ಬಿಸಿಸಿಐ ಮಾಜಿ ಅಧ್ಯಕ್ಷ ಐ.ಎಸ್.ಬಿಂದ್ರಾ ಸೀಟಿಗೇ ಕುತ್ತು?
ಚೆನ್ನೈ: ಕಳೆದ ವಷ ರ್ ಮೇ ತಿಂಗಳಲ್ಲಿ ಕ್ರಿಕೆಟ್ ಮೋಸದಾಟದ ಬಗೆಗೆ 400 ಪುಟಗಳ ಇತಿ ವೃತ್ತಾಂತ ಬರೆದು, ಆಗಿನ ಐಸಿಸಿ ಅಧ್ಯಕ್ಷ ಜಗನ್ಮೋಹನ ದಾಲ್ಮಿಯಾ ಕೂಡ ಭ್ರಷ್ಟ ಎಂದು ಆರೋಪಿಸಿ, ಬೆದರಿಕೆ ಕರೆಗಳಿಗೂ ಗುರಿಯಾಗಿದ್ದ ಪಂಜಾಬ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಐ.ಎಸ್.ಬಿಂದ್ರಾ ಅವರ ಕುರ್ಚಿಗೇ ಈಗ ಕುತ್ತು ಬಂದಿದೆ.
ಶುಕ್ರವಾರ ನಗರದಲ್ಲಿ ಬಿಸಿಸಿಐ ಒಂದು ಸಭೆ ನಡೆಸಲಿದ್ದು, ಬಿಸಿಸಿಐನ ಮಾಜಿ ಅಧ್ಯಕ್ಷ ಬಿಂದ್ರಾ ಭವಿತವ್ಯ ನಿರ್ಧಾರವಾಗಲಿದೆ. ಕಳ್ಳಾಟ, ಕ್ರಿಕೆಟ್ಟಿನ ಜೊತೆಗೇ ಬೆಸೆದುಕೊಂಡು ಬಂದಿದೆ. ಆಟಗಾರರಷ್ಟೇ ಅಲ್ಲ, ಮಂಡಳಿಯ ಅನೇಕ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐಗೆ ಸಲ್ಲಿಸಿದ್ದ ವರದಿಯಲ್ಲಿ ಬಿಂದ್ರಾ ಉಲ್ಲೇಖಿಸಿದ್ದರು. ಪಂಜಾಬ್ ಕ್ರಿಕೆಟ್ ಮಂಡಳಿಯಲ್ಲಿ ಸರ್ವಾಧಿಕಾರ ಮೆರೆಯುತ್ತಿದ್ದಾರೆಂಬ ಆರೋಪ ಹೊತ್ತಿರುವ ಬಿಂದ್ರಾ ಹಾಗೂ ಆತನ ಸಹ ಅಧಿಕಾರಿಯಾಬ್ಬರನ್ನು ಬಿಸಿಸಿಐ ಶಿಸ್ತು ಸಮಿತಿ ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ದೆಹಲಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನೂ ಸಭೆಯಲ್ಲಿ ಕೈಗೊಳ್ಳಲಾಗುವುದು. ತಮ್ಮ ಎನ್‌ಸಿಎಯ ಹುದ್ದೆಗೆ ಸುನಿಲ್ ಗವಾಸ್ಕರ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸುವುದೋ, ಬೇಡವೋ ಎಂಬ ಮಹತ್ವವಾದ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಗುವುದು. ಸರಣಿ ವಿಚಾರ ಸಂಕಿರಣ ಹಾಗೂ ತರಪೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ 1.74 ಕೋಟಿ ರುಪಾಯಿ ವೆಚ್ಚ ಮಾಡಲಾಗುತ್ತಿದೆ.
ಐಸಿಸಿಯ ಮಾಜಿ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷರೊಬ್ಬರು ಈಗಾಗಲೇ ನಗರಕ್ಕೆ ಬಂದಿಳಿದಿದ್ದಾರೆ. ಬಿಂದ್ರಾ ವರದಿಯಲ್ಲಿನ ಆರೋಪಿಗಳ ಹೆಸರುಗಳ ಪೈಕಿ ದಾಲ್ಮಿಯಾ ಹೆಸರೂ ಇತ್ತು. ಆಗ ಇದಕ್ಕೆ ಕೆಂಡಾಮಂಡಲಾಗಿ ಪ್ರತಿಕ್ರಿಯಿಸಿದ್ದ ದಾಲ್ಮಿಯಾ, ಬಿಂದ್ರಾಗೆ ಹುಚ್ಚು ಹಿಡಿದಿದೆ. ಆಸ್ಪತ್ರೆಗೆ ಸೇರಿಸೋದು ಒಳಿತು ಎಂದು ಹೇಳಿದ್ದರು.
(ಯುಎನ್‌ಐ)












Click it and Unblock the Notifications