ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಿಗಳ ಪ್ರಾಣ ಪಕ್ಷಿಯನ್ನೇ ಕಬಳಿಸುತ್ತಿರುವ ಮೈಸೂರು ಕೆರೆ

By Staff
|
Google Oneindia Kannada News

ಮೈಸೂರು : ರಾಷ್ಟ್ರ ಕವಿ ಕುವೆಂಪು ಅವರಿಗೆ ಸ್ಫೂರ್ತಿಯ ತಾಣವಾಗಿದ್ದ ಮೈಸೂರಿನ ಕುಕ್ಕರಹಳ್ಳಿ ಕೆರೆಯ ನಂತರ ಪ್ರಸಿದ್ಧಿ ಪಡೆದ ಮತ್ತೊಂದು ಕೆರೆ ಲಿಂಗಾಂಬುಧಿ. ಲಿಂಗಾಂಬುಧಿ ಕೆರೆ ವಲಸೆ ಪಕ್ಷಿಗಳ ಕಾಶಿ ಎಂದೇ ಹೆಸರಾಗಿದ್ದ ಕಾಲವೂ ಒಂದಿತ್ತು.

ಆದರೆ, ಕಳೆದ ಕೆಲವು ತಿಂಗಳುಗಳಿಂದ ಲಿಂಗಾಂಬುಧಿ ವಲಸೆ ಪಕ್ಷಿಗಳಿಗೆ ಮೃತ್ಯು ಕೂಪವಾಗಿದೆ. ಈ ಕೆರೆಯನ್ನೇ ಅರಸಿ ದೇಶ - ವಿದೇಶದಿಂದ ಹಾರಿ ಬರುವ ಪಕ್ಷಿಗಳ ಪ್ರಾಣ ಪಕ್ಷಿಯೇ ಇಲ್ಲಿ ಹಾರಿ ಹೋಗುತ್ತಿದೆ. ಕಳೆದ ತಿಂಗಳು ಕೆರೆಯಲ್ಲಿ ಬಹುತೇಕ 40ಕ್ಕೂ ಹೆಚ್ಚು ವಲಸೆ ಪಕ್ಷಿಗಳು ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಹಾಗೂ ಪಕ್ಷಿ ಪ್ರಿಯರನ್ನು ಕಂಗೆಡಿಸಿತ್ತು. ಈಗ ಮತ್ತೂ ನಾಲ್ಕು ಪಕ್ಷಿಗಳ ಪ್ರಾಣ ಪಕ್ಷಿಯೇ ಹಾರಿಹೋಗಿರುವ ಹಿನ್ನೆಲೆಯಲ್ಲಿ ಕೆರೆಯ ನೀರಿನ ಬಗ್ಗೆ ಅನುಮಾನಗಳು ಬಲವಾಗುತ್ತಿವೆ.

ನೀರೋ ಹಾಲಹಲವೋ : ಒಂದು ಕಾಲದಲ್ಲಿ ಜನ - ಜಾನುವಾರು ಹಾಗೂ ಹೊಲ, ಗದ್ದೆಗಳಿಗೆ ನೀರುಣಿಸುತ್ತಿದ್ದ ಈ ಕೆರೆಯ ನೀರು ಈಗ ನೀರಾಗಿಯೇ ಉಳಿದಿದೆಯೇ? ಅಥವಾ ಹಾಲಾಹಲವಾಗಿ ಪರಿವರ್ತನೆಯಾಗಿದೆಯೇ? ಕೃಷ್ಣ ಲೀಲೆ ಓದಿದವರಿಗೆ ನೆನಪಿರಬೇಕು. ಕಾಳಿಂಗ ಎಂಬ ಸರ್ಪವೊಂದು ಸಂಸಾರ ಹೂಡಿದ್ದ ಸರೋವರದಲ್ಲಿ ನೀರು ಕುಡಿದ ನಂದಗೋಕುಲದ ದನಕರುಗಳು ಸಾವನ್ನಪ್ಪಿದಾಗ, ಶ್ರೀಕೃಷ್ಣ ಕಾಳಿಂಗ ಮರ್ಧನ ಮಾಡಿ ಜನ - ಜಾನುವಾರುಗಳನ್ನು ಉಳಿಸಿದನಂತೆ.

ಆದರೆ, ಇಂದು ಲಿಂಗಾಂಬುಧಿ ಕೆರೆಯನ್ನೇ ಅರಸಿಬಂದು ಸಾಯುತ್ತಿರುವ ಪಕ್ಷಿಗಳನ್ನು ಉಳಿಸಲು ಯಾರೂ ಇಲ್ಲ ಎನ್ನುವಂತಾಗಿದೆ. ಶನಿವಾರ ಮತ್ತೆ ಈ ಕೆರೆಯಲ್ಲಿ ಪೆಲಿಕನ್‌ ಸೇರಿದಂತೆ ನಾಲ್ಕು ಪಕ್ಷಿಗಳು ಸಾವನ್ನಪ್ಪಿವೆ. ಈ ಪಕ್ಷಿಗಳ ಸಾವಿಗೆ ಕಾರಣ ಹುಡುಕುವ ಕಾಯಕವೂ ನಡೆದಿದೆ. ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪರೀಕ್ಷೆಯೂ ನಡೆಯುತ್ತಿದೆ. ಕಳೆದ ತಿಂಗಳು ಕೂಡ ಸತ್ತ ಹಲವು ಪಕ್ಷಿಗಳನ್ನು ಹಾಗೂ ಕೆರೆಯ ನೀರನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.

ಕಲುಷಿತ ನೀರು : ಪಕ್ಷಿಗಳ ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದ್ದು, ಪಕ್ಷಿಗಳ ಸಾವು ನಿರಂತರವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಹೇಳಿಕೆಯ ರೀತ್ಯ ಕೆರೆಯ ನೀರು ಮಾರಣಾಂತಿಕವಾಗುವಷ್ಟು ಹೊಲಬುಗೆಟ್ಟಿಲ್ಲವಂತೆ. ಹಾಗಾದರೆ ಹಕ್ಕಿಗಳು ಸಾಯುತ್ತಿರುವುದಕ್ಕೆ ಕಾರಣ ಏನು ಎಂಬ ಚಿಂತೆ ಪಕ್ಷಿ ಪ್ರೇಮಿಗಳನ್ನು ಕಾಡುತ್ತಿದೆ.

ಚರಂಡಿಯ ನೀರು, ಕೆಲವು ಕಾರ್ಖಾನೆಗಳು ಹೊರ ಬಿಡುತ್ತಿರುವ ತ್ಯಾಜ್ಯ ಕೆರೆಯನ್ನು ಸೇರುತ್ತಿದ್ದು, ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ ಎಂಬುದು ಪರಿಸರವಾದಿಗಳ ಆರೋಪವಾಗಿದೆ. ಸರಕಾರ ಎಚ್ಚೆತ್ತುಕೊಳ್ಳದಿದ್ದರೆ, ಪಕ್ಷಿಗಳಿಗೆ ಬಂದಿರುವ ಸ್ಥಿತಿಯೇ ಜಾನುವಾರುಗಳಿಗೂ ಬರಬಹುದು ಎಂಬುದು ಅವರ ಅಳಲಾಗಿದೆ. ಸದ್ಯಕ್ಕಂತೂ ಪಕ್ಷಿಗಳ ಸಾವು ಚಿದಂಬರ ರಹಸ್ಯವಾಗೇ ಉಳಿದಿದೆ. (ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X