ಐಪಿಎಲ್ ಪಂದ್ಯಗಳ ವೇಳೆ ಅಪ್ರಾಪ್ತರನ್ನು ಬಳಸಿ ಮೊಬೈಲ್ ಕಳ್ಳತನ: ಅಂತರರಾಜ್ಯ ಗ್ಯಾಂಗ್ ಬೆಂಗಳೂರಿನಲ್ಲಿ ವಶಕ್ಕೆ
ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಐಪಿಎಲ್ ಕ್ರಿಕೆಟ್ ಪಂದ್ಯದ ಸಂಭ್ರಮದ ನಡುವೆಯೇ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದ್ದ ಖತರ್ನಾಕ್ ಅಂತರರಾಜ್ಯ ಮೊಬೈಲ್ ಕಳ್ಳರ ಜಾಲವನ್ನು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ವಯಸ್ಕ ಹಾಗೂ ನಾಲ್ವರು ಅಪ್ರಾಪ್ತರು ಸೇರಿದಂತೆ ಒಟ್ಟು ಐವರನ್ನು ವಶಕ್ಕೆ ಪಡೆಯಲಾಗಿದೆ.
ನೂಕುನುಗ್ಗಲು ಬಂಡವಾಳ
ಈ ಗ್ಯಾಂಗ್ ಮೊಬೈಲ್ ಕಳ್ಳತನ ಮಾಡಲು ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರಗಳು, ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮತ್ತು ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳಲ್ಲಿ ಉಂಟಾಗುವ ಭಾರಿ ನೂಕುನುಗ್ಗಲನ್ನು ಈ ಗ್ಯಾಂಗ್ ಬಳಸಿಕೊಳ್ಳುತ್ತಿತ್ತು. ಕ್ರೀಡಾಂಗಣದ ಸುತ್ತಮುತ್ತ ಮತ್ತು ಗೇಟ್‌ಗಳ ಬಳಿ ಪ್ರೇಕ್ಷಕರು ನೂಕುನುಗ್ಗಲಿನಲ್ಲಿರುವಾಗ, ಈ ಗ್ಯಾಂಗ್ ಸದ್ದಿಲ್ಲದೆ ಮೊಬೈಲ್‌ಗಳನ್ನು ದೋಚುತ್ತಿತ್ತು. ಜನರ ಗಮನ ಬೇರೆಡೆ ಇರುವಾಗ ಅಪ್ರಾಪ್ತರು ನುಸುಳಿ ಜೇಬಿನಿಂದ ಫೋನ್ ಎಗರಿಸುತ್ತಿದ್ದರು ಎನ್ನಲಾಗಿದೆ. ಪಂದ್ಯ ಮುಗಿಸಿ ಮನೆಗೆ ಹಿಂದಿರುಗುವಾಗ ಅಥವಾ ಪ್ರಯಾಣದ ಸಮಯದಲ್ಲಿ ಅನೇಕ ವೀಕ್ಷಕರಿಗೆ ತಮ್ಮ ಮೊಬೈಲ್ ಕಳುವಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಇದುವರೆಗೆ ಒಟ್ಟು 29 ಪ್ರಕರಣಗಳು ದಾಖಲಾಗಿವೆ.

ಹೊರರಾಜ್ಯದಿಂದ ಬಂದಿದ್ದ ಗ್ಯಾಂಗ್
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಈ ಆರೋಪಿಗಳು ಕರ್ನಾಟಕದ ಹೊರಗಿನ ದೊಡ್ಡ ಜಾಲದ ಭಾಗವಾಗಿದ್ದಾರೆ. ಐಪಿಎಲ್ ಪಂದ್ಯದ ಸಮಯದಲ್ಲೇ ಕಳ್ಳತನ ಮಾಡಲು ಇವರು ಹೊರರಾಜ್ಯದಿಂದ ಬೆಂಗಳೂರಿಗೆ ಬಂದು ಸ್ಥಳೀಯ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಬಂಧಿತರಿಂದ ಸದ್ಯ 21 ದುಬಾರಿ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಎರಡು ರಾತ್ರಿಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ ಅಪರಾಧ ದಳದ ತಂಡವು ಈ ಗ್ಯಾಂಗ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ತಂಡದ ಕೆಲವು ಸದಸ್ಯರು ಈಗಾಗಲೇ ಬೇರೆ ರಾಜ್ಯಗಳಿಗೆ ಪರಾರಿಯಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಈ ಜಾಲವು ದೇಶದಾದ್ಯಂತ ಐಪಿಎಲ್ ನಡೆಯುವ ಕಡೆಗಳಲ್ಲಿ ಸಕ್ರಿಯವಾಗಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.
ಇದು ರಾಷ್ಟ್ರಮಟ್ಟದ ದೊಡ್ಡ ಜಾಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪಂದ್ಯದ ಸಂಭ್ರಮದಲ್ಲಿರುವಾಗ ನಮ್ಮ ಫೋನ್ ಕಳೆದುಹೋದರೆ ಯಾರಿಗೆ ಹೇಳಬೇಕು? ಎಂಬುದು ಈಗ ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಯ ಪ್ರಶ್ನೆಯಾಗಿದೆ. ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾನಿಗಳು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.












Click it and Unblock the Notifications