ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜಾ ತಾಜಾ ಕಡಲೇ ಕಾಯಿ...

By Staff
|
Google Oneindia Kannada News

ಒಕ್ಕಲು ವಂಶದ ತಲೆತಲಾಂತರದ ಜಾತ್ರೆ

ಕಡಲೇ ಕಾಯಿ ಹೆಸರಲ್ಲಿ ಜಾತ್ರೆ ನಡೆಯುವುದಕ್ಕೂ ಒಂದು ಕತೆ ಇದೆ. ಈ ಪ್ರದೇಶ ಹಿಂದೆ ಸುಂಕೇನ ಹಳ್ಳಿ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿ ಹೊಲ ಗದ್ದೆಗಳು ಇದ್ದ ಪ್ರದೇಶ. ಕಡಲೇ ಕಾಯಿಯೇ ಈ ಪ್ರದೇಶದ ಪ್ರಮುಖ ಬೆಳೆ. ಇಲ್ಲಿನ ರೈತರು ತಾವು ಬೆಳೆದ ಕಡಲೆ ಕಾಯಿಯನ್ನು ರಾಶಿ ಮಾಡಿದಾಗ ಬಸವ ಅಂದರೆ ವೃಷಭ (ಗೂಳಿ) ತಿನ್ನಲು ಬರುತ್ತಿತಂತೆ. ತಮ್ಮ ಬೆಳೆಯನ್ನು ಯಥೇಚ್ಛವಾಗಿ ತಿಂದು ಹೋಗುತ್ತಿತ್ತಂತೆ. ಬಸವನ ಕಾಟ ತಾಳಲಾರದೆ ಒಂದು ದಿನ ರೈತರು ಆ ಬಸವನ ಬೆನ್ನಟ್ಟಿ ಹೋದರಂತೆ . ಆಗ ಬಸವ ಈಗ ಗುಡಿ ಇರುವ ಸ್ಥಳದಲ್ಲಿ ಬಂದು ನಿಂತು ಕಲ್ಲಾದನಂತೆ . ರೈತರಿಗೆ ತಾವು ಮಾಡಿದ ತಪ್ಪಿನ ಅರಿವಾಯಿತು. ಶಿವನ ವಾಹನ ನಂದಿ (ಬಸವ) ತಾನೇ ಸ್ವತಃ ಕಡಲೆ ಕಾಯಿ ತಿನ್ನಲು ಬಂದರೂ ನಾವು ಹೊಡೆದು ಓಡಿಸಿದೆವಲ್ಲ ಎಂದು ಮರುಗಿದರಂತೆ . ಅದಕ್ಕಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತತ್‌ಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಬಸವಣ್ಣನಿಗೆ ಅರ್ಪಿಸಲು ಇಲ್ಲಿ ಕಡಲೆ ಕಾಯಿ ಪರಿಷೆ (ಜಾತ್ರೆ) ನಡೆಸುತ್ತಾರೆ. ಕಂಡೆಯಾ, ದಿಸ್‌ ಈಸ್‌ ರಿಯಲ್‌ ಇಂಡಿಯಾ .

ಪ್ರತಿವರ್ಷವೂ ಕಾರ್ತೀಕ ಮಾಸದ ಕಡೆ ಸೋಮವಾರದಿಂದ ಬಸವನಗುಡಿ ಕಡಲೇ ಕಾಯಿ ಜಾತ್ರೆ ಆರಂಭವಾಗುತ್ತದೆ. ಮುಖ್ಯವಾದ ಜಾತ್ರೆ ನಡೆಯುವುದು ಮಂಗಳವಾರವೇ. ಈ ಎರಡೂ ದಿನ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು, ರೈತರು ಬಂದು ಕಡಲೇಕಾಯಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹರಕೆ ಹೊತ್ತವರು ಭಕ್ತಾದಿಗಳಿಗೆ ನೀರು ಮಜ್ಜಿಗೆ, ಪಾನಕ, ಕೋಸುಂಬರಿ ಸಮಾರಾಧನೆಯನ್ನೂ ನಡೆಸುತ್ತಾರೆ.

