ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಣವೇ ಮಹಾನವಮಿ

By Staff
|
Google Oneindia Kannada News

ಬಿಜಾಪುರ : ರಾಜ್ಯವೆಲ್ಲಾ ಶನಿವಾರ ಮಹಾನವಮಿಯ ಆಯುಧ ಪೂಜೆಯ ಸಂಭ್ರಮದಲ್ಲಿದ್ದರೆ, ಬಿಜಾಪುರ ಜಿಲ್ಲೆಯ ಮದ್ದೇ ಬಿಹಾಳ ತಾಲೂಕಿನ ಮುದೂರು ಶೋಕ ಸಾಗರದಲ್ಲಿ ಮುಳುಗಿತ್ತು. ದೇಶದ ಗಡಿ ಕಾಯಲು ತಮ್ಮೂರಿನಿಂದ ಹೋಗಿದ್ದ ವೀರಯೋಧ ಸಣ್ಣ ತಮ್ಮಪ್ಪ ಸಂಗಪ್ಪ ಬಸಲದಿನ್ನಿ ಶವವಾಗಿ ಬಂದನೆಂಬುದನ್ನೂ ಊಹಿಸಿಕೊಳ್ಳುವುದೂ ಊರಿನವರಿಗೆ ಕಷ್ಟವಾಗಿತ್ತು.

ಶ್ರೀನಗರದಲ್ಲಿ ಉಗ್ರಗಾಮಿಗಳ ನೆಲಬಾಂಬ್‌ ದಾಳಿಗೆ ಬಲಿಯಾದ ಸಂಗಪ್ಪ ಗಡಿ ಭದ್ರತಾ ಪಡೆ ಸೇರಿದ್ದು, 1993ರಲ್ಲಿ. ಒಂದು ವರ್ಷದ ಹಿಂದಷ್ಟೇ ಸಂಗಪ್ಪ ಮದುವೆಯಾಗಿದ್ದ. ಶ್ರೀನಗರದಲ್ಲಿ ಉಗ್ರರು ಹೂತಿಟ್ಟಿದ್ದ ನೆಲಬಾಂಬ್‌ಗಳ ಪತ್ತೆಗೆ ಹೊರಟ 25 ಜನ ವೀರ ಯೋಧರ ತಂಡದಲ್ಲಿ ಸಂಗಪ್ಪನೂ ಒಬ್ಬನಾಗಿದ್ದ. ಬಾಂಬ್‌ಗಳನ್ನು ಪತ್ತೆ ಹಚ್ಚಿ ನೂರಾರು ಜನರನ್ನು ಬಲಿತೆಗೆದುಕೊಳ್ಳಲು ಉಗ್ರರು ಹಾಕಿದ್ದ ಯೋಜನೆಯನ್ನು ಬುಡಸಹಿತ ಕಿತ್ತೊಗೆದ ಈ ವೀರ ಯೋಧ ಕಾರ್ಯಾಚರಣೆಯಿಂದ ಹಿಂತಿರುಗುವಾಗ ಸಂಭವಿಸಿದ ನೆಲಬಾಂಬ್‌ ಸ್ಫೋಟಕ್ಕೆ ತಾನೇ ಬಲಿಯಾದ.

ಈ ವೀರಯೋಧನ ಅಂತ್ಯಸಂಸ್ಕಾರ ಆತನ ಸ್ವಗ್ರಾಮವಾದ ಮುದೂರಿನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ ನೆರವೇರಿತು. ಶಾಸಕರಾದ ನಾಡಗೌಡ, ಸಂಸದ ಬಸನಗೌಡ ಪಾಟೀಲ್‌ಯತ್ನಾಳ್‌, ಜಿಲ್ಲೆಯ ಗಣ್ಯರು, ಸಾವಿರಾರು ಸಂಖ್ಯೆಯ ದೇಶಾಭಿಮಾನಿಗಳು, ಹಿರಿಯ ಅಧಿಕಾರಿಗಳು, ನಾಗರಿಕರು ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಯೋಧನಿಗೆ ವೀರ ಸ್ವರ್ಗ ದೊರಕಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಒಂದು ಲಕ್ಷರು ಪರಿಹಾರ : ದೇಶ ರಕ್ಷಣೆಯ ಕಾಯಕದಲ್ಲಿ ಅಸುನೀಗಿದ ಈ ವೀರ ಯೋಧನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಒಂದು ಲಕ್ಷ ರುಪಾಯಿ ಪರಿಹಾರ ಘೋಷಿಸಿ ಮುಖ್ಯಮಂತ್ರಿಗಳು ಶೋಕ ಸಂದೇಶ ಕಳುಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಶಪ್ಪನವರ್‌ ತಿಳಿಸಿದರು. ಶಾಸಕ ನೌಡಗೌಡರು ತಮ್ಮ ಒಂದು ತಿಂಗಳ ವೇತನವನ್ನು ಅಗಲಿದ ಯೋಧನ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದರು.

ಸ್ಮಾರಕ : ಸ್ಥಳೀಯ ಪುರಸಭೆಯಿಂದ 10 ಸಾವಿರ ರುಪಾಯಿ ಪರಿಹಾರ ದೊರಕಿಸಿಕೊಡುವುದಾಗಿಯೂ ತಿಳಿಸಿದ ಶಾಸಕರು, ಮುದ್ದೇಬಿಹಾಳದಲ್ಲಿ ತಮ್ಮಪ್ಪ ಸಂಗಪ್ಪ ಬಿಸಲದಿನ್ನಿ ಅವರ ಹೆಸರಿನಲ್ಲಿ ಸ್ಮಾರಕ ಒಂದನ್ನು ನಿರ್ಮಿಸುವ ಇಂಗಿತವನ್ನೂ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X