• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳಿಗೆ ಕತೆಯೆಂದರೆ ಪಂಚಪ್ರಾಣ.

By Super
|

ನನ್ನ ಹೆಸರು ಗಣೇಶ. ನನ್ನನ್ನು ನೂರಾರು ಹೆಸರಿನಿಂದ ಜನ ಕರೆಯುತ್ತಾರೆ. ಗಣೇಶ, ಶಿವಸುತ, ಗಜಾನನ, ವಿನಾಯಕ, ವಿಘ್ನೕಶ್ವರ, ಗಜಮುಖ, ಬೆನಕ, ವಕ್ರತುಂಡ, ಮಹಾಕಾಯ, ಲಂಬೋದರ, ವಿಘ್ನರಾಜ, ಗಣಪತಿ, ಗಣಾಧೀಶ, ಏಕದಂತ .....ಹೀಗೆ ನನ್ನ ಹೆಸರಿನ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಮನುಷ್ಯ ಶರೀರ, ಆನೆಯ ಮುಖ ಹೊತ್ತ ನನ್ನನ್ನು ಕಂಡು ನಕ್ಕವರೂ ಇದ್ದಾರೆ. ನಕ್ಕ ತಪ್ಪಿಗೆ ಶಾಪವನ್ನೂ ಅನುಭವಿಸುತ್ತಿದ್ದಾರೆ. ನನ್ನ ಹುಟ್ಟಿನ ಬಗ್ಗೆ ನಾನಿಂದು ನಿಮಗೆ ಕತೆ ಹೇಳುತ್ತೇನೆ. ಭಕ್ತಿ ಭಾವದಿಂದ ಕೇಳಿ.

ಒಂದು ದಿನ ನನ್ನ ಅಮ್ಮ, ಪಾರ್ವತಿ ಸ್ನಾನಕ್ಕೆ ಅಣಿಯಾಗಿದ್ದಳು. ಕೈಲಾಸದಲ್ಲಿ ಆಗ ಯಾರೂ ಇರಲಿಲ್ಲ. ಪರಶಿವನೂ ಹೊರಗೆ ಎಲ್ಲೋ ಹೋಗಿದ್ದ. ಶಿವಗಣಗಳಾರೂ ಅಲ್ಲಿರಲಿಲ್ಲ. ಬಾಗಿಲು ಕಾಯಲು ಯಾರೂ ಇಲ್ಲದಿದ್ದಾಗ ಪಾರ್ವತಿ ಮಣ್ಣಿನಲ್ಲಿ ನಿಮ್ಮಂತೆಯೇ ಇರುವ ಒಂದು ಸುಂದರ ಬಾಲಕನ ಬೊಂಬೆ ಮಾಡಿದಳು (ಕೆಲವರು ಪಾರ್ವತಿ ತನ್ನ ಬೆವರ ಹನಿಯಿಂದ ಬೊಂಬೆ ಮಾಡಿದಳು ಎಂದೂ ಹೇಳುತ್ತಾರೆ) ಅದಕ್ಕೆ ತನ್ನ ದೈವಶಕ್ತಿಯಿಂದ ಜೀವ ನೀಡಿದಳು. ಆಗ ಜೀವತಳೆದ ಬಾಲಕನೇ ನಾನು.

ಬಾಲಕನಾಗಿ ಎದ್ದು ನಿಂತ ನನಗೆ ಅಮ್ಮ ಹೇಳಿದಳು. ಮಗು ನಾನು ಸ್ನಾನಕ್ಕೆ ಹೋಗುತ್ತೇನೆ. ಯಾರೇ ಬಂದರೂ ಒಳಗೆ ಬಿಡಬೇಡ. ಜಾಗರೂಕತೆಯಿಂದ ಬಾಗಿಲನ್ನು ಕಾಯುತ್ತಿರು ಎಂದು. ಅಮ್ಮನ ಆದೇಶಕ್ಕೆ ನಾನು ತಲೆ ಬಾಗಿದೆ. ಬಾಗಿಲ ಬಳಿ ದಂಡವೊಂದನ್ನು ಹಿಡಿದು ಕಾವಲುಗಾರನಾಗಿ ನಿಂತೆ. ಹೊರಗೆ ಹೋಗಿದ್ದ ಶಿವ ಆ ವೇಳೆಗೆ ಕೈಲಾಸಕ್ಕೆ ಬಂದ. ಒಳಗೆ ಹೋಗಲು ಪ್ರಯತ್ನಿಸಿದ. ಶಿವೆಯ ಶಕ್ತಿಯಿಂದ ಹುಟ್ಟಿದ್ದ ನನಗೆ ಶಿವನಾರೆಂದು ಗೊತ್ತೇ ಇರಲಿಲ್ಲ. ಏಕೆಂದರೆ ನಾನು ಹುಟ್ಟಿದ್ದೇ ಅವತ್ತೇ ತಾನೆ.

ಶಿವ ಕೇಳಿದ ಯಾರು ಮಗು ನೀನು. ನನ್ನನ್ನೇಕೆ ಬಾಗಿಲ ಬಳಿ ತಡೆಯುತ್ತಿದ್ದೀಯಾ ? ನಾನು ಹೇಳಿದೆ ನಾನು ಪಾರ್ವತಿ ತನಯ. ಅಮ್ಮನ ಆಣತಿಯಂತೆ ಬಾಗಿಲು ಕಾಯುತ್ತಿದ್ದೇನೆ. ನಾನು ಪಾರ್ವತಿಯ ಪತಿ, ನನ್ನನ್ನು ಒಳಗೆ ಬಿಡಬಹುದು ಬಿಡು ಎಂದು ಶಿವ ಒಳಗೆ ಹೋಗಲು ಸಿದ್ಧನಾದ. ತಾಯಿ ಯಾರನ್ನೂ ಬಿಡಬೇಡ ಎಂದಿದ್ದಾಳೆ ನಾನು ಬಿಡಲಾರೆ ಎಂದು ಪಟ್ಟು ಹಿಡಿದೆ. ಶಿವನಿಗೆ ಕೋಪ ಬಂತು. ತನ್ನ ಎಲ್ಲ ಗಣಗಳನ್ನೂ ಕರೆದು ನನ್ನನ್ನು ಕೈಲಾಸದಿಂದ ಓಡಿಸಿ ಎಂದು ಅಪ್ಪಣೆ ಕೊಟ್ಟ.

ಶಿವಗಣಗಳೆಲ್ಲ ಒಟ್ಟಾಗಿ ನನ್ನ ಮೇಲೆ ಯುದ್ಧಕ್ಕೆ ನಿಂತರು. ಲೋಕ ಮಾತೆಯಾದ ಪಾರ್ವತಿಯ ಶಕ್ತಿಯಿಂದ ಹುಟ್ಟಿದ ನನಗೆ ಗಣಗಳು ಯಾವ ಮಹಾ ಹೇಳಿ. ಎಲ್ಲರನ್ನೂ ಹೆದರಿ ಹಿಮ್ಮೆಟ್ಟುವಂತೆ ಮಾಡಿದೆ. ಶಿವನಿಗೆ ಒಂದೆಡೆ ಆಶ್ಚರ್ಯ, ಮತ್ತೊಂದೆಡೆ ಆಕ್ರೋಶ. ನನ್ನಲ್ಲಿದ್ದ ಅದ್ಭುತ ಶಕ್ತಿಯ ಕಂಡು ಅವನಿಗೂ ಆಶ್ಚರ್ಯವಾಯಿತು. ನನ್ನ ಮನವೊಲಿಸಲು ಪ್ರಯತ್ನಿಸಿದ. ನಾನು ತಾಯಿಯ ಆಜ್ಞೆಯ ಹೊರತಾಗಿ ಮತ್ತೇನನ್ನೂ ಕೇಳಲು ಸಿದ್ಧನಿರಲಿಲ್ಲ. ಶಿವನನ್ನು ಬಾಗಿಲ ಬಳಿ ತಡೆದು ನಿಲ್ಲಿಸಿದೆ.

ಕೋಪಗೊಂಡ ಶಿವ ತನ್ನ ತ್ರಿಶೂಲದಿಂದ ನನ್ನ ತಲೆಯನ್ನೇ ಕತ್ತರಿಸಿದ. ಅಷ್ಟೊತ್ತಿಗೆ ಸ್ನಾನ ಮಾಡಿ, ಹೊರಗೆ ಬಂದ ನಮ್ಮ ಅಮ್ಮ, ರುಂಡ - ಮುಂಡ ಬೇರೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನನ್ನನ್ನು ನೋಡಿ ಛೀರಿದಳು. ತಾಯಿ ಕರುಳು ಚುರ್‌ ಎಂದಿತು. ಅಳುತ್ತಾ... ನನ್ನ ಮಗನನ್ನು ಕೊಂದವರು ಯಾರು ಎಂದು ಪ್ರಶ್ನಿಸಿದಳು. ಶಾಂತನಾಗಿದ್ದ ಶಿವನಿಗೆ ಪರಿಸ್ಥಿತಿಯ ಅರಿವಾಯಿತು. ತನ್ನ ಸತಿ ಅರ್ಥಾತ್‌ ನಮ್ಮ ಅಮ್ಮ ಪಾರ್ವತಿಯನ್ನು ಸಂತೈಸಲು ನನಗೆ ಮರು ಜೀವ ನೀಡುವುದಾಗಿ ಹೇಳಿದ.

ತನ್ನ ಗಣಗಳನ್ನೆಲ್ಲಾ ಕರೆದು ಉತ್ತರಕ್ಕೆ ತಲೆಹಾಕಿ ಮಲಗಿರುವ ಜೀವಿಯ ತಲೆ ಕತ್ತರಿಸಿ ತರುವಂತೆ ಆಜ್ಞೆ ಮಾಡಿದ. ತ್ರಿಭುವನಗಳನ್ನೂ ಹುಡುಕಿದ ಶಿವಗಣ ಕೊನೆಗೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದ್ದ ಆನೆಯ ತಲೆಯಾಂದನ್ನು ಕತ್ತರಿಸಿ ತಂದರು. ಶಿವ ನನ್ನ ಶರೀರಕ್ಕೆ ಆನೆಯ ತಲೆಯನ್ನು ಇಟ್ಟು, ನನಗೆ ಮರು ಜೀವ ನೀಡಿದ. ಹೀಗೆ ತಾಯಿ ಪಾರ್ವತಿ, ತಂದೆ ಪರಶಿವರಿಂದ ಜನ್ಮ ಪಡೆದ ನಾನು, ಇಬ್ಬರ ಮಗನಾಗಿ ಮರುಹುಟ್ಟು ಪಡೆದೆ. ಆನೆಯ ತಲೆ ಇದ್ದುದರಿಂದ ನನಗೆ ಗಜಾನನ, ಗಜಮುಖ, ಕರಿವದನ, ಕರಿಮುಖ ಎಂದು ಹೆಸರು ಬಂತು.

ಗಣಗಳನ್ನೇ ಸೋಲಿಸಿದ ನನಗೆ ಶಿವ ಎಲ್ಲ ಗಣಗಳ ಒಡೆಯನನ್ನಾಗಿ ಮಾಡಿದ. ಸುಂದರ ಬಾಲಕನಾಗಿದ್ದ ನಾನು ಆನೆ ತಲೆ ಹೊತ್ತು ಎದ್ದಾಗ ತಾಯಿಗೆ ಅಸಮಾಧಾನ ಆಯಿತು. ಶಿವನು ಪಾರ್ವತಿಯ ಮನದಂತರಾಳ ತಿಳಿದು, ಅದನ್ನು ಶಮನಗೊಳಿಸಲು, ವಿಶ್ವದಲ್ಲಿ ನನಗೇ ಪ್ರಥಮ ಪೂಜೆ ಸಲ್ಲಬೇಕು ಎಂದು ವರನೀಡಿದ. ಅದಕ್ಕೇ ಎಲ್ಲರೂ ಶುಭಕಾರ್ಯ ಮಾಡುವಾಗ ಮೊದಲು ನನ್ನನ್ನೇ ಪೂಜಿಸುತ್ತಾರೆ. ಆನಂತರ ಇತರರರನ್ನು. ಹೀಗಾಗಿ ನಾನು ಮೊದಲ ವಂದಿಪನಾದೆ. ಗಣಗಳ ಒಡೆಯನಾದ ನನ್ನನ್ನು ಗಣಪತಿ ಎಂದೂ ಕರೆದರು.

ನನಗೆ ಪ್ರಥಮ ಪೂಜೆ ಸಲ್ಲಿಸದವರು ಕಷ್ಟಕ್ಕೂ ಒಳಗಾದರು. ನಿಮಗೆ ಗೊತ್ತಲ್ಲ. ನನ್ನ ತಂದೆಯನ್ನು ಮೆಚ್ಚಿಸಿ ಶಿವನ ಆತ್ಮಲಿಂಗವನ್ನೇ ಪಡೆದ ರಾವಣ, ಮೊದಲು ನನ್ನನ್ನು ಪೂಜಿಸದ ಕಾರಣ, ನಾನು ಅವರು ಲಂಕೆಗೊ ಒಯ್ಯುತ್ತಿದ್ದ ಆತ್ಮಲಿಂಗವನ್ನು ಗೋಕರ್ಣದಲ್ಲೇ ಧರೆ ಪಾಲು ಮಾಡಿದೆ. ಅದಕ್ಕೇ ಎಲ್ಲರೂ ನನಗೆ ಮೊದಲು ಪೂಜಿಸುತ್ತಾರೆ. ಇದಿಷ್ಟೂ ನನ್ನ ಹುಟ್ಟಿನ ಕತೆ. ಭಕ್ತರು ಹಾಗೂ ಕಡುಬು ನನಗಾಗಿ ಕಾಯುತ್ತಿದೆ ಬರುತ್ತೇನೆ......

English summary
Ganesha the story teller
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X