ಭಕ್ತರೆಲ್ಲಾ ಬಂದು ಕಡಲೇ ಕಾಯಿ ತಿಂದರೆ, ಈ ಬಸವನಿಗೆ ತೃಪ್ತಿ ಆಗುವುದೆಂದು ಪ್ರತೀತಿ. ಭಕ್ತರು ಕಡಲೇ ಕಾಯಿ ತಿಂದು ಎಸೆವ ಸಿಪ್ಪೆಯನ್ನು ರಾತ್ರಿಯ ವೇಳೆ ಬಂದು ಬಸವ ಭಕ್ಷಿಸುತ್ತಾನೆ ಎಂಬ ನಂಬಿಕೆಯೂ ಕೆಲವರಲ್ಲಿದೆ. ಬ್ಯೂಗಲ್‌ ರಾಕ್‌ ಉದ್ಯಾನ ಪ್ರದೇಶದಲ್ಲಿರುವ ಇಲ್ಲಿನ ಬಸವನ ದೇಗುಲದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ಮೂರ್ತಿಯಿದೆ. ಮಾಗಡಿ ಕೆಂಪೇಗೌಡ ಭೂಪಾಲರು ಕಟ್ಟಿಸಿದ ಇತಿಹಾಸ ಪ್ರಸಿದ್ಧ ದೇವಾಲಯವೂ ಇದೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಬೆಂಗಳೂರು ಪೇಟೆಯ ದೊಡ್ಡ ಗಣಪನ ಗುಡಿಯೂ ಇದೆ.

ಸಂಜೆಯ ವೇಳೆ ಪರಿಷೆಯ ನೋಡುವುದೇ ಒಂದು ಆನಂದ. ಗಣಪನ ಹಾಗೂ ಬಸವಣ್ಣನ ಕಾಣಲು ನೂರಾರು ಜನರಿರುವ ಕ್ಯೂನಲ್ಲಿ ನಿಂತು, ಕಡಲೇಪುರಿ, ಕಡಲೇಕಾಯಿ ತಿನ್ನುತ್ತಾ ಇದ್ದರೆ, ಟೈಮ್‌ ಹೋಗುವುದೇ ತಿಳಿಯುವುದಿಲ್ಲ. ಬಣ್ಣ ಬಣ್ಣದ ಬಲೂನ್‌ಗಳು, ಕೊಡಿಸಮ್ಮ ಕೊಡಿಸಮ್ಮ ಎಂದು ಅಳುವ ಮಕ್ಕಳು, ವ್ಯಾಪಾರಿಗಳ ಕೂಗಾಟ, ಜನರ ಮಾತಿನ ಗದ್ದಲ, ದೇಗುಲದ ಗಂಟೆಯ ನಿನಾದ, ಗಿಜಿ ಗುಟ್ಟುವ ಜನ ಸಂದಣಿ, ಹಿತವಾಗಿ ಬೀಸುವ ಕಾರ್ತೀಕ ಮಾರುತ ನಿಮ್ಮನ್ನು ಹೊಸ ಲೋಕಕ್ಕೆ , ತಪ್ಪಾಯಿತು ಕ್ಷಮಿಸಿ ಹಳೆಯ ಲೋಕಕ್ಕೆ ಕೊಂಡೊಯ್ಯುತ್ತದೆ. ನೀವು ಬೆಂಗಳೂರಿನಲ್ಲಿದ್ದರೆ, ಬಿಡುವು ಮಾಡಿಕೊಂಡು ಬುಲ್‌ ಟೆಂಪಲ್‌ ರಸ್ತೆಯ ಹಾದಿಗುಂಟ ಬನ್ನಿ, ಒಂದು ಪಾವು ಕಡಲೆಕಾಯಿ ಕೊಂಡು ಚಟಪಟ ಸುಲಿದು ತಿನ್ನುತ್ತಾ ಹೆಜ್ಜೆ ಹಾಕಿ. ಆ ಮಜಾನೇ ಬೇರೆ.

ಮುಖಪುಟ / ನೋಡು ಬಾ ನಮ್ಮೂರ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X