ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿ: ರಾಜ್ಯ ಸರ್ಕಾರಗಳ ನಿಲುವು ಯಾಚನೆ
ನವದೆಹಲಿ : 1956ರ ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗೆ ತಮ್ಮ ಖಚಿತ ನಿಲುವನ್ನು ವ್ಯಕ್ತಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಭಾರತದ ಕಾನೂನು ಆಯೋಗ ಈ ವರ್ಷದ ಮೇ ತಿಂಗಳಲ್ಲಿ ‘ಮಹಿಳೆಯ ಆಸ್ತಿ ಹಕ್ಕು- ಸುಧಾರಣೆಯ ಪ್ರಸ್ತಾವನೆಗಳು’ ಎಂಬ ತನ್ನ 174ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಹಿಂದೂ ಕಾನೂನಿನ ಅನ್ವಯ ಅದು ಈ ವರದಿಯನ್ನು ಸಿದ್ಧ ಪಡಿಸಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆ- 1956ರಲ್ಲಿ ಕೆಲವು ತಿದ್ದುಪಡಿಗಳನ್ನು ತರಬೇಕೆಂದು ಕಾನೂನು ಆಯೋಗ ಶಿಫಾರಸು ಮಾಡಿದೆ. ಅವುಗಳೆಂದರೆ- ಹಿಂದೂ ಅವಿಭಕ್ತ ಕುಟುಂಬದ ಮಿತಾಕ್ಷರ ಸಹಭಾಗಿತ್ವ ಆಸ್ತಿ ಮೇಲೆ ಗಂಡು ಮಕ್ಕಳಿಗೆ ಸಮಾನ ಹಕ್ಕು ಇರುವಂತೆ ಹೆಣ್ಣು ಮಕ್ಕಳಿಗೂ ಹಕ್ಕು ನೀಡಬೇಕು. ಆಸ್ತಿ ಭಾಗವಾದಲ್ಲಿ ತನ್ನ ಪಾಲನ್ನು ಪಡೆಯುವ, ಆಸ್ತಿಯ ಪುರುಷ ಸಹಭಾಗಿ ಮೃತನಾದಲ್ಲಿ ಆತನ ಆಸ್ತಿಯ ಉಸ್ತುವಾರಿಕೆ ಹಾಗೂ ಮನೆ ಇತ್ಯಾದಿ ಭಾಗವಾದಲ್ಲಿ ಹೆಣ್ಣು ಮಕ್ಕಳಿಗೂ ಪಾಲು.
ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ, ಕಾಯ್ದೆಯಲ್ಲಿ ಆದಷ್ಟು ಬೇಗ ತಿದ್ದುಪಡಿ ತರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ವ್ಯವಹಾರಗಳ ಮೇಲಿನ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಕಾನೂನು ಸಚಿವಾಲಯವೂ ಸಂಬಂಧಪಟ್ಟ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ತಿದ್ದುಪಡಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೋರಿದೆ.
(ಯುಎನ್‌ಐ)












Click it and Unblock the Notifications