ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್, ಆರೋಪಿ ಬಂಧನ
ಹಾಸನ : ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಪತ್ನಿ ಮತ್ತು ಅವರ ಸೊಸೆಯ ಮೇಲೆ ಆ್ಯಸಿಡ್ ಎರಚಿ ಕೊಲೆಗೆ ಪ್ರಯತ್ನಿಸಿದ ಘಟನೆ ಬುಧವಾರ ರಾತ್ರಿ ವರದಿಯಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಮತ್ತು ಮಗ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ, ಪ್ರತಿ ವರ್ಷದಂತೆ ಶಿವರಾತ್ರಿ ಸಂದರ್ಭದಲ್ಲಿ ಪೂಜೆ ಸಲ್ಲಿಸಲು ಹುಟ್ಟೂರಾದ ಹೊಳೆ ನರಸೀಪುರ ತಾಲ್ಲೂಕಿನ ಹರದನ ಹಳ್ಳಿಯ ದೇವಸ್ಥಾನಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡಿರುವ ಚೆನ್ನ ಮ್ಮ ಮತ್ತು ಭವಾನಿ ಅವರಿಗೆ ಹಾಸನದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಇಬ್ಬರನ್ನೂ ಅಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಸಾಗಿಸಲಾಯಿತು. ಚೆನ್ನಮ್ಮ ಅವರಿಗೆ ಶೇ 30ರಷ್ಟು ಮತ್ತು ಭವಾನಿಯವರಿಗೆ ಶೇ 25ರಷ್ಟು ಸುಟ್ಟ ಗಾಯಗಳಾಗಿವೆ.
ದೇವೇಗೌಡರ ಸೋದರ ಬಸವೇಗೌಡರ ಮಗ ಲೋಕೇಶ್ ಈ ಕೃತ್ಯವೆಸಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಆ್ಯಸಿಡ್ ಎರಚುತ್ತಿರುವಾಗ ಆರೋಪಿ ಲೋಕೇಶ್‌ನ್ನು ಸ್ಥಳದಲ್ಲಿಯೇ ಪೊಲೀಸರು ಬಂಧಿಸಿದ್ದು, ಜ್ಞಾನೇಶ್ ಮತ್ತು ಶ್ರೀನಿವಾಸ್ ಎಂಬವರನ್ನೂ ಬಂಧಿಸಲಾಗಿದೆ. ಚೆನ್ನಮ್ಮ ಮತ್ತು ಭವಾನಿ ಅವರ ಜೊತೆಗಿದ್ದ ಎಸ್‌ಐ ಪಾಟೀಲ್ , ಒಬ್ಬ ಎಸ್.ಪಿ. ಜಿ. ಸಿಬ್ಬಂದಿ ಮತ್ತು ಇಬ್ಬರು ಪೇದೆಗಳಿಗೂ ಗಾಯಗಳಾಗಿವೆ.
ದೇವೇಗೌಡರ ಪ್ರತಿಕ್ರಿಯೆ : 35 ವರ್ಷಗಳ ತಮ್ಮ ರಾಜಕೀಯ ಅನುಭವದಲ್ಲಿ ಇಂತಹ ಘಟನೆ ನಡೆದಿಲ್ಲ. ರಾಜಕೀಯ ದ್ವೇಷ ಸಾಧಿಸಲು ಸಂಚು ನಡೆಸಿರುವ ವೈರಿಗಳು ಈ ಕುಕೃತ್ಯಕ್ಕೆ ನನ್ನ ತಮ್ಮನನ್ನು ಸಾಧನವಾಗಿ ಬಳಸಿಕೊಂಡಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ. ಈ ಕೊಲೆ ಯತ್ನದ ಹಿಂದಿರುವ ದುಷ್ಟ ಶಕ್ತಿಗಳ ಕೈವಾಡವನ್ನು ಬಯಲಿಗೆಳೆಯುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)












Click it and Unblock the Notifications