊಸೆಯ ಮೇಲೆ ಶಿವರಾತ್ರಿಯ ದಿನ ನಡೆದ ಆ್ಯಸಿಡ್ ದಾಳಿಯನ್ನು ಖಂಡಿಸಿ, ಹೊಳೆನರಸೀಪುರದಲ್ಲಿ ಸ್ವಯಂ ಘೋಷಿತ ಬಂದ್ ಆಚರಿಸಲಾಗಿದೆ. ತಾಲೂಕು ಜಾತ್ಯತೀತ ಜನತಾದಳ ನೀಡಿದ್ದ ಕರೆಯ ಮೇರೆಗೆ ಗುರುವಾರ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನೂ ಮುಚ್ಚಿ ನಾಗರಿಕರು ಬಂದ್‌ಗೆ ಬೆಂಬಲ ಸೂಚಿಸಿದರು.
ಬಂದ್ ಪರಿಣಾಮವಾಗಿ ಪಟ್ಟಣದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕೆಲಕಾಲ ಪಕ್ಷದ ಕಾರ್ಯಕರ್ತರು ಹಾಸನ- ಮೈಸೂರು ರಸ್ತೆಯ ಹಂಗರಹಳ್ಳಿಯಲ್ಲಿ ರಸ್ತೆ ತಡೆ ಚಳವಳಿಯನ್ನೂ ನಡೆಸಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇವೇಗೌಡರ ಕುಟುಂಬದ ಮೇಲೆ ನಡೆದ ಆ್ಯಸಿಡ್ ದಾಳಿಯನ್ನು ಖಂಡಿಸಿದ್ದಾರೆ.
ಇಂದು ಶಸ್ತ್ರ ಚಿಕಿತ್ಸೆ : ತೀವ್ರ ಸುಟ್ಟ ಗಾಯಗಳಿಂದ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಶುಕ್ರವಾರ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಚೆನ್ನಮ್ಮ ಅವರಿಗೆ ಶೇ. 30ರಷ್ಟು ಸುಟ್ಟಗಾಯಗಳಾಗಿದ್ದು, ಸ್ಕಲ್‌ಗೂ ಆ್ಯಸಿಡ್ ಇಳಿದಿರುವ ಕಾರಣ ಅವರ ದೇಹಸ್ಥಿತಿ ಗಂಭೀರವಾಗಿದೆ. ತಲೆ, ದೇಹದ ಬಲಭಾಗ, ಸೊಂಟ, ಮುಖದ ಚರ್ಮ ಸುಟ್ಟುಹೋಗಿದೆ ಎಂದು ಡಾ. ಪರಂಗುಸಾ ದಾಸ್ ತಿಳಿಸಿದ್ದಾರೆ.
(ಇನ್‌ಪೊ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications