ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯರಿಗೆ ನಿರಂತರ ಕಲಿಕೆ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ

By Staff
|
Google Oneindia Kannada News

*ದೀಪ್ಷಿಕಾ ಘೋಷ್‌

ನವದೆಹಲಿ : ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ಅನೇಕ ಹೊಸ ಶಾಸನಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ವೈದ್ಯರು ತಮ್ಮ ವೃತ್ತಿಯುದ್ದಕ್ಕೂ ವೈದ್ಯಕೀಯ ಶಿಕ್ಷಣವನ್ನು ಕಡ್ಡಾಯವಾಗಿ ಮುಂದುವರಿಸುವ ಹಾಗೂ ರೋಗಿಗಳ ಚಿಕಿತ್ಸೆಯ ಬಗ್ಗೆ ದಾಖಲೆ ಇಡುವಂತೆ ಶಾಸನವನ್ನು ಸದ್ಯದಲ್ಲೇ ಜಾರಿಗೆ ತರಲಿದೆ.

ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಆತ್ಮಾವಲೋಕನ ಮಾಡಿಕೊಳ್ಳಲು ಅನುಕೂಲವಾಗುವ ನೀತಿ ಸಂಹಿತೆಯನ್ನು ರೂಪಿಸಲಾಗುವುದು. ಕಡ್ಡಾಯ ಶಿಕ್ಷಣ ಹಾಗೂ ನೀತಿ ಸಂಹಿತೆ ಯೋಜನೆಗಳು ಸಚಿವ ಸಂಪುಟದ ಸಮ್ಮತಿಗಾಗಿ ಕಾಯುತ್ತಿವೆ ಎಂದು ಆರೋಗ್ಯ ಸಚಿವಾಲಯ ಕಚೇರಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕನ್‌ ಬೋರ್ಡ್‌ ಆಫ್‌ ಯುರಾಲಜಿ ಹಾಗೂ ಭಾರತೀಯ ಮೂಲದ ಅಮೆರಿಕದಲ್ಲಿರುವ ವೈದ್ಯರ ಸಂಘಟನೆ (ಎಎಪಿಐ)ಯ ಮಾಜಿ ಅಧ್ಯಕ್ಷ ನವೀನ್‌ ಸಿ. ಶಾ ಅವರ ಮಾರ್ಗದರ್ಶನದಂತೆ ಈ ಪ್ರಸ್ತಾವನೆಗಳನ್ನು ಸಿದ್ಧ ಪಡಿಸಲಾಗಿದೆ. ವಾಜಪೇಯಿ ಅವರ ಇತ್ತೀಚಿನ ಅಮೆರಿಕ ಯಾತ್ರೆಯಲ್ಲಿ ಎಎಪಿಐ, ವಾಜಪೇಯಿ ಅವರಲ್ಲಿ ಈ ಬಗ್ಗೆ ಚರ್ಚೆ ನಡೆಸಿತ್ತು . ಅಲ್ಲದೇ, ಸೋಮವಾರ ಸಂಜೆ ವಾಜಪೇಯಿ ಹಾಗೂ ಆರೋಗ್ಯ ಕಾರ್ಯದರ್ಶಿ ಅವರನ್ನು ಶಾ ಭೇಟಿ ಮಾಡಿದ್ದು, ಅವರ ಭೇಟಿ ಯಶಸ್ವಿಯಾಗಿದೆ ಎನ್ನಲಾಗಿದೆ.

ಎಲ್ಲರಿಗೂ ಎಲ್ಲಾ ಕಾಲದಲ್ಲಿಯೂ ಉತ್ತಮ ವೈದ್ಯಕೀಯ ಸೌಲಭ್ಯ

ಕೇವಲ ವಾಣಿಜ್ಯ ಉದ್ದೇಶಗಳಿಗಾಗಿ ನಾಯಿಕೊಡೆಗಳಂತೆ ಹಬ್ಬುವ ಆಸ್ಪತ್ರೆಗಳನ್ನು ಸರ್ಕಾರ ಜಾರಿಗೆ ತರುವ ಶಾಸನ ನಿಯಂತ್ರಿಸುತ್ತದೆ. ಆಸ್ಪತ್ರೆಗಳಿಗೆ ಪರವಾನಗಿ ನೀಡುವ ನೀತಿಯ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಈ ಪ್ರಸ್ತಾವನೆಗೆ ಸರ್ಕಾರ ಕೂಡ ಒಪ್ಪಿದೆ ಎಂದು ಶಾ, ಇಂಡಿಯಾ ಅಬ್ರಾಡ್‌ಗೆ ತಿಳಿಸಿದ್ದಾರೆ. ಈ ಯೋಜನೆಯ ಜಾರಿಯಿಂದ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಒದಗಿಸಲು ಸಾಧ್ಯ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಕೆಲವು ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ ಅಧ್ಯಯನದ ನಂತರ ಈ ಪ್ರಸ್ತಾವನೆ ಸಿದ್ಧ ಪಡಿಸಲಾಗಿದೆ. ಈ ಯೋಜನೆಯನ್ನು ಪ್ರಮುಖ ನಗರಗಳಲ್ಲಿ ಜಾರಿಗೊಳಿಸಲು ಉದ್ದೇಶಿಲಾಗಿದ್ದು, ಮೂರು ವರ್ಷಗಳಿಗೊಮ್ಮೆ ಆಸ್ಪತ್ರೆಗಳು ತಮ್ಮ ಪರವಾನಿಗೆಯನ್ನು ನವೀಕರಿಸಬೇಕಾಗಿದೆ.

ಹೊಸ ಪದ್ಧತಿಯಲ್ಲಿ ಆಸ್ಪತ್ರೆಯಲ್ಲಿನ ಸೇವಾ ಸೌಲಭ್ಯಗಳು ತೃಪ್ತಿಕರವಾಗಿದ್ದಲ್ಲಿ ಮಾತ್ರ ಸರ್ಕಾರ ಪರವಾನಗಿಯನ್ನು ನವೀಕರಿಸುವುದು. ಅಂತೆಯೇ ಪ್ರತಿ ಐದು ವರ್ಷಗಳಿಗೊಮ್ಮೆ ವೈದ್ಯರು ತಮ್ಮ ಸೇವಾ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಆ ಸಮಯದಲ್ಲಿ ವೈದ್ಯರು ಪ್ರತಿ ವರ್ಷಕ್ಕೆ ಕನಿಷ್ಠ 30 ಗಂಟೆಗಳ ಅವಧಿಯಂತೆ, 5 ವರ್ಷಕ್ಕೆ 150 ಗಂಟೆಗಳ ಕಡ್ಡಾಯ ವೈದ್ಯಕೀಯ ಶಿಕ್ಷಣ ಪಡೆದಿರುವ ಬಗ್ಗೆ ಪರಿಶೀಲಿಸಲಾಗುವುದು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರತಿ ರೋಗಿಯ ಚಿಕಿತ್ಸೆಯ ವಿವರಗಳನ್ನು ದಾಖಲಿಸಿ ಸಂಗ್ರಹಿಸಿಡಲು ಹೊಸ ಶಾಸನ ಒತ್ತು ನೀಡುತ್ತದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರ ಸಂಬಂಧಿಗಳು ಚಿಕಿತ್ಸೆಗೆಂದು ಅಮೆರಿಕೆಗೆ ಬಂದಾಗ ಅವರ ಬಳಿ ಈ ಹಿಂದೆ ಪಡೆದ ಚಿಕಿತ್ಸೆಯ ಬಗ್ಗೆ ಸಮರ್ಪಕ ದಾಖಲೆಗಳು ಇಲ್ಲದ್ದನ್ನು ನಾವು ಗಮನಿಸಿದ್ದೇವೆ. ಸೂಕ್ತ ಚಿಕಿತ್ಸೆ ನೀಡಲು ಹಿಂದಿನ ಚಿಕಿತ್ಸೆಯ ದಾಖಲೆಗಳು ಪ್ರಮುಖವಾದ್ದರಿಂದ, ವಿವರಗಳನ್ನು ದಾಖಲಿಸಿಡುವ ಶಾಸನವನ್ನು ಹೊರಡಿಸಲಾಗುವುದು ಎಂದು ಶಾ ತಿಳಿಸಿದ್ದಾರೆ.

ಎಷ್ಟೋ ರೋಗಿಗಳಿಗೆ ಆಸ್ಪತ್ರೆಯಲ್ಲಿ ತಾವು ಪಡೆಯುವ ಚಿಕಿತ್ಸೆಯ ಬಗ್ಗೆ ತಿಳಿವಳಿಕೆಯೇ ಇರುವುದಿಲ್ಲ ಹಾಗೂ ಅದೇ ರೋಗಿ ಮತ್ತೊಬ್ಬ ಹೊಸ ವೈದ್ಯನಲ್ಲಿಗೆ ಹೋದಾಗ ಆವರೆಗೆ ಆತ ಪಡೆದ ಚಿಕಿತ್ಸೆಯ ದಾಖಲೆಗಳು ದೊರಕುವುದು ಕಷ್ಟ. ಹೊಸ ಶಾಸನ ಈ ಎಲ್ಲಾ ದೂರುಗಳಿಗೆ ಕೊನೆ ಹಾಡುತ್ತದೆಂದು ನಿರೀಕ್ಷಿಸಲಾಗಿದೆ. ಹಾಗಾದಲ್ಲಿ ಸರ್ವರಿಗೂ ಆರೋಗ್ಯ ಘೋಷಣೆಯ ಯೋಜನೆ ಕಾರ್ಯರೂಪಕ್ಕೆ ಬಂದಂತಾಗುತ್ತದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